ದಕ್ಷಿಣ ಭಾರತದಲ್ಲೂ ಸಂಸತ್ ಅಧಿವೇಶನಕ್ಕೆ ವೈಎಸ್‌ಆರ್ ಸಂಸದನ ಆಗ್ರಹ
ದಕ್ಷಿಣ ಭಾರತದಲ್ಲಿ ಸಂಸತ್ ಅಧಿವೇಶನ ನಡೆಸಬೇಕೆಂದು ವೈಎಸ್ಆರ್ ಕಾಂಗ್ರೆಸ್ ಸಂಸದ ಮದ್ದಿಲ ಗುರುಮೂರ್ತಿ ಆಗ್ರಹಿಸಿದ್ದಾರೆ. ಆದರೆ, ಈ ಪ್ರಸ್ತಾಪಕ್ಕೆ ದಕ್ಷಿಣದ ಸಂಸದರಿಂದಲೇ ವಿರೋಧ ವ್ಯಕ್ತವಾಗಿದೆ.
ನವದೆಹಲಿ: ದಕ್ಷಿಣ ಭಾರತದಲ್ಲೂ ಸಂಸತ್ ಅಧಿವೇಶನ ನಡೆಸಬೇಕು ಎಂಬ ಕೂಗು ಕೇಳಿಬಂದಿದೆ. ಆಂಧ್ರಪ್ರ ದೇಶದ ವೈಎಸ್ಸಾರ್ ಕಾಂಗ್ರೆಸ್ ಸಂಸದ ಮದ್ದಿಲ ಗುರುಮೂರ್ತಿ ಈ ಬೇಡಿಕೆ ಇರಿ ಸಿದ್ದು, ವರ್ಷಕ್ಕೆ ಕನಿಷ್ಠ 2 ಅಧಿವೇಶನಗಳನ್ನು ದಕ್ಷಿಣದಲ್ಲಿ ನಡೆಸಬೇಕು ಎಂದು ಆಗ್ರಹಿಸಿ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ.
ಆದರೆ ಇದರ ಬೆನ್ನಲ್ಲೇ ದಕ್ಷಿಣದ ಸಂಸದರಿಂದಲೇ ಇದಕ್ಕೆ ಅಸಪ್ಪರ ವ್ಯಕ್ತವಾಗಿದೆ. ಮೈಸೂರು ಸಂಸದ ಯದುವೀರ ಒಡೆಯರ್, ಈ ಪ್ರಸ್ತಾಪ ವಿರೋಧಿಸಿದ್ದು, 'ಸಂಸತ್ ಕಲಾಪ ನಡೆಸುವುದಕ್ಕೆ ಇಡೀ ಸರ್ಕಾರಿ ಯಂತ್ರವನ್ನೇ ದಕ್ಷಿಣಕ್ಕೆ ಸ್ಥಳಾಂತರ ಮಾಡಬೇಕಾಗುತ್ತದೆ. ಇದು ತುಂಬಾ ಕ್ಲಿಷ್ಟಕರ ಪ್ರಕ್ರಿಯೆ ಹಾಗೂ ಸಮಯ ವ್ಯರ್ಥಕ್ಕೆ ಕಾರಣವಾಗುತ್ತದೆ' ಎಂದಿದ್ದಾರೆ.
ಗುರುಮೂರ್ತಿ ವಾದವೇನು?: 'ದೆಹಲಿಯಲ್ಲಿನ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಸಂಸದರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ವಿಶಾಲ ಗುರಿ ದೃಷ್ಟಿಕೋನದೊಂದಿಗೆ ದಕ್ಷಿಣದಲ್ಲೂ ವರ್ಷಕ್ಕೆ 2 ಸಂಸತ್ ಅಧಿವೇಶನ ನಡೆಸಬೇಕು' ಎಂದು ವೈಎಸ್ಸಾರ್ ಕಾಂಗ್ರೆಸ್ ಸಂಸದ ಗುರುಮೂರ್ತಿ ಕೋರಿದ್ದಾರೆ.
ಒಡೆಯರ್ ಹೇಳಿದ್ದೇನು?: ಗುರುಮೂರ್ತಿ ಆಗ್ರಹಕ್ಕೆ ಎನ್‌ಡಿಟಿವಿ ಮುಂದೆ ಪ್ರತಿಕ್ರಿಯಿಸಿದ ಮೈಸೂರು ಬಿಜೆಪಿ ಸಂಸದ ಒಡೆಯರ್, 'ರಾಷ್ಟ್ರ ನಿರ್ಮಾಣ ಎಂಬುದು ಒಂದು ಉದಾತ್ತ ಪ್ರಕ್ರಿಯೆಯಾಗಿದೆ. ಅಸ್ತಿತ್ವದಲ್ಲಿರುವ ಚೌಕಟ್ಟಿನಲ್ಲೇ ರಾಷ್ಟ್ರನಿರ್ಮಾಣ ನಡೆದಿದೆ' ಎಂದರು. 'ಇನ್ನು ಉತ್ತರದ ಹವಾಮಾನಕ್ಕೆ ಸಂಬಂಧಿಸಿ ಗುರುಮೂರ್ತಿ ಪ್ರಶ್ನೆ ಎತ್ತಿದ್ದಾರೆ. ನಾವು ಕಲಾಪ ನಡೆಸುವುದು ಸಂಸತ್ತಿನ 4 ಗೋಡೆಗಳ ನಡುವೆ. ಅಲ್ಲಿ ಸಮಸ್ಯೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೀಗಾಗಿ ದಕ್ಷಿಣದಲ್ಲಿ ಅಧಿವೇಶನ ನಡೆಸಿ ಎಂಬ ಕೋರಿಕೆ ಸ್ವೀಕಾರಾರ್ಹವಲ್ಲ' ಎಂದರು.
ಇದನ್ನೂ ಓದಿ: ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ಮಸೂದೆ ಮಂಡನೆ ಅನುಮಾನ?
ಇದನ್ನೂ ಓದಿ: