ಮಹಡಿ ಮನೆಯಿಂದ ಕೆಳಗೆ ಬರಲು ನಿರಾಕರಿಸಿದ ಗ್ರಾಹಕರ ಆಹಾರವನ್ನು ಡೆಲಿವರಿ ಬಾಯ್ ಸೇವಿಸಿದ್ದಾರೆ. ಬೈಕ್ ಕಳ್ಳತನವಾಗುವ ಭಯದಿಂದ ಮಹಡಿಗೆ ಹೋಗಲು ನಿರಾಕರಿಸಿದಾಗ ಗ್ರಾಹಕರು ಆರ್ಡರ್ ಕ್ಯಾನ್ಸಲ್ ಮಾಡಿದ್ದರು. ಬಳಿಕ ಡೆಲಿವರಿ ಬಾಯ್ ಆಹಾರ ಸೇವಿಸುವ ವಿಡಿಯೋ ಮಾಡಿ ಹಂಚಿಕೊಂಡಿದ್ದು, ಇದು ಚರ್ಚೆಗೆ ಕಾರಣವಾಗಿದೆ.
ನವದೆಹಲಿ: ಮಹಾನಗರಗಳಲ್ಲಿ ರುಚಿಯಾದ ಆಹಾರ ಬೇಕು ಅನ್ನಿಸಿದ್ರೆ ವಿವಿಧ ಆಪ್ ಮೂಲಕ ಆರ್ಡರ್ ಮಾಡಬಹುದು. ಸ್ವಿಗ್ಗಿ ಮತ್ತು ಝೊಮ್ಯಾಟೊ ಎರಡು ಆಪ್‌ಗಳು ಆಹಾರ ಸರಬರಾಜು ಮಾಡುವ ಪ್ರಮುಖ ಆಪ್‌ಗಳಾಗಿವೆ. ನೀವು ಸೂಚಿಸಿದ ಸ್ಥಳ ಬರುತ್ತಿದ್ದಂತೆ ಡೆಲಿವರಿ ಬಾಯ್/ಗರ್ಲ್ ನಿಮಗೆ ಕರೆ ಮಾಡುತ್ತಾರೆ. ಗ್ರಾಹಕರು ಬಂದು ಆಹಾರ ತೆಗೆದುಕೊಂಡು ಹೋಗಬೇಕಾಗುತ್ತದೆ. ಕೆಲವೊಮ್ಮೆ ಗ್ರಾಹಕರು ಮಹಡಿ ಮನೆಗಳಲ್ಲಿದ್ದು, ಬಾಗಿಲಿನವರೆಗೂ ಬರುವಂತೆ ಸೂಚಿಸುತ್ತಾರೆ. ಕೆಲವೊಮ್ಮೆ ಈ ವಿಷಯವೇ ವಿವಾದಕ್ಕೆ ಕಾರಣವಾಗುತ್ತದೆ. ಇದೀಗ ಇಂತಹವುದೇ ಒಂದು ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಫುಡ್ ಆರ್ಡರ್ ಮಾಡಿದ ಗ್ರಾಹಕ ಮಹಡಿ ಮನೆಯಿಂದ ಕೆಳಗೆ ಬರದ ಹಿನ್ನೆಲೆ ಡೆಲಿವರಿ ಬಾಯ್ ತೆಗೆದುಕೊಂಡು ಬಂದಿದ್ದ ಆಹಾರವನ್ನು ಸೇವಿಸಿದ್ದಾರೆ. ಆಹಾರ ತಿಂದಿರೋದನ್ನು ವಿಡಿಯೋ ಮಾಡಿರುವ ಡೆಲಿವರಿ ಬಾಯ್ ಅಂಕುರ್ ಠಾಕೂರ್, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಏನಿದು ಗಲಾಟೆ? ಡೆಲಿವರಿ ಬಾಯ್ ಹೀಗೆ ಮಾಡಿದ್ಯಾಕೆ?
ಬೆಳಗಿನ ಜಾವ 2.30ಕ್ಕೆ ಗ್ರಾಹಕರೊಬ್ಬರು ಬಿರಿಯಾನಿ ಮತ್ತು ಗುಲಾಬ್ ಜಾಮೂನ್ ಆರ್ಡರ್ ಮಾಡಿದ್ದರು. ಚಳಿಯಲ್ಲಿ ಆರ್ಡರ್ ಪಿಕಪ್ ಮಾಡಿಕೊಂಡು ಗ್ರಾಹಕರಿರೋ ಸ್ಥಳಕ್ಕೆ ಅಂಕುರ್ ಠಾಕೂರ್ ಬಂದಿದ್ದಾರೆ. ಇಲ್ಲಿಗೆ ಬಂದು ಗ್ರಾಹಕರಿಗೆ ಕರೆ ಮಾಡಿದ್ರೆ ಮಹಡಿಗೆ ಬರುವಂತೆ ಸೂಚಿಸಿದ್ದಾರೆ. ರಾತ್ರಿಯಾಗಿದ್ದು ಬೈಕ್ ಕಳ್ಳತನವಾಗುವ ಸಾಧ್ಯತೆಗಳಿದ್ದು, ನೀವೇ ಕೆಳಗೆ ಬನ್ನಿ ಎಂದು ಅಂಕುರ್ ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಗ್ರಾಹಕ ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ.
