ಲಕ್ನೋ[ಮಾ.06]: ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರ್ಕಾರ ಗಣನೀಯವಾಗಿ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಉತ್ತರ ಪ್ರದೇಶದಲ್ಲಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಕಹಿ ಸುದ್ದಿಯೊಂದು ಬಂದೆರಗಿದೆ. ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ನೂತನ ನೀತಿ ಜಾರಿಗೊಳಿಸುತ್ತಿದ್ದು, ಇಂತಹವರಿಗೆ ಸಮಾಜ ಕಲ್ಯಾಣ ಯೋಜನೆಗಳು ಹಾಗೂ ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸದಂತೆ ಸರ್ಕಾರ ತಡೆ ಹೇರುವ ಸಾಧ್ಯತೆಗಳಿವೆ. 

ಆರೋಗ್ಯ ಸಚಿವ ಜಯ್ ಪ್ರತಾಪ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸುತ್ತಾ ನೂತನ ನಿಯಮಗಳನ್ನೂ ಶೀಘ್ರದಲ;್ಲೇ ಘೋಷಿಸುವುದಾಗಿ ತಿಳಿಸಿದ್ದಾರೆ. 'ಇತರ ರಾಜ್ಯಗಳ ಜನಸಂಖ್ಯೆ ನೀತಿಯ ಅಧ್ಯಯನ ನಡೆಸಲಾಗುತ್ತಿದ್ದು, ಅವುಗಳಲ್ಲಿನ ಅತ್ಯುತ್ತಮ ನಿಯಮಗಳನ್ನು ಆಯ್ಕೆ ಮಾಡಿ, ದೇಶದ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ. ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದ್ದು, ಅಧ್ುಯಯನ ನಡೆಸಲಾಗುತ್ತಿದೆ' ಎಂದಿದ್ದಾರೆ.

ಜನಸಂಖ್ಯೆ ನಿಯಂತ್ರಿಸುವಲ್ಲಿ ದಕ್ಷಿಣದ ರಾಜ್ಯಗಳು ಯಶಸ್ವಿ

ಇನ್ನು ಇಲ್ಲಿನ ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ. ಬದ್ರಿ ವಿಶಾಲದ್ ಈ ಕುರಿತು ಮಾತನಾಡುತ್ತಾ 'ದಕ್ಷಿಣದ ಕೆಲ ರಾಜ್ಯಗಳು ಜನಸಂಖ್ಯೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಆದರೆವ ಉತ್ತರ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ಈಗಲೂ ಬಹುದೊಡ್ಡ ಸಮಸ್ಯೆಯಾಗಿ ಉಳಿದಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಂತಹ ಹಲವಾರು ರಾಜ್ಯಗಳು ಜನಸಂಖ್ಯೆ ನಿಯಂತ್ರಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಎರಡು ರಾಜ್ಯಗಳಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗುತ್ತಿಲ್ಲ. ನಾವೂ ಈ ನಿಯಮ ಜಾರಿಗೊಳಿಸುತ್ತೇವೆ' ಎಂದಿದ್ದಾರೆ