* 12-18 ವಯಸ್ಸಿನವರಿಗೆ ‘ಝೈಕೋವ್‌-ಡಿ’ ವ್ಯಾಕ್ಸಿನ್‌* ಝೈಡಸ್‌ ಕ್ಯಾಡಿಲಾ ಪ್ರಯೋಗ ಮುಕ್ತಾಯ* ಅನುಮತಿ ಬಳಿಕ ಲಸಿಕೆ ನೀಡಿಕೆ ಶುರು* ಸುಪ್ರೀಂ ಕೋರ್ಟ್‌ಗೆ ಕೇಂದ್ರ ಹೇಳಿಕೆ* ಬೆಳಗಾವಿಯಲ್ಲೂ ಇದರ ಟ್ರಯಲ್‌ ನಡೆದಿತ್ತು

ನವದೆಹಲಿ(ಜೂ.27): ಕೊರೋನಾ ವೈರಸ್‌ ತಡೆಗೆ ಭಾರತೀಯ ಔಷಧ ಕಂಪನಿಯಾದ ಝೈಡಸ್‌ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ‘ಝೈಕೋವ್‌-ಡಿ’ ಲಸಿಕೆಯನ್ನು 12ರಿಂದ 18 ವರ್ಷದ ವಯಸ್ಸಿನವರಿಗೆ ಶೀಘ್ರ ನೀಡಲು ಆರಂಭಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಶನಿವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೋರ್ಟ್‌ ನಿರ್ದೇಶನದ ಅನುಸಾರ 375 ಪುಟದ ಪ್ರಮಾಣಪತ್ರ ಸಲ್ಲಿಸಿರುವ ಕೇಂದ್ರ, ‘ಝೈಡಸ್‌ ಕ್ಯಾಡಿಲಾ 12ರಿಂದ 18 ವರ್ಷದ ಮಕ್ಕಳ ಮೇಲಿನ ಕ್ಲಿನಿಕಲ್‌ ಪ್ರಯೋಗ ಮುಗಿಸಿದೆ. ಶಾಸನಬದ್ಧ ಅನುಮತಿ ಸಿಕ್ಕ ಬಳಿಕ ಭವಿಷ್ಯದಲ್ಲಿ 12ರಿಂದ 18 ವರ್ಷ ವಯಸ್ಸಿನವರಿಗೆ ಈ ಲಸಿಕೆ ನೀಡಲಾಗುತ್ತದೆ’ ಎಂದು ಹೇಳಿದೆ.

"

ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌ಗೆ ಕೂಡ 2ರಿಂದ 18 ವರ್ಷ ವಯಸ್ಸಿನವರ ಮೇಲೆ ಲಸಿಕಾ ಪ್ರಯೋಗಕ್ಕೆ ಮೇ 12ರಂದು ಅನುಮತಿ ನೀಡಲಾಗಿದೆ ಎಂದು ಅದು ಹೇಳಿದೆ.

18 ವರ್ಷ ಮೇಲ್ಪಟ್ಟು 93-94 ಕೋಟಿ ಜನರಿದ್ದಾರೆ. ಇವರಿಗೆ ಲಸಿಕೆ ನೀಡಲು 186.6 ಕೋಟಿ ಡೋಸ್‌ ಬೇಕಾಗುತ್ತವೆ ಎಂದಿರುವ ಸರ್ಕಾರ, ನಕಲಿ ಲಸಿಕೆ ಕ್ಯಾಂಪ್‌ ನಡೆಸುವವರ ಮೇಲೆ ಕ್ರಮಕ್ಕೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಬೆಳಗಾವಿಯಲ್ಲಿ ನಡೆದಿತ್ತು ಟ್ರಯಲ್‌:

ಝೈಡಸ್‌ ಕ್ಯಾಡಿಲಾದ ಝೈಕೋವ್‌ ಡಿ ಲಸಿಕೆಯ ಪ್ರಯೋಗವನ್ನು ಬೆಳಗಾವಿಯ ಜೀವನ್‌ ರೇಖಾ ಆಸ್ಪತ್ರೆಯಲ್ಲಿ 12ರಿಂದ 18 ವರ್ಷದ ಮಕ್ಕಳ ಮೇಲೆ ನಡೆಸಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ.