ಜೈಪುರದಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುವಾಗ ಯುವಕನೊಬ್ಬನ ಮೊಬೈಲ್ ನೀರಿಗೆ ಬಿದ್ದ ಘಟನೆ ನಡೆದಿದೆ. ಮೊಬೈಲ್ ಸಿಗದೇ ಯುವಕ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಗರದ ಕಳಪೆ ಮೂಲಸೌಕರ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಚಿಕ್ಕಪುಟ್ಟ ಊರುಗಳು ಹಾಗೂ ಭಾರತದ ಹಳ್ಳಿಗಳಲ್ಲಿ ಇಂದಿಗೂ ಮೊಬೈಲ್ ಎನ್ನುವುದು ಶ್ರೀಮಂತಿಕೆಯ ಸಂಕೇತ. ತಮ್ಮ ಕೈಯಲ್ಲಿ ಒಂದು ಸಣ್ಣ ಸ್ಮಾರ್ಟ್‌ಫೋನ್ ಇರಬೇಕು ಎಂದು ಬಯಸುವವರೇ ಹೆಚ್ಚು. ಕಷ್ಟಪಟ್ಟು ಖರೀದಿಸಿದ ಮೊಬೈಲ್ ಕಳೆದಹೋದಾಗ ಆಗುವ ಸಂಕಟ ಅವರಿಗೆ ಹೇಳತೀರದು. ಇಂಥದ್ದೇ ಘಟನೆಯಲ್ಲಿ ಜೈಪುರದ ಯುವಕನೊಬ್ಬ ರಸ್ತೆಯಲ್ಲಿ ನಿಂತ ನೀರಿನಲ್ಲಿಯೇ ಸ್ಕೂಟರ್‌ನಲ್ಲಿ ಹೋಗುವಾಗ ಆತನ ಬಳಿಯಿದ್ದ ಮೊಬೈಲ್ ನೀರಲ್ಲಿ ಬಿದ್ದಿದೆ. ಈ ಮೊಬೈಲ್‌ಗಾಗಿ ರಸ್ತೆಯಲ್ಲಿ ನಿಂತ ನೀರಿನಲ್ಲೇ ಹುಡುಕಾಡಿ ಒದ್ದಾಡಿದ ಘಟನೆ ನಡೆದಿದೆ. ಎಷ್ಟೇ ಪ್ರಯತ್ನಪಟ್ಟರೂ ಕೊನೆಗೆ ಫೋನ್ ಸಿಗದೇ ಇದ್ದಾಗ ರಸ್ತೆಯ ಬದಿಯಲ್ಲಿ ಕುಳಿತು ಕಣ್ಣೀರು ಹಾಕುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.
ಜೈಪುರದ ರಾಮನಿವಾಸ್ ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆಸಿದೆ. ಊರಿನಲ್ಲಿ ಭಾರೀ ಮಳೆ ಬಂದಿದೆ. ಆದರೆ, ಸೂಕ್ತ ಒಳಚರಂಡಿ ಇಲ್ಲದ ಕಾರಣ ರಸ್ತೆಗಳು ಜಲಾವೃತಗೊಂಡಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಹಲ್ದರ್ ಎಂದು ಗುರುತಿಸಲಾಗಿದೆ. ಜಲಾವೃತಗೊಂಡ ರಸ್ತೆಯಲ್ಲಿಯೇ ತನ್ನ ಆಕ್ಟೀವಾ ಸ್ಕೂಟರ್‌ಅಲ್ಲಿ ಹೋಗುವಾಗ ಗುಂಡಿಯಲ್ಲಿ ಬಿಂದಿದ್ದಾನೆ. ಬಿದ್ದ ರಭಸಕ್ಕೆ ಆತನ ಬಳಿಯಿದ್ದ ಮೊಬೈಲ್ ಮಣ್ಣುಮಿಶ್ರಿತವಾಗಿದ್ದ ನೀರಿನಲ್ಲಿ ಬಿದ್ದಿದೆ.
ಎಷ್ಟು ಕಷ್ಟಪಟ್ಟು ತೆಗೆದುಕೊಂಡಿದ್ದ ಮೊಬೈಲೋ ಏನೋ? ತನ್ನ ಮೊಬೈಲ್ ಇಲ್ಲದೇ ಇರುವುದು ಗೊತ್ತಾದಾಗ ಭಾವುಕನಾಗಿದ್ದ ಹಲ್ದರ್ ಅದೇ ಮಳೆ ನೀರಿನಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದಾನೆ. ನಿಂತ ನೀರಿನೊಳಗೆ ಕೈಹಾಕಿ ಮೊಬೈಲ್ ಸಿಗುತ್ತಾ ಅನ್ನೋದನ್ನೂ ಮಾಡಿದ್ದಾನೆ. ಪ್ರತಿ ಬಾರಿ ಹುಡುಕಾಟ ನಡೆಸಿದಾಗಲೂ ಆತನ ಆ ಕ್ಷಣಕ್ಕೆ ಏನೂ ಮಾಡಲು ಸಾಧ್ಯವಾಗದೇ ಇರುವವನಾಗಿ ಕಾಣುತ್ತಿದ್ದ. ಕೊನೆಗೆ ಆತನ ಅಸಹಾಯಕತೆ ಕಣ್ಣೀರಾಗಿ ಹೊರ ಬಂದಿತ್ತು. ಕಣ್ಣೀರು ಒರೆಸಿಕೊಳ್ಳುತ್ತಲೇ ನಗರದ ಕೆಟ್ಟ ಮೂಲಸೌಕರ್ಯದಿಂದಾಗಿಯೇ ತನಗೆ ಈ ನಷ್ಟವಾಗಿದೆ ಎಂದಿದ್ದಾನೆ.
