ನವದೆಹಲಿ(ಸೆ.02): ಪ್ರಧಾನಿ ನರೇಂದ್ರ ಮೋದಿ ಕಳೆದ ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರ ಮ ಮನ್‌ ಕೀ ಬಾತ್‌ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮದ ವಿಡಿಯೋವನ್ನು ಬಿಜೆಪಿ ಹಾಗೂ PMO ಇಂಡಿಯಾ ಯೂಟ್ಯೂಬ್ ಖಾತೆಗಳಿಂದ ಟೆಲಿಕಾಸ್ಟ್ ಮಾಡಲಾಗಿತ್ತು. ಆದರೆ ಈ ವಿಡಿಯೋಗೆ ಲೈಕ್ಸ್‌ಗಿಂತ ಹೆಚ್ಚು Dislikes ಗಳೇ ಸಿಕ್ಕಿದ್ದವು. ವಿಡಿಯೋವನ್ನು ಹತ್ತು ಲಕ್ಷಕ್ಕೂ ಅಧಿಕ ಮಂದಿ Dislike ಮಾಡಿದ್ದರು. ಆದರೀಗ ಈ ಬೆಳವಣಿಗೆ ಬೆನ್ನಲ್ಲೇ ಪಿಎಂಒ ಇಂಡಿಯಾ ಯೂಟ್ಯೂಬ್ ಖಾತೆಯ ವಿಡಿಯೋಗಳ ಕಮೆಂಟ್‌ ಸೆಕ್ಷನ್ ಆಫ್ ಮಾಡಲಾಗಿದೆ. 

ಇನ್ನು ಈ ಕಮೆಂಟ್‌ ಸೆಕ್ಷನ್ ಜೊತೆ ಲೈಕ್ ಹಾಗೂ Dislike ಮಾಡುವುದನ್ನೂ ನಿರ್ಬಂಧಿಸಲಾಗಿದೆ. ಇನ್ನು ಕಳೆದ ರವಿವಾರ ಪಿಎಂ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಆಟಿಕೆಗಳ ವಿಚಾರವಾಗಿ ಮಾತನಾಡಿದ್ದರು. ಆದರೆ ಇದು ವೀಕ್ಷಕರನ್ನು ನಿರಾಸೆಗೀಡು ಮಾಡಿತ್ತು. ಮೋದಿ ನೀಟ್ ಹಾಗೂ ಜೆಇಇ ಪರೀಕ್ಷೆ ಬಗ್ಗೆ ಮಾತನಾಡಿಲ್ಲ, ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿಲ್ಲ ಎಂದು ಅನೇಕಕ ಮಂದಿ ಕಮೆಂಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. 

ಈ ಬೆಳವಣಿಗೆಗಳ ಬೆನ್ನಲ್ಲೇ ಪಿಎಂಒ ಖಾತೆಯಲ್ಲಿ ಈ ಬದಲಾವಣೆ ಮಾಡಿರುವುದು ಭಾರೀ ಚರ್ಚೆ ಹುಟ್ಟು ಹಾಕಿದೆ. ಇದು ಹಾಗೇ ಮುಂದುವರೆಯುತ್ತಾ? ಅಥವಾ ಕಮೆಂಟ್ ಮಾಡುವ ಅವಕಾಶವನ್ನು ಮತ್ತೆ ನೀಡಲಾಗುತ್ತಾ ಸಮಯವೇ ಉತ್ತರಿಸಲಿದೆ.