ನವದೆಹಲಿ(ಮೇ.31): ಮೇರೆ ಪ್ಯಾರೆ ದೇಶವಾಸಿಯೋ... ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಆರ್ಥಿಕತೆ ಪುನಾರಂಭವಾಗುತ್ತಿದೆ. ರೈಲು, ವಿಮಾನ ಸಂಚಾರ ಭಾಗಶಃ ಆರಂಭವಾಗಿದೆ. ಮತ್ತಷ್ಟುವಿನಾಯಿತಿಗಳು ಜಾರಿಗೆ ಬರಲಿವೆ. ಹಾಗಂತ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬೇಡಿ. ಕೊರೋನಾ ವಿಚಾರದಲ್ಲಿ ಇನ್ನಷ್ಟುಎಚ್ಚರಿಕೆಯಿಂದ ಇರಿ. ಈವರೆಗೂ ಮಾಡಿಕೊಂಡು ಬಂದಿರುವ ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ 4.0 ಕೊನೆಯ ದಿನವಾದ ಭಾನುವಾರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ನಲ್ಲಿ ಮಾತನಾಡಿದ ಅವರು, ಎರಡು ಗಜ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವುದಿರಬಹುದು, ಮಾಸ್ಕ್‌ ಧರಿಸುವುದಿರಬಹುದು ಅಥವಾ ಸಾಧ್ಯವಿರುವಷ್ಟುಮಟ್ಟಿಗೆ ಮನೆಯಲ್ಲೇ ಇರುವುದು ಇರಬಹುದು. ಏನೇ ಆಗಲಿ ನಮ್ಮ ಕಡೆಯಿಂದ ನಿರ್ಲಕ್ಷ್ಯ ಆಗಬಾರದು. ಹೋರಾಟ ದುರ್ಬಲವಾಗಲು ಬಿಡಬಾರದು. ನಿರ್ಲಕ್ಷ್ಯ ವಹಿಸುವುದು ಒಂದು ಆಯ್ಕೆಯಾಗಬಾರದು. ಕೊರೋನಾ ವಿರುದ್ಧದ ಹೋರಾಟ ಈಗಲೂ ಗಂಭೀರವಾಗಿದೆ. ಕೊರೋನಾ ವೈರಸ್‌ನಿಂದ ನೀವು, ನಿಮ್ಮ ಕುಟುಂಬ ಈಗಲೂ ಘೋರ ಅಪಾಯ ಎದುರಿಸುತ್ತಿದೆ ಎಂದು ಹೇಳಿದರು.

"

ಆರ್ಥಿಕತೆ ಚೇತರಿಕೆ ಉದ್ದೇಶದಿಂದ ಕೇಂದ್ರ ಸರ್ಕಾರ ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸುತ್ತಿರುವ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಸೋಂಕಿತರು ಹಾಗೂ ಮೃತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಈ ಮನವಿ ಮಾಡಿದ್ದಾರೆ.

ಕೊರೋನಾ ಬಿಕ್ಕಟ್ಟಿನಿಂದ ಸಮಾಜದ ಎಲ್ಲ ವರ್ಗಗಳು ಬಾಧಿತವಾಗಿವೆ. ಅದರಲ್ಲೂ ಬಡವರು ಹಾಗೂ ಕಾರ್ಮಿಕರು ಅನುಭವಿಸಿದ ನೋವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.

ನಮ್ಮ ಹಳ್ಳಿ, ನಗರ, ಜಿಲ್ಲೆ ಹಾಗೂ ರಾಜ್ಯಗಳು ಸ್ವಾವಲಂಬಿಯಾಗಿದ್ದರೆ, ನಮ್ಮನ್ನು ಇಂದು ಕಾಡುತ್ತಿರುವ ಸಮಸ್ಯೆ ಅಷ್ಟುತೀವ್ರವಾಗಿರುತ್ತಿರಲಿಲ್ಲ. ಅತಿ ಹೆಚ್ಚು ವಲಸಿಗ ಕಾರ್ಮಿಕರನ್ನು ಹೊಂದಿರುವ ದೇಶದ ಪೂರ್ವ ರಾಜ್ಯಗಳು ಅಧಿಕ ತೊಂದರೆ ಅನುಭವಿಸಿವೆ ಎಂದು ಹೇಳಿದರು.

ಯೋಗ ಹರಿದ್ವಾರದಿಂದ ಹಾಲಿವುಡ್‌ವರೆಗೆ:

ಕೊರೋನಾ ಸಂದರ್ಭದಲ್ಲಿ ಆಯುರ್ವೇದ ಹಾಗೂ ಯೋಗದತ್ತ ವಿಶ್ವದ ಜನ ಆಕರ್ಷಿತರಾಗಿದ್ದಾರೆ. ವಿಶ್ವ ನಾಯಕರ ಜತೆ ನಾನು ಕೊರೋನಾ ಬಿಕ್ಕಟ್ಟಿನ ಬಗ್ಗೆ ಮಾತನಾಡುವಾಗ ಅವರು ಯೋಗ, ಆಯುರ್ವೇದದತ್ತ ಆಸಕ್ತಿ ವ್ಯಕ್ತಪಡಿಸಿದರು. ಯೋಗ, ಆಯುರ್ವೇದದಿಂದ ಏನು ಲಾಭ ಎಂಬ ಮಾಹಿತಿ ಬಯಸಿದರು. ಹೀಗಾಗಿ ಇವುಗಳ ಮಹತ್ವವನ್ನು ಜನರು ಅರಿಯಬೇಕು. ಇನ್ನೇನು ವಿಶ್ವ ಯೋಗ ದಿನ (ಜೂನ್‌ 21) ಸಮೀಪಿಸುತ್ತಿದೆ. ಲಾಕ್‌ಡೌನ್‌ ವೇಳೆ ಹರಿದ್ವಾರದಿಂದ ಹಾಲಿವುಡ್‌ ಯೋಗ ಜನಪ್ರಿಯವಾಗಿದೆ ಎಂದರು.

ಕೊರೋನಾ ಗೆಲ್ಲುವ ಹಾದಿಯಲ್ಲಿ ಭಾರತ, ವಿಶ್ವಕ್ಕೆ ಮಾದರಿ: ಮೋದಿ

ಮಿಡತೆ ಬಾಧಿತರಿಗೆ ಪರಿಹಾರ:

ಒಂದು ಕಡೆ ನಮ್ಮ ಪೂರ್ವ ಭಾರತವು ಅಂಫಾನ್‌ ಚಂಡಮಾರುತದಿಂದ ಬಾಧಿತವಾಗಿದ್ದರೆ, ಪಶ್ಚಿಮ ಭಾರತದ ರಾಜ್ಯಗಳು ಮಿಡತೆ ದಾಳಿಗೆ ಒಳಗಾಗಿವೆ. ಈ ದಾಳಿ ತಡೆಯಲು ಸರ್ಕಾರ ಸರ್ವಸಿದ್ಧತೆ ಮಾಡಿಕೊಂಡಿದೆ. ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಂಫಾನ್‌ ಚಂಡಮಾರುತ:

ಅಂಫಾನ್‌ ಚಂಡಮಾರುತ ದೇಶದ ಪೂರ್ವ ಭಾಗಗಳಾದ ಪ.ಬಂಗಾಳ, ಒಡಿಶಾ ಬಾಧಿತವಾಗಿವೆ. ಚಂಡಮಾರುತ ಎದುರಿಸಲು ಈ ರಾಜ್ಯದ ಜನ ತೋರಿದ ಧೈರ್ಯ ಮೆಚ್ಚಬೇಕಾದದ್ದು. ಈ ವಿಕೋಪದ ಸಂದರ್ಭದಲ್ಲಿ ದೇಶವು ಆ ಭಾಗದ ಜನರ ಜತೆಗೆ ಇದೆ ಎಂದು ಹೇಳಿದರು.

ಪರಿಸರದ ಮಹತ್ವ:

ಜೂನ್‌ 5ರಂದು ಪರಿಸರ ದಿನಾಚರಣೆ ಇದೆ. ಜನರು ಪರಿಸರ ರಕ್ಷಣೆ, ನೀರಿನ ಸಂರಕ್ಷಣೆಯತ್ತ ಗಮನ ಹರಿಸಬೇಕು. ಲಾಕ್‌ಡೌನ್‌ನಿಂದ ನಮ್ಮ ಸುತ್ತಲಿನ ಶ್ರೀಮಂತ ಪರಿಸರ ವೈವಿಧ್ಯ ಅರ್ಥವಾಗಿದೆ. ಸ್ವಚ್ಛ ಪರಿಸರವು ನಮ್ಮ ಜೀವನ ಹಾಗೂ ನಮ್ಮ ಮಕ್ಕಳಿಗೆ ಅಗತ್ಯ. ಜೂ.5ರ ಪರಿಸರ ದಿನದಂದು ಎಲ್ಲರೂ ಗಿಡ ನೆಡಬೇಕು ಎಂದು ಮೋದಿ ಕರೆ ನೀಡಿದರು.

ಕೊರೋನಾ ವಿರುದ್ಧದ ಹೋರಾಟ ಈಗಲೂ ಗಂಭೀರವಾಗಿದೆ. ಎರಡು ಗಜ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು, ಸಾಧ್ಯವಿರುವಷ್ಟುಮಟ್ಟಿಗೆ ಮನೆಯಲ್ಲೇ ಇರುವುದು. ಯಾವುದೇ ಆಗಲಿ ನಿರ್ಲಕ್ಷ್ಯ ತೋರಬಾರದು.

-ನರೇಂದ್ರ ಮೋದಿ,