ಇನ್ನು ಈತನ ಹುಡುಕಾಟವನ್ನು ಅಲ್ಲಿಯೇ ಇದ್ದವರು ವಿಡಿಯೋ ಮಾಡಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈತನ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಸಾಕಷ್ಟು ಕಾಮೆಂಟ್‌ಗಳು ಬಂದಿವೆ.
'ಒಂದು ದೇಶವಾಗಿ ನಾವು ಪ್ರತಿ ದಿನ ಸೋಲು ಕಾಣುತ್ತಿದ್ದೇವೆ. ಮಾನ್ಸೂನ್ ಆರಂಭವಾಗುವ ಹೊತ್ತಿನಲ್ಲಿ ನಮಗೆ ಎಲ್ಲೆಡೆ ನದಿಗಳೇ ಕಾಣುತ್ತವೆ. ಚಳಿಗಾಲ ಆರಂಭವಾದಾಗ ಎಲ್ಲಾ ಕಡೆ ಮೋಡಗಳೇ ಕಾಣುತ್ತವೆ. ಪ್ರತಿ ವರ್ಷ: ಮಾಲೀನ್ಯ, ವಿದ್ಯುತ್ ಸಮಸ್ಯೆ, ಒಳಚರಂಡಿ ಸಮಸ್ಯೆ ಇದ್ದೇ ಇರುತ್ತದೆ. ಇನ್ನೂ ಬೇಸರದ ಸಂಗತಿ ಏನೆಂದರೆ, ಇದೆಲ್ಲವೂ ಸಾಮಾನ್ಯ ಎಂದು ನಾವೇ ಒಪ್ಪಿಕೊಂಡಿರುವುದು' ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ.
"ಯಾರದೋ ಕಾರಣದಿಂದಾಗಿ ಅಮೂಲ್ಯವಾದದ್ದನ್ನು ಕಳೆದುಕೊಳ್ಳುವ ನೋವು ನನಗೆ ಅರ್ಥವಾಗುತ್ತದೆ. ನಾವು ಕಾಳಜಿವಹಿಸುವದನ್ನು ನಾವು ರಕ್ಷಿಸುತ್ತೇವೆ, ಆದರೆ ಅದು ವಿಪತ್ತಿನಲ್ಲಿ ಕಳೆದುಹೋದಾಗ, ಅದು ನಮ್ಮನ್ನು ಹರ್ಟ್ ಮಾಡುತ್ತದೆ. ಭ್ರಷ್ಟ ನಾಯಕರು ಮತ್ತು ಕಳಪೆ ವ್ಯವಸ್ಥೆಗಳು ಈ ರೀತಿಯ ನೋವನ್ನು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ" ಎಂದು ಮತ್ತೊಬ್ಬರು ಬರೆದಿದ್ದಾರೆ.
ಅನೇಕರು ಹಲ್ದಾರ್ ಅವರ ಬಗ್ಗೆ ಸಹಾನುಭೂತಿ ತೋರಿದ್ದು, ಫೋನ್ ಹೊಂದಿರುವ ಆರ್ಥಿಕ ಮತ್ತು ಭಾವನಾತ್ಮಕ ಮೌಲ್ಯವನ್ನು ಗಮನಿಸಿದರು, ವಿಶೇಷವಾಗಿ ಅದನ್ನು ಖರೀದಿಸಲು ತಿಂಗಳುಗಟ್ಟಲೆ ಆತ ಹಣ ಉಳಿಸಿದ್ದರಬಹುದು ಎಂದು ಅಂದಾಜಿಸಿದ್ದಾರೆ. "ಅವನನ್ನು ಈ ರೀತಿ ನೋಡುವುದು ನಿಜಕ್ಕೂ ನೋವಿನ ಸಂಗತಿ ಏಕೆಂದರೆ ಅವನು ಅಥವಾ ಅವನ ಹೆತ್ತವರು ಎಷ್ಟು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಅದನ್ನು ಖರೀದಿಸಿದರು ಅನ್ನೋದು ಅರ್ಥವಾಗುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ.
