ವಿಶ್ವದ ಅತಿ ಕಿರಿಯ ಮುಖ್ಯ ಶಿಕ್ಷಕ ಎಂದು ಖ್ಯಾತರಾದ ಬಾಬರ್ ಅಲಿ, ತಮ್ಮ 9ನೇ ವಯಸ್ಸಿನಲ್ಲಿಯೇ ಅನಾಥ ಮಕ್ಕಳಿಗೆ ಪಾಠ ಹೇಳಲು ಆರಂಭಿಸಿದರು. ಇದೀಗ ಪಶ್ಚಿಮ ಬಂಗಾಳದ ಜಲಂಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಇವರ 'ಆನಂದ್ ಶಿಕ್ಷಾ ನಿಕೇತನ್' ಶಾಲೆಯು 2000ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಿದೆ.
ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರು: ಜಗತ್ತಿನ ಅತಿ ಕಿರಿಯ ಮುಖ್ಯ ಶಿಕ್ಷಕ ಎಂದು ಖ್ಯಾತರಾಗಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಭಾಪ್ಪ ಗ್ರಾಮದ ಶಿಕ್ಷಣ ತಜ್ಞ ಬಾಬರ್ ಅಲಿ (34), ಈಗ ಪಶ್ಚಿಮ ಬಂಗಾಳ ವಿಧಾನಸಭೆ ಪ್ರವೇಶಿಸಿದ್ದಾರೆ. ಜಲಂಗಿ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಾರೆ.
ತಮ್ಮ 9ನೇ ವಯಸ್ಸಿನಲ್ಲಿಯೇ ಬೀದಿಗಳಲ್ಲಿ ಅಲೆಯುತ್ತಾ ಚಿಂದಿ ಆಯುವ ಮಕ್ಕಳು, ಅಲೆಮಾರಿ, ಅನಾಥ ಮಕ್ಕಳನ್ನು ಮನೆಯ ಹಿತ್ತಲಲ್ಲಿ ಕೂರಿಸಿಕೊಂಡು ಪಾಠ ಹೇಳಲು ಪ್ರಾರಂಭಿಸಿದ ಬಾಬರ್ ಅಲಿ, ಇಂದು ಸುಮಾರು 2,000 ಮಕ್ಕಳು ಓದುವ ಶಾಲೆಯನ್ನು ನಡೆಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ರಾಯಚೂರು, ಕೊಪ್ಪಳ ಸೇರಿ ಕರ್ನಾಟಕದ ಹಲವೆಡೆ ಕಾಲೇಜುಗಳಿಗೆ, ಶಾಲೆಗಳಿಗೆ ಭೇಟಿ ನೀಡಿ, ಉಪನ್ಯಾಸದ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದ್ದಾರೆ. ಭಾರತದ ಹಲವು ರಾಜ್ಯಗಳು, ಅಮೆರಿಕ, ಇಂಗ್ಲೆಂಡ್, ಜಪಾನ್, ಸಿಂಗಾಪುರ, ಬ್ರೆಜಿಲ್ ಸೇರಿ ವಿದೇಶಗಳಿಗೆ ಭೇಟಿ ನೀಡಿ, ಯುವಜನರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡಿದ್ದಾರೆ. 2002ರಲ್ಲಿ ಇವರು ತೆರೆದ ‘ಆನಂದ್ ಶಿಕ್ಷಾ ನಿಕೇತನ್’ ಪಾಠಶಾಲೆಗೆ ಈಗ 24 ವರ್ಷ.
ಸಾಧನೆಗಳು:
ಕರ್ನಾಟಕ ಸರ್ಕಾರ 2013ರಲ್ಲಿ ಇವರ ಶೈಕ್ಷಣಿಕ ಸಾಧನೆ ಕುರಿತು ಪ್ರಥಮ ಪಿಯುಸಿ ಇಂಗ್ಲಿಷ್ ಪಠ್ಯದಲ್ಲಿ ಪರಿಚಯಾತ್ಮಕ ಲೇಖನ ಅಳವಡಿಸಿದೆ. 2009ರ ಅಕ್ಟೋಬರ್‌ನಲ್ಲಿ ಬಿಬಿಸಿ ಸುದ್ದಿ ಸಂಸ್ಥೆ ಇವರ ಬಗ್ಗೆ ‘ವಿಶ್ವದ ಅತಿ ಕಿರಿಯ ಮುಖ್ಯ ಶಿಕ್ಷಕ’ ಎಂಬ ನುಡಿಚಿತ್ರ ಪ್ರಸಾರ ಮಾಡಿದೆ. 2020ರಲ್ಲಿ ಅಂದಿನ ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರು ತಮ್ಮ ಗಣರಾಜ್ಯೋತ್ಸವ ಮುನ್ನಾದಿನದ ಭಾಷಣದಲ್ಲಿ ಬಾಬರ್ ಅಲಿಯವರ ಸಾಧನೆಯನ್ನು ಪ್ರಸ್ತಾಪಿಸಿದ್ದರು.
