ಕಾಶ್ಮೀರದಲ್ಲಿ ಏಷ್ಯಾದ ಅತಿ ಉದ್ದ ಸುರಂಗ!

* ಜಗತ್ತಿನ ಅತಿ ಎತ್ತರದ 14.5 ಕಿಮೀ ಜೋಜಿಲಾ ಸುರಂಗ ಕಾಮಗಾರಿ ವೀಕ್ಷಿಸಿದ ಗಡ್ಕರಿ

* 11,578 ಅಡಿ ಎತ್ತರದಲ್ಲಿ ರಸ್ತೆ ನಿರ್ಮಾಣ

* ತಂತ್ರಜ್ಞಾನಕ್ಕೆ ಸವಾಲಾಗಿರುವ ರಸ್ತೆ 2023ರಲ್ಲಿ ಪೂರ್ಣ

* ಇದರಿಂದ ಶ್ರೀನಗರ-ಲೇಹ್‌ ನಡುವೆ ವರ್ಷಪೂರ್ತಿ ಸಂಪರ್ಕ

Zojila Pass Anurag Thakur reviews construction work of Asia longest tunnel pod

ವಿಜಯ್ ಮಲಗಿಹಾಳ

ಸೋನ್‌ಮಾರ್ಗ (ಸೆ.29): ಜಗತ್ತಿನ ಅತಿ ಎತ್ತರದ ಹಾಗೂ ಏಷ್ಯಾದ ಅತಿ ಉದ್ದದ ದ್ವಿಮುಖ ರಸ್ತೆಯ ಸುರಂಗ ಕಾಶ್ಮೀರ ಕಣಿವೆಯಲ್ಲಿ(Kashmir valley) ಉದ್ದೇಶಿತ ಅವಧಿಗೂ ಮುನ್ನವೇ 2023ರ ಡಿಸೆಂಬರ್‌ಗೆ ಪೂರ್ಣಗೊಳ್ಳುವ ವಿಶ್ವಾಸವನ್ನು ಕೇಂದ್ರ ರಸ್ತೆ ಸಂಪರ್ಕ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ(Nitin Gadkari) ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಕಣಿವೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಹಾಗೂ 14.5 ಕಿ.ಮೀ. ಉದ್ದವಿರುವ ಜೋಜಿಲಾ ಸುರಂಗ ರಸ್ತೆಯ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸುರಂಗ ರಸ್ತೆ ನಿರ್ಮಾಣದಿಂದ ಕಣಿವೆ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರಕಲಿದೆ. ಆ ಮೂಲಕ ಜಮ್ಮು ಮತ್ತು ಕಾಶ್ಮೀರ(Jammu Kashmir) ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

ಜೋಜಿಲಾ ಪಾಸ್‌(Zojila Pass) ದ್ವಿಮುಖ ಸುರಂಗ ಮಾರ್ಗ ನಿರ್ಮಾಣದಿಂದ ವರ್ಷದ 365 ದಿನವೂ ಲಡಾಖ್‌ ರಾಜಧಾನಿ ಲೇಹ್‌ ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರ ನಡುವಿನ ಸಂಪರ್ಕ ಸಾಧ್ಯವಾಗಲಿದೆ. ಇದರಿಂದ ಪ್ರಯಾಣ ವೆಚ್ಚದ ಜತೆಗೆ ಸಮಯದ ಮಿತವ್ಯಯ ಮತ್ತು ಸುರಕ್ಷಿತ ಪ್ರಯಾಣ ಸಾಧ್ಯವಾಗಲಿದೆ. ಅಲ್ಲದೆ, ಭಾರತೀಯ ಸೈನ್ಯದ ಮನೋಬಲ ಹೆಚ್ಚಿಸಲಿದೆ ಎಂದರು.

ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಅಭಿವೃದ್ಧಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹತ್ತು ಹಲವು ರಸ್ತೆ ಸಂಪರ್ಕ ಯೋಜನೆಗಳನ್ನು ಕೈಗೊಂಡಿದೆ. ಇದಕ್ಕಾಗಿ 1 ಲಕ್ಷ ಕೋಟಿ ರು.ಗೂ ಅಧಿಕ ಮೊತ್ತ ವೆಚ್ಚ ಮಾಡಲಾಗುತ್ತಿದೆ. ಇನ್ನೆರಡು ವರ್ಷಗಳಲ್ಲಿ ಇನ್ನೂ 1 ಲಕ್ಷ ಕೋಟಿ ರು. ರಸ್ತೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಜೋಜಿಲಾ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರ ಸಂಸ್ಥೆ ಹೈದ್ರಾಬಾದಿನ ಮೆಗಾ ಇಂಜಿನಿಯರಿಂಗ್‌ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ.ಗೆ 2027ರವರೆಗೆ ಅವಕಾಶ ಇದೆಯಾದರೂ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಅಂದರೆ ಡಿಸೆಂಬರ್‌ 2023ರೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದೇನೆ. ಇದರಿಂದ ನಮಗೂ ಚುನಾವಣೆಯಲ್ಲಿ ಅನುಕೂಲ ಆಗಬೇಕಲ್ಲವೆ ಎಂದು ಚಟಾಕಿ ಹಾರಿಸಿದರು.

ಮೆಗಾ ಇಂಜಿನಿಯರಿಂಗ್‌ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಿದೆ. ಕಾಮಗಾರಿ ಪ್ರಗತಿ ನನಗೆ ಸಂತೋಷ ತಂದಿದೆ ಎಂದು ಪ್ರಶಂಸಿಸಿದರು. ಕಾಮಗಾರಿಗೆ ಇರುವ ಅಡ್ಡಿ ಆತಂಕಗಳನ್ನು ಇಲಾಖೆ ತ್ವರಿತಗತಿಯಲ್ಲಿ ನಿವಾರಿಸಲಿದೆ ಎಂದೂ ಅವರು ಇದೇ ವೇಳೆ ಹೇಳಿದರು.

ಈ ವೇಳೆ ರಸ್ತೆ ಸಂಪರ್ಕ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್‌, ಮೆಗಾ ಕಂಪನಿ ಕಾರ್ಯಕಾರಿ ನಿರ್ದೇಶಕ ಪಿ.ವಿ.ಕೃಷ್ಣಾರೆಡ್ಡಿ, ನಿರ್ದೇಶಕ ಪಿ.ಸುಬ್ಬಯ್ಯ, ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜೋಜಿಲಾ ಸುರಂಗ ವಿಶೇಷತೆ

ಜೋಜಿಲ್ಲಾ ಪಾಸ್‌ ಸುರಂಗ ರಸ್ತೆ ವರ್ಷದ 365 ದಿನವೂ ಕಾಶ್ಮೀರದ ರಾಜಧಾನಿ ಶ್ರೀನಗರ ಮತ್ತು ಆ ಮೂಲಕ ಇಡೀ ದೇಶವನ್ನು ಲಡಾಖ್‌ ಪ್ರದೇಶಕ್ಕೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆ. ಈ ರಸ್ತೆ ಮಾರ್ಗವು ದೇಶದ ರಕ್ಷಣಾ ವಲಯ ಮತ್ತು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಹಿಮಪಾತದಂತಹ ಘಟನೆಗಳಿಂದ ಪ್ರಸ್ತುತ ಲಡಾಕ್‌ ಮತ್ತು ಕಾಶ್ಮೀರ ನಡುವೆ ರಸ್ತೆ ಸಂಚಾರ ಅಸಾಧ್ಯ. ಇದು ಈ ಪ್ರದೇಶದ ಆರ್ಥಿಕ ಬೆಳವಣಿಗೆ ಮೇಲೆ ಮಾರಕ ಪರಿಣಾಮ ಬೀರಿದೆ. ಹಿಮಪಾತ ಮತ್ತು ಆ ಕಾರಣದಿಂದ ವರ್ಷದಲ್ಲಿ ಲೇಹ್‌ ಮತ್ತು ಶ್ರೀನಗರ ನಡುವೆ ಐದು ತಿಂಗಳ ಕಾಲ ಮಾತ್ರ ರಸ್ತೆ ಸಂಪರ್ಕ ಇದೆ. ಇನ್ನುಳಿದ ಕಾಲ ಅಂದರೆ ನವೆಂಬರ್‌ನಿಂದ ಏಪ್ರಿಲ… ಅವಧಿಯಲ್ಲಿ ಲೇಹ್‌ ಸಂಪೂರ್ಣವಾಗಿ ಪ್ರಪಂಚದೊಂದಿಗಿನ ತನ್ನ ಸಂಪರ್ಕವನ್ನು ಕಡಿದುಕೊಳ್ಳುತ್ತಿದೆ.

ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಭಾರತೀಯ ಸೇನೆ ದೂರದ ಮಾರ್ಗಗಳ ಮೂಲಕ ಲೇಹ್‌ ತಲುಪುತ್ತಿದೆ. ಇದು ವೆಚ್ಚ ಹೆಚ್ಚಿಸುವ ಜತೆಗೆ ಈ ಮಾರ್ಗಗಳು ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ ಹಾದು ಹೋಗುತ್ತಿರುವುದು ಆತಂಕಕ್ಕೂ ಕಾರಣವಾಗಿದೆ. ಈ ಎಲ್ಲ ಕಾರಣಗಳಿಂದ ಕೇಂದ್ರ ಸರ್ಕಾರವು ಪ್ರತ್ಯೇಕ ಮಾರ್ಗ ಚಿಂತನೆ ನಡೆಸಿ ’ಜೋಜಿಲಾ ಸುರಂಗ ರಸ್ತೆ’ ನಿರ್ಮಾಣಕ್ಕೆ ಮುಂದಾಯಿತು.

ಕಾಶ್ಮೀರ ಮತ್ತು ಲಡಾಖ್‌ ನಡುವೆ ಹೆದ್ದಾರಿ ನಿರ್ಮಿಸಿ ಸಂಪರ್ಕ ಸಾಧಿಸುವ ಕೇಂದ್ರ ಸರ್ಕಾರದ ಚಿಂತನೆಗೆ ಪ್ರತಿಯಾಗಿ ಶ್ರೀನಗರದಿಂದ ಬಲ್ತಾಲ್‌ಗೆ ಹೆದ್ದಾರಿ ನಿರ್ಮಿಸುವ ಯೋಜನೆ ರೂಪುಗೊಂಡಿತು. ಹಿಮಾಲಯದ ತಪ್ಪಲಿನಲ್ಲಿನ ಅತ್ಯಂತ ಕಷ್ಟಕರ ಹವಾಮಾನದಲ್ಲಿ ಸುರಂಗ ರಸ್ತೆ ನಿರ್ಮಿಸುವುದು ಸವಾಲಿನ ಕೆಲಸವಾಗಿದ್ದು, ಈ ಯೋಜನೆ ಇಂತಹ ಕ್ಲಿಷ್ಟಭೌಗೋಳಿಕ ವಲಯದಲ್ಲಿ ನಿರ್ಮಾಣವಾಗುತ್ತಿರುವುದು ಇದೇ ಮೊದಲು. 11578 ಅಡಿ ಎತ್ತರದಲ್ಲಿ ರಸ್ತೆ ನಿರ್ಮಾಣ ನಡೆಯುತ್ತಿದೆ. ಈ ಜೋಜಿಲಾ ಪಾಸ್‌ ಸುರಂಗ ಮಾರ್ಗದಿಂದ ಉಭಯ ಕೇಂದ್ರಾಡಳಿತ ಪ್ರದೇಶಗಳ ನಡುವೆ ವರ್ಷ ಪೂರ್ತಿ ಸಂಪರ್ಕ ಸಾಧ್ಯವಾಗುವುದರ ಜತೆ ಜತೆಗೆ ಬಾಲ್ತಾಲ್‌ನಿಂದ ಮೀನಾ ಮಾರ್ಗ ನಡುವಿನ 40 ಕಿ.ಮೀ. ಅಂತರ ಕಡಿತಗೊಂಡು 13 ಕಿ.ಮೀ. ಆಗಲಿದೆ.

 

Latest Videos
Follow Us:
Download App:
  • android
  • ios