ಅಂಕುರ್ ಠಾಕೂರ್ ವಿಡಿಯೋದಲ್ಲಿ ಹೇಳಿದ್ದೇನು?
ರಾತ್ರಿ 2.30 ಆಗಿದ್ದು, ಈ ಸಮಯದಲ್ಲಿಯೂ ಇವರಿಗಾಗಿ ಊಟ ತೆಗೆದುಕೊಂಡು ಬಂದಿದ್ದೇವೆ. ಇಷ್ಟು ಚಳಿಯಲ್ಲಿ ಬಂದಿರುವ ನಮಗೆ ಮನೆ ಬಾಗಿಲಿನವರೆಗೂ ಬರುವಂತೆ ಹೇಳುತ್ತಾರೆ. ಗ್ರಾಹಕ ಬಾಲ್ಕನಿಯಿಂದಲೇ ಗಲಾಟೆ ಮಾಡಿದ್ದಾರೆ. ಹಣ ಪಾವತಿ ಮಾಡಿರೋದ್ರಿಂದ, ನನ್ನ ಮನೆ ಬಾಗಿಲಿಗೆ ಫುಡ್ ತಂದುಕೊಡಬೇಕು ಅಂತಾ ಗ್ರಾಹಕ ಹೇಳ್ತಾರೆ. ಈ ಸಮಯದಲ್ಲಿ ಬೈಕ್ ಕೆಳಗೆ ಬಿಟ್ಟು ಹೋದರೆ ಯಾರಾದ್ರೂ ಕದ್ದೊಯ್ಯಬಹುದು ಅನ್ನೋ ಕಾರಣಕ್ಕೆ ಗ್ರಾಹಕರನ್ನು ಕೆಳಗೆ ಬರುವಂತೆ ಕೇಳಿದೆ. ಆದರೆ, ಅವರು ಒಪ್ಪಲಿಲ್ಲ.
ಇಷ್ಟು ದೂರದಿಂದ ಇವರಿಗಾಗಿ ನಾವು ಆಹಾರ ತೆಗೆದುಕೊಂಡು ಬಂದಾಗ ಗ್ರಾಹಕರು ಸಹ ನಮ್ಮೊಂದಿಗೆ ಸ್ವಲ್ಪ ಹೊಂದಿಕೊಳ್ಳಬೇಕು. ಅಂಕುರ್ ಎಷ್ಟೇ ಹೇಳಿದ್ರೂ ಗ್ರಾಹಕ ಕೆಳಗೆ ಇಳಿದು ಬರಲಿಲ್ಲ. ಇದೀಗ ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ. ಆದ್ದರಿಂದ ಈ ಆಹಾರ ನಾನೇ ತಿನ್ನುತ್ತೇನೆ ಎಂದು ಡಬ್ಬದಲ್ಲಿದ್ದ ಗುಲಾಬ್ ಜಾಮೂನ್ ಬಾಯಿಗೆ ಹಾಕಿಕೊಳ್ಳುತ್ತಾರೆ. ನಂತರ ಬಿರಿಯಾನಿ ಇದೆ, ಅದನ್ನು ಸಹ ತಿನ್ನುತ್ತೇನೆ ಎಂದು ಅಂಕುರ್ ಠಾಕೂರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸೈಕಲ್‌ನಲ್ಲಿ ಪಾರ್ಸೆಲ್ ತಂದ ಡೆಲಿವರಿ ಬಾಯ್‌ಗೆ ಗ್ರಾಹಕ ಮಾಡಿದ್ದೇನು? ನೆಟ್ಟಿಗರು ಭಾವುಕ
ಇಬ್ಬರಲ್ಲಿ ತಪ್ಪು ಯಾರದ್ದು? ನೆಟ್ಟಿಗರು ಹೇಳಿದ್ದೇನು?
ಅಂಕುರ್ ಠಾಕೂರ್ ಅವರ ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನವರು ಯುವಕ ಮಾಡಿದ್ದು ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದೇ ಸಮಯದಲ್ಲಿ ಡೋರ್‌ಸ್ಟೆಪ್ ಡೆಲಿವರಿಗೆ ಹಣ ಪಾವತಿಸಿದರೆ ಮನೆ ಬಾಗಿಲಿಗೆ ತಲುಪಿಸಬೇಕು, ಅದು ಸಾಧ್ಯವಾಗದಿದ್ದರೆ ಈ ಕೆಲಸ ಮಾಡಬಾರದು ಎಂದು ಅಂಕುರ್ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಕ್ಕದಲ್ಲಿಯೇ ಸ್ಟಾರ್ ನಟಿ ಬಂದ್ರೂ ಕಣ್ಣೆತ್ತಿ ನೋಡದ ಸ್ವಿಗ್ಗಿ ಬಾಯ್‌ಗೆ ಫಿದಾ ಆದ ಜನರು


