ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುಟ್ಟ ಮಕ್ಕಳೆಂದ್ರೆ ಪ್ರೀತಿ. ಹಲವು ಸಂದರ್ಭಗಳಲ್ಲಿ ಅವರು ಮಕ್ಕಳೊಂದಿಗೆ ತಮಾಷೆಯ ಸಂಭಾಷಣೆ ನಡೆಸೋದು ಕಂಡುಬಂದಿದೆ. ಬುಧವಾರ ಕೂಡ ಇಂಥದ್ದೇ ಒಂದು ದೃಶ್ಯ ಕಂಡುಬಂದಿದೆ. ಪ್ರಧಾನಿ ಹಾಗೂ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಅವರ ಐದು ವರ್ಷದ ಪುತ್ರಿಯ ನಡುವಿನ ಸಂಭಾಷಣೆ ವೈರಲ್ ಆಗಿದೆ.
ನವದೆಹಲಿ (ಜು.28): ಪ್ರಧಾನಿ ನರೇಂದ್ರ ಮೋದಿ ಬುಧವಾರ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಅವರ ಕುಟುಂಬವನ್ನು ಭೇಟಿ ಮಾಡಿದರು. ಆದರೆ, ಆ ಕ್ಷಣ ಆ ಕೋಣೆಯಲ್ಲಿದ್ದ ಎಲ್ಲರ ಗಮನವನ್ನು ಸೆಳೆದಿದ್ದು ಪ್ರಧಾನಿ ಹಾಗೂ ಫಿರೋಜಿಯಾ ಅವರ ಐದು ವರ್ಷದ ಪುತ್ರಿಯ ನಡುವೆ ನಡೆದ ಸಂಭಾಷಣೆ. ಪ್ರಧಾನಿ ಅಹನಾ ಫಿರೋಜಿಯಾ ಬಳಿ ಪದೇಪದೆ ನಾನು ಯಾರೆಂದು ನಿನಗೆ ಗೊತ್ತಾ? ಎಂದು ಪ್ರಶ್ನಿಸುತ್ತಲೇ ಇದ್ದರು. ಆಗ ಐದು ವರ್ಷದ ಪುಟ್ಟ ಬಾಲೆ ನೀಡಿದ ಉತ್ತರ ಹೀಗಿತ್ತು-'ಗೊತ್ತು, ನೀವು ಮೋದಿಜಿ ಅನ್ನೋದು ನನಗೆ ತಿಳಿದಿದೆ. ನೀವು ಟಿವಿಯಲ್ಲಿ ಪ್ರತಿದಿನ ಬರುತ್ತೀರಿ.' ಇಷ್ಟಕ್ಕೆ ಸುಮ್ಮನಾಗದ ಮೋದಿ, 'ನಾನು ಏನು ಮಾಡುತ್ತೇನೆ ಎಂದು ನಿನಗೆ ಗೊತ್ತಾ?' ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅಹನಾ ತಕ್ಷಣ 'ನೀವು ಲೋಕಸಭೆಯಲ್ಲಿ ಉದ್ಯೋಗ ಮಾಡುತ್ತಿದ್ದೀರಿ' ಎಂಬ ಉತ್ತರ ನೀಡಿದ್ದಾಳೆ. ಈ ಮಾತು ಕೇಳಿದ ತಕ್ಷಣ ಕೋಣೆಯಲ್ಲಿ ನೆರೆದಿದ್ದವರು ಜೋರಾಗಿ ನಕ್ಕಿದ್ದಾರೆ. ಪ್ರಧಾನಿ ಕೂಡ ಈ ಮಾತಿಗೆ ನಗುತ್ತ ಅಹನಾಗೆ ಚಾಕಲೇಟ್ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ರೀತಿ ಪುಟ್ಟ ಮಕ್ಕಳ ಜೊತೆಗೆ ತಮಾಷೆಯ ಮಾತುಕತೆ ನಡೆಸಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅನೇಕ ಸಂದರ್ಭಗಳಲ್ಲಿ ಮೋದಿ ಮಕ್ಕಳೊಂದಿಗೆ ಸಂಭಾಷಣೆ ನಡೆಸೋದು ಮಾಧ್ಯಮಗಳಲ್ಲಿ ಸೆರೆಯಾಗಿತ್ತು.