ಮುರ್ಷಿದಾಬಾದ್‌ನಲ್ಲಿ ಜನನ:
ಬಾಬರ್ ಅಲಿ, 1993ರ ಮಾರ್ಚ್ 18ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಭಾಪ್ಪ ಗ್ರಾಮದಲ್ಲಿ ಜನಿಸಿದರು. ತಂದೆ ನಾಸಿರುದ್ದಿನ್, ತಾಯಿ ಬನೌರಾ ಬೀಬಿ. ಈ ದಂಪತಿಗೆ ಬಾಬರ್ ಅಲಿ ಸೇರಿ ಮೂವರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಇವರದು ಸಣ್ಣ ಪ್ರಮಾಣದ ಸೆಣಬು ಮಾರಾಟಗಾರರ ಕುಟುಂಬ.
ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಾಬರ್ ಅಲಿ, ಸಿಆರ್ ಜಿಎಸ್ ಪ್ರೌಢಶಾಲೆ ಬೆಲ್ಲಂಗಾದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಕಾಸ್ಸಿಂಬಜಾರ್ ರಾಜ್ ಗೋವಿಂದ್ ಸುಂದರಿ ವಿದ್ಯಾಪೀಠದಲ್ಲಿ ಪದವಿ ಶಿಕ್ಷಣ ಪೂರೈಸಿದರು. ಆಗ ನಿತ್ಯ ಐದಾರು ಕಿ.ಮೀ.ದೂರ ಕಾಲ್ನಡಿಗೆಯಲ್ಲೇ ಸಾಗಿ ಕಾಲೇಜು ತಲುಪಬೇಕಿತ್ತು. ನಂತರ, ಕಲ್ಯಾಣಿ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆ ಮತ್ತು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಇವರ ಶೈಕ್ಷಣಿಕ ಸಾಧನೆ ಗುರುತಿಸಿ, ಟಿಎಂಸಿ ಪಕ್ಷ ಅವರಿಗೆ ಟಿಕೆಟ್ ನೀಡಿತ್ತು. ಅವಿವಾಹಿತರಾಗಿರುವ ಇವರು ಮೊದಲ ಯತ್ನದಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಾಬರ್ ಅಲಿಯವರ ಬಾಲ್ಯವೇ ಬಲು ರೋಚಕ; ರಂಗಸ್ವಾಮಿ
ಬಾಬರ್ ಅಲಿಯವರ ಬಾಲ್ಯವೇ ಬಲು ರೋಚಕ. ವಿದ್ಯಾರ್ಥಿಗಳಿಗೆ ಅವರು ರೋಲ್ ಮಾಡೆಲ್. ಸಾಧಿಸುವ ಹಠ ಇರುವವರಿಗೆ ದಾರಿದೀಪ. ಅವರೊಂದಿಗೆ ತುಂಬಾ ಸಮಯ ಕಳೆದಿದ್ದೇನೆ. ಸರಳ ವ್ಯಕ್ತಿತ್ವದ ಅವರನ್ನು ವಿವಿ ಸಾಗರಕ್ಕೂ (ಮಾರಿಕಣಿವೆ) ಕರೆದೊಯ್ದು, ಅಲ್ಲಿಯ ಸೊಬಗನ್ನು ತೋರಿಸಿದ್ದೇನೆ. ಸಾವಿರಾರು ಮಕ್ಕಳ ಬಾಳಿಗೆ ಅವರು ಬೆಳಕಾಗಿದ್ದಾರೆ ಎನ್ನುತ್ತಾರೆ ಹಿರಿಯೂರಿನ ಸಾಹಿತಿ, ನಿವೃತ್ತ ಉಪನ್ಯಾಸಕ ಎಂ.ಜಿ.ರಂಗಸ್ವಾಮಿ. ಅಲಿಯವರು ಈ ಭಾಗದ ಪ್ರವಾಸಕ್ಕೆ ಬಂದಾಗಲೆಲ್ಲಾ ರಂಗಸ್ವಾಮಿಯವರನ್ನು ಭೇಟಿ ಮಾಡುತ್ತಾರೆ. ಕೆಲವೆಡೆ ಇಬ್ಬರೂ ಒಟ್ಟಾಗಿ ಪ್ರವಾಸ ಮಾಡಿದ್ದಾರೆ.


