ಆಂಧ್ರಪ್ರದೇಶದ ಮಾಜಿ ಸಿಎಂ ವೈಎಸ್ ಜಗನ್ ಮತ್ತು ಸಹೋದರಿ ಶರ್ಮಿಳಾ ನಡುವಿನ ಆಸ್ತಿ ವಿವಾದದ ಬೆನ್ನಲ್ಲೇ ಇದೀಗ ಮಗಳ ಮದುವೆ ವಿಚಾರಕ್ಕೂ ಜಗಳ ಶುರುವಾಗಿದೆ. ಏನಿದು ವಿಚಾರ? ಇಲ್ಲಿದೆ ಮಾಹಿತಿ..
ಬೆಂಗಳೂರು: ಆಂಧ್ರ ಪ್ರದೇಶದ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಅವರ ಸಹೋದರಿ ವೈಎಸ್ ಶರ್ಮಿಳಾ ನಡುವಿನ ಕಿತ್ತಾಟಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಅಣ್ಣ-ತಂಗಿ ಆಸ್ತಿ ಹಾಗೂ ತಂದೆ ವೈಎಸ್ ರಾಜಶೇಖರ್ ರೆಡ್ಡಿ ರಾಜಕೀಯ ಪರಂಪರೆಗಾಗಿ ಕಿತ್ತಾಡಿಕೊಳ್ತಿದ್ದರು. ಇದೀಗ ಮದುವೆ ವಿಚಾರದಲ್ಲಿ ಕುಟುಂಬದ ಜಗಳ ಬೀದಿಗೆ ಬಿದ್ದಿದೆ.
ಏನಿದು ವಿವಾದ?
ಆಂಧ್ರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ಶರ್ಮಿಳಾ ಮಗಳು ವೈಎಸ್ ಅಂಜಲಿ ರೆಡ್ಡಿ ವಿವಾದಕ್ಕೆ ಕಾರಣವಾಗಿದೆ. ನವೆಂಬರ್ 25 ರಂದು ವೈಎಸ್ ಅಂಜಲಿ ರೆಡ್ಡಿ ಮದುವೆ ನಿಕ್ಕಿ ಆಗಿದೆ. ಅಂಜಲಿ ಅವರು ಅಮೆರಿಕದಲ್ಲಿ ವಾಸವಾಗಿರುವ ಸೋಮಲ ರಘುರಾಮ್ ರೆಡ್ಡಿಯನ್ನು ಮದುವೆ ಆಗಲಿದ್ದಾರೆ. ಅಂದ್ಹಾಗೆ ಮದುವೆಗೆ ಶರ್ಮಿಳಾ ಹಾಗೂ ಜಗನ್ಗೆ ಯಾವುದೇ ವಿರೋಧ ಇಲ್ಲ. ಆದರೆ ಮಗಳ ಮದುವೆ ಮಾಡಲು ಶರ್ಮಿಳಾ ಆಯ್ಕೆ ಮಾಡಿರುವ ಸ್ಥಳ ಜಗನ್ ಅವರ ಆಕ್ಷೇಪಕ್ಕೆ ಕಾರಣವಾಗಿದೆ.
ಬೆಂಗಳೂರಲ್ಲಿ ಮದುವೆ ಮಾಡ್ತಿರೋದಕ್ಕೆ ವಿರೋಧ
ಶರ್ಮಿಳಾ ಅವರು ತಮ್ಮ ಮಗಳ ಮದುವೆ ಮಾಡಲು ಆಯ್ಕೆ ಮಾಡಿಕೊಂಡಿರುವ ಸ್ಥಳ ಬೆಂಗಳೂರು. ಯಲಹಂಕದಲ್ಲಿರುವ ತಮ್ಮ ದೊಡ್ಡ ಅರಮನೆಯಂತಹ ಮನೆಯನ್ನು ಶರ್ಮಿಳಾ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಅಣ್ಣ ಜಗನ್ ವಿರೋಧ ವ್ಯಕ್ತಪಡಿಸಿದ್ದಾರೆ. ನೀವು ಬೆಂಗಳೂರಲ್ಲಿ ಮದವೆ ಆಯೋಜನೆ ಮಾಡಿರೋದಕ್ಕೆ ನನ್ನ ಒಪ್ಪಿಗೆ ಇಲ್ಲ. ನೀವು ಆಯ್ಕೆ ಮಾಡಿಕೊಂಡಿರುವ ಮದುವೆಯ ಜಾಗಕ್ಕೆ ನನ್ನ ವಿರೋಧ ಇದೆ ಎಂದಿದ್ದಾರೆ. ಸೊಸೆಯ ಮದುವೆ ನಡೆಯುತ್ತಿರುವ ಸ್ಥಳಕ್ಕೆ ವಿರೋಧ ವ್ಯಕ್ತಪಡಿಸಿ ತಂಗಿ ಶರ್ಮಿಳಾಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ತೆಲುಗು ಭಾಷೆಯಲ್ಲಿ ಪತ್ರ ಬರೆದಿರುವ ಜಗನ್, ಅಂಜಲಿಯ ವಿವಾದ ವಿಚಾರ ತಿಳಿದು ತುಂಬಾ ಸಂತೋಷ ಆಯಿತು. ಕಳೆದ 7 ವರ್ಷಗಳಲ್ಲಿ ನಮ್ಮಿಬ್ಬರ ಮಧ್ಯೆ ತುಂಬಾ ವಿವಾದ ನಡೆದು ಹೋಗಿದೆ. ಇಷ್ಟೆಲ್ಲ ಆಗಿದ್ದರೂ ಕೂಡ ನಾನು ಅಂಜಲಿ ಅವರ ಹೊಸ ಬದುಕಿಗೆ ಶುಭ ಹಾರೈಸುತ್ತೇನೆ. ಅವರ ಬದುಕು ಸಂತೋಷದಾಯಕವಾಗಿರಲಿ ಎಂದು ಬಯಸುತ್ತೇನೆ.
ಅವರ ಮೇಲಿರುವ ನನ್ನ ಕಾಳಜಿಯನ್ನ ನೀವು ಮರೆತು.. ಉದ್ದೇಶಪೂರ್ವಕವಾಗಿ ಬೆಂಗಳೂರಿನ ನಿವಾಸದಲ್ಲಿ ಆಕೆಯ ಮದುವೆಯನ್ನು ನಿಶ್ಚಯ ಮಾಡಿದ್ದೀರಿ. ಇದು ನನ್ನ ಗಮನಕ್ಕೆ ಬಂದಿದೆ. ಈ ವಿಚಾರವನ್ನು ನಾನು ಬೇರೆಯವರ ಮೂಲಕ ತಿಳಿದುಕೊಂಡೆ. ನಾನು ವಾಸಿಸುವ ಆವರಣದಲ್ಲಿ ಮದುವೆ ನಡೆಸುವುದು ಭದ್ರತೆಗೆ ದಕ್ಕೆ ತರಲಿದೆ. ಭದ್ರತಾ ಕಾಳಜಿಯಿಂದ ನೀನು ಇಲ್ಲಿ (ಬೆಂಗಳೂರಿನಲ್ಲಿ) ಮದುವೆ ನಿಶ್ಚಯ ಮಾಡಿರೋದು ಸರಿ ಅಲ್ಲ.
ಮದುವೆಯಂತಹ ಕಾರ್ಯಕ್ರಮಕ್ಕೆ ವಿವಿಧ ಸೇವಾ ಪೂರೈಕೆದಾರರು, ಅಡುಗೆ ಸಿಬ್ಬಂದಿ, ಹೂವು ಮತ್ತು ಅಲಂಕಾರ ತಂಡಗಳು, ಈವೆಂಟ್ ಮ್ಯಾನೇಜ್ಮೆಂಟ್ ಸಿಬ್ಬಂದಿ, ವಿಡಿಯೋ ಗ್ರಾಫರ್, ಛಾಯಾಗ್ರಾಹಕರು ಅತಿಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಅಲ್ಲಿಗೆ ಬರುವ ಬಹುತೇಕ ಮಂದಿ ನಮಗೆ ಪರಿಚಯ ಇರೋದಿಲ್ಲ. ಇದು ಭದ್ರತಾ ವಿಚಾರದಲ್ಲಿ ಸರಿಯಾದ ಸ್ಥಳ ಅಲ್ಲ. ಇದು ನನ್ನ ಕುಟುಂಬದ ಕಾಳಜಿಯಿಂದ ಹೇಳುತ್ತಿದ್ದೇನೆ. ಈಗಾಗಲೇ ನಮ್ಮ ಗೌಪ್ಯತೆ ಮತ್ತು ಭದ್ರತಾ ಅಪಾಯವನ್ನು ನಿಮಗೆ ಬೇರೆಯವರ ಮೂಲಕ ಈಗಾಗಲೇ ತಿಳಿಸಿದ್ದರೂ ನೀವು ನಿರ್ಲಕ್ಷ್ಯ ಮಾಡಿದ್ದೀರಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.