ಅಹನಾ ತಂದೆ ಅನಿಲ್ ಫಿರೋಜಿಯಾ ಇತ್ತೀಚೆಗೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು. ಇದಕ್ಕೆ ಕಾರಣ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ತೂಕ ಇಳಿಸುವ ಸವಾಲು ಸ್ವೀಕರಿಸಿ ಅದರಲ್ಲಿ ಅನಿಲ್ ಫಿರೋಜಿಯಾ ಯಶಸ್ವಿಯಾಗಿರೋದು. ಪ್ರತಿ ಕೆಜಿ ತೂಕ ಇಳಿಕೆಗೆ 1,000 ಕೋಟಿ ರೂ. ಅನುದಾನವನ್ನು ಅನಿಲ್ ಫಿರೋಜಿಯಾ ಅವರ ಕ್ಷೇತ್ರದ ಅಭಿವೃದ್ಧಿಗೆ ನೀಡೋದಾಗಿ ನಿತಿನ್ ಗಡ್ಕರಿ ಹೇಳಿದ್ದರು. ಇದಾದ ಕೆಲವು ದಿನಗಳ ಬಳಿಕ ತಾನು 21 ಕೆಜಿ ಕಳೆದುಕೊಂಡಿದ್ದು, 21,000 ಕೋಟಿ ರೂ. ಅನುದಾನ ಪಡೆಯಲು ಈಗ ಅರ್ಹನಾಗಿದ್ದೇನೆ ಎಂದು ಫಿರೋಜಿಯಾ ಹೇಳಿದ್ದರು. ಈ ಬಗ್ಗೆ ತಿಳಿದ ಮೋದಿ ಕೂಡ ಫಿರೋಜಿಯಾ ತೂಕ ಇಳಿಕೆಯ ಪಯಣದ ಬಗ್ಗೆ ಕಮೆಂಟ್ ಮಾಡಿ, ಅವರನ್ನು ಹೊಗಳಿದ್ದರು. ಸಂಪೂರ್ಣ ಸದೃಢವಾಗಲು ಇನ್ನೂ ಸ್ವಲ್ಪ ತೂಕ ಇಳಿಸಿಕೊಳ್ಳುವಂತೆಯೂ ಸಲಹೆ ನೀಡಿದ್ದರು.
ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಆಪ್ತೆ ಮನೆಯಲ್ಲಿ ಮತ್ತೆ ಸಿಕ್ತು 28 ಕೋಟಿ ಹಣ, ಕೆಜಿಗಟ್ಟಲೆ ಚಿನ್ನ
ತನ್ನ ಕುಟುಂಬ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಫೋಟೋಗಳನ್ನು ಸರಣಿ ಟ್ವೀಟ್ ಗಳ ಮೂಲಕ ಫಿರೋಜಿಯಾ ಹಂಚಿಕೊಂಡಿದ್ದಾರೆ. 'ಇಂದು ನನ್ನ ಪಾಲಿಗೆ ಮರೆಯಲಾಗದ ದಿನ. ಜಗತ್ತಿನ ಅತ್ಯಂತ ಪ್ರಖ್ಯಾತ ನಾಯಕ, ದೇಶದ ಅತ್ಯಂತ ಯಶಸ್ವಿ ಪ್ರಧಾನ ಮಂತ್ರಿ ಹಾಗೂ ಅತ್ಯಂತ ಗೌರವನ್ವಿತ ಶ್ರೀ ನರೇಂದ್ರ ಮೋದಿಜಿ ಅವರನ್ನು ಭೇಟಿಯಾಗುವ ಸೌಭಾಗ್ಯ ಸಿಕ್ಕಿತು. ಅವರ ಆಶೀರ್ವಾದಗಳು ಹಾಗೂ ಸ್ವಾರ್ಥರಹಿತ ಸಾರ್ವಜನಿಕ ಸೇವೆಯ ಮಂತ್ರವನ್ನು ಪಡೆದೆ' ಎಂದು ಟ್ವೀಟ್ ಮಾಡಿದ್ದಾರೆ.
National Herald Case: ಸೋನಿಯಾ ವಿಚಾರಣೆ ಖಂಡಿಸಿ ಬೀದಿಗಿಳಿದ ಕಾಂಗ್ರೆಸ್
ಇನ್ನೊಂದು ಟ್ವೀಟ್ ನಲ್ಲಿ 'ಇಂಥ ಕಠಿಣ ಪರಿಶ್ರಮಿ, ಪ್ರಾಮಾಣಿಕ, ಸ್ವಾರ್ಥರಹಿತ ಹಾಗೂ ತ್ಯಾಗಿಯಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಉಪಸ್ಥಿತಿಯಲ್ಲಿ ಸಾರ್ವಜನಿಕರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿರೋದು ನನ್ನ ಸೌಭಾಗ್ಯ. ಅವರು ತನ್ನ ಇಡೀ ಜೀವನವನ್ನು ದೇಶಕ್ಕೆ ಮುಡಿಪಾಗಿಟ್ಟಿದ್ದಾರೆ' ಎಂದು ಫಿರೋಜಿಯಾ ಇನ್ನೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
'ಇಂದು ನನ್ನ ಇಬ್ಬರು ಪುತ್ರಿಯರು, ಕಿರಿಯ ಪುತ್ರಿ ಅಹನಾ ಹಾಗೂ ಹಿರಿಯ ಪತ್ರಿ ಪ್ರಿಯಾಂಶಿ ಗೌರವನ್ವಿತ ಪ್ರಧಾನ ಮಂತ್ರಿ ಅವರನ್ನು ಖುದ್ದಾಗಿ ಭೇಟಿ ಮಾಡಿ ತುಂಬಾ ಖುಷಿಯಾಗಿದ್ದಾರೆ ಹಾಗೂ ಅವರ ಅಕ್ಕರೆಯನ್ನು ಕೂಡ ಪಡೆದಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
