ವಿಶ್ವದ ಟಾಪ್-100 ವಿಮಾನ ನಿಲ್ದಾಣಗಳು:ಬೆಂಗಳೂರಿಗೆ ಬೆಸ್ಟ್ ರ‍್ಯಾಂಕ್
ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2025ರಲ್ಲಿ 4 ಭಾರತೀಯ ವಿಮಾನ ನಿಲ್ದಾಣಗಳು ಜಾಗತಿಕ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 32ನೇ ಸ್ಥಾನದೊಂದಿಗೆ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.

ಇತ್ತೀಚಿನ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2025ರಲ್ಲಿ, ಪ್ರಖ್ಯಾತ ವಾಯುಯಾನ ಸಲಹಾ ಸಂಸ್ಥೆಯು ಶ್ರೇಣೀಕರಿಸಿದಂತೆ, ಜಾಗತಿಕವಾಗಿ ಟಾಪ್ 100 ವಿಮಾನ ನಿಲ್ದಾಣಗಳ ಪ್ರತಿಷ್ಠಿತ ಪಟ್ಟಿಯಲ್ಲಿ ಕೇವಲ 4 ಭಾರತೀಯ ವಿಮಾನ ನಿಲ್ದಾಣಗಳು ಸ್ಥಾನ ಪಡೆದಿವೆ . ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 32ನೇ ಸ್ಥಾನದೊಂದಿಗೆ ಭಾರತದಲ್ಲಿ ಮೊದಲ ಸ್ಥಾನ ಪಡೆದಿದೆ. ಆದರೆ, ಬೆಂಗಳೂರು ವಿಮಾನ ನಿಲ್ದಾಣ ಸ್ಥಾನ ಎಷ್ಟಿದೆ? ಉಳಿದ ನಿಲ್ದಾಣಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಇನ್ನು ವಿಶ್ವದ ಟಾಪ್-20 ವಿಮಾನ ನಿಲ್ದಾಣದ ಸ್ಥಾನದಲ್ಲಿ ಭಾರತದ ಯಾವೊಂದು ನಿಲ್ದಾಣವೂ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಕಳೆದ ವರ್ಷಗಳಿಗೆ ಹೋಲಿಸಿದರೆ ಭಾರತೀಯ ವಿಮಾನ ನಿಲ್ದಾಣಗಳ ಜಾಗತಿಕ ಸ್ಥಾನದಲ್ಲಿ ಗಮನಾರ್ಹ ಸುಧಾರಣೆ ಆಗಿರುವುದು ರ್ಯಾಂಕಿಂಗ್‌ನಲ್ಲಿ ಕಂಡುಬಂದಿದೆ. ವಾಯುಯಾನ ಉದ್ಯಮದಲ್ಲಿ ಮಾನದಂಡವೆಂದು ಪರಿಗಣಿಸಲಾದ ಸ್ಕೈಟ್ರಾಕ್ಸ್ ಪ್ರಶಸ್ತಿಗಳು, ಪ್ರಯಾಣಿಕರ ತೃಪ್ತಿ, ಸೇವಾ ಗುಣಮಟ್ಟ ಮತ್ತು ಒಟ್ಟಾರೆ ಪ್ರಯಾಣದ ಅನುಭವದ ಆಧಾರದ ಮೇಲೆ ವಿಮಾನ ನಿಲ್ದಾಣಗಳನ್ನು ಮೌಲ್ಯಮಾಪನ ಮಾಡುತ್ತವೆ.
ಭಾರತೀಯ ವಿಮಾನ ನಿಲ್ದಾಣಗಳ ರ್ಯಾಂಕಿಂಗ್ ಇಲ್ಲಿದೆ ನೋಡಿ:
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ — 32 ನೇ ಸ್ಥಾನ: ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವು 2024 ರಲ್ಲಿ 36ನೇ ಸ್ಥಾನದಿಂದ 2025 ರಲ್ಲಿ 32ನೇ ಸ್ಥಾನಕ್ಕೆ ಏರಿದೆ. ಉತ್ತಮವಾದ ಟರ್ಮಿನಲ್‌ಗಳು, ಆಕರ್ಷಕ ಕಲಾ ಸ್ಥಾಪನೆಗಳು ಮತ್ತು ದಕ್ಷ ಕಾರ್ಯಾಚರಣೆಗಳಿಗೆ ಹೆಸರುವಾಸಿಯಾಗಿರುವ ಇದು ಭಾರತೀಯ ವಿಮಾನ ನಿಲ್ದಾಣಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಡುವುದಲ್ಲಿ ಮುಂಚೂಣಿಯಲ್ಲಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಿಂದಿ ಔಟ್, ಫಲಕಗಳಲ್ಲಿ ಕನ್ನಡ? ಚರ್ಚೆಗೆ ಕಾರಣವಾದ ವಿಡಿಯೋ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು - 48 ನೇ ಸ್ಥಾನ: ಪ್ರಕೃತಿ ಆಧಾರಿತ ಹೊಸ ಟರ್ಮಿನಲ್ 2 ಉದ್ಘಾಟನೆಯೊಂದಿಗೆ, ಬೆಂಗಳೂರಿನ ವಿಮಾನ ನಿಲ್ದಾಣವು 2024ರಲ್ಲಿ 58ನೇ ಸ್ಥಾನದಲ್ಲಿತ್ತು. ಆದರೆ, 2025ರಲ್ಲಿ 48ನೇ ಸ್ಥಾನಕ್ಕೆ ಏರಿತು. ಟರ್ಮಿನಲ್‌ನ ಉದ್ಯಾನಗಳು, ಕಲೆ ಮತ್ತು ಸುಸ್ಥಿರ ವಿನ್ಯಾಸವು ಜಾಗತಿಕ ಪ್ರಶಂಸೆಯನ್ನು ಗಳಿಸಿದೆ. ಒಂದೇ ಒಂದು ವರ್ಷದಲ್ಲಿ 10 ಸ್ಥಾನಗಳನ್ನು ಏರಿಕೆ ಕಾಣುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದೆ. ಮುಂದಿನ ದಿನಗಳಲ್ಲಿ ದೆಹಲಿಯನ್ನು ಹಿಂದಿಕ್ಕಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್ - 56 ನೇ ಸ್ಥಾನ: ಸ್ವಚ್ಛತೆ ಮತ್ತು ಸುಗಮ ಪ್ರಯಾಣಿಕರ ಅನುಭವಕ್ಕೆ ಹೆಸರುವಾಸಿಯಾದ ಹೈದರಾಬಾದ್, 59ನೇ ಸ್ಥಾನದಿಂದ 56ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇದು ನಿರಂತರವಾಗಿ ಶ್ರೇಷ್ಠತೆಯ ಖ್ಯಾತಿಯನ್ನು ನಿರ್ಮಿಸುತ್ತಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ - 73ನೇ ಸ್ಥಾನ: ಕಲಾತ್ಮಕ ಒಳಾಂಗಣಗಳು ಮತ್ತು ಕಾರ್ಯನಿರತ ಟರ್ಮಿನಲ್‌ಗಳಿಗೆ ಹೆಸರುವಾಸಿಯಾದ ಮುಂಬೈನ ಐಕಾನಿಕ್ ವಿಮಾನ ನಿಲ್ದಾಣವು ಈ ವರ್ಷ 95ನೇ ಸ್ಥಾನದಿಂದ 73ನೇ ಸ್ಥಾನಕ್ಕೆ ಗಮನಾರ್ಹವಾಗಿ ಸುಧಾರಿಸಿದೆ. ಭಾರತದ ಬಾಲಿವುಡ್ ಸೇರಿದಂತೆ ಉತ್ತಮ ಬ್ಯುಸಿನೆಸ್ ಎಲ್ಲವೂ ಮುಂಬೈನಲ್ಲಿ ನೆಲೆಸಿದ್ದು, ಇದನ್ನು ಇನ್ನಷ್ಟು ಉತ್ತಮೀಕರಿಸಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.
ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣಗಳು ಯಾವುವು?
ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವನ್ನು ಸ್ಕೈಟ್ರಾಕ್ಸ್ ದಾಖಲೆಯ 13ನೇ ಬಾರಿಗೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು (1st Rank) ಖ್ಯಾತಿ ಪಡೆದಿದೆ. ಚಾಂಗಿ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಪ್ರಯಾಣದ ಅನುಭವವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರೆಸಿದೆ. ಅದರ ಐಷಾರಾಮಿ ಸೌಕರ್ಯಗಳು, ಸೊಂಪಾದ ಒಳಾಂಗಣ ಉದ್ಯಾನಗಳು ಮತ್ತು ತಲ್ಲೀನಗೊಳಿಸುವ ಆಕರ್ಷಣೆಗಳೊಂದಿಗೆ, ಇದು ಸಾರಿಗೆ ಕೇಂದ್ರಕ್ಕಿಂತ ಹೆಚ್ಚಾಗಿ ಒಂದು ಪ್ರವಾಸಿ ತಾಣದಂತೆ ಭಾಸವಾಗುತ್ತದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುಧಾರಿತ ಟ್ರಕ್ ನಿರ್ವಹಣಾ ವ್ಯವಸ್ಥೆ!
ದೋಹಾದ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2ನೇ ಸ್ಥಾನವನ್ನು ಪಡೆದುಕೊಂಡಿದೆ. ಇದರ ಐಷಾರಾಮಿ ಲಾಂಜ್‌ಗಳು, ಉನ್ನತ ಶ್ರೇಣಿಯ ಶಾಪಿಂಗ್ ಮತ್ತು ಕಲೆಯಿಂದ ಕೂಡಿದ ವಾಸ್ತುಶಿಲ್ಪಕ್ಕಾಗಿ ಪ್ರಶಂಸೆಗೆ ವ್ಯಕ್ತವಾಗುತ್ತಿದೆ. ನಂತರದ ಕೆಲವು ಸ್ಥಾನಗಳಲ್ಲಿ ಏಷ್ಯನ್ ಹೆವಿವೇಯ್ಟ್‌ಗಳಾದ ಟೋಕಿಯೋ ಹನೆಡಾ, ಸಿಯೋಲ್ ಇಂಚಿಯಾನ್, ಟೋಕಿಯೋ ನರಿಟಾ ಮತ್ತು ಹಾಂಗ್ ಕಾಂಗ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಗಳು ತಮ್ಮ ಪ್ರಾಬಲ್ಯವನ್ನು ಮುಂದುವರೆಸಿವೆ. ಇದು ವಿಮಾನ ನಿಲ್ದಾಣದ ರ್ಯಾಂಕಿಂಗ್‌ನಲ್ಲಿ ಏಷ್ಯಾ ಮುಂಚೂಣಿಯನ್ನು ಪಡೆದುಕೊಂಡಿದೆ ಎಂಬುದು ಇಲ್ಲಿ ಸ್ಪಷ್ಟ ಸೂಚನೆಯಾಗಿದೆ.
ಯುರೋಪ್ ಒಕ್ಕೂಟದಲ್ಲಿ ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ 7ನೇ ಸ್ಥಾನವನ್ನು ಪಡೆದುಕೊಂಡಿದೆ. ಉಳಿದಂತೆ ರೋಮ್, ಮ್ಯೂನಿಚ್, ಜ್ಯೂರಿಚ್, ವಿಯೆನ್ನಾ ಮತ್ತು ಆಮ್ಸ್ಟರ್‌ಡ್ಯಾಮ್‌ನಂತಹ ಇತರ ಪ್ರಮುಖ ಕೇಂದ್ರಗಳು ಅಗ್ರ 20ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಮೆರಿಕದ ಏಕೈಕ ಮತ್ತು 13ನೇ ಸ್ಥಾನ ಪಡೆದುಕೊಂಡ ವಿಮಾನ ನಿಲ್ದಾಣವಾಗಿದೆ. ಇದರ ಮಧ್ಯದಲ್ಲಿ ಕೇಪ್ ಟೌನ್ ಇಂಟರ್ನ್ಯಾಷನಲ್ ಆಫ್ರಿಕಾದ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಕಿರೀಟವನ್ನು ಪಡೆದುಕೊಂಡಿದೆ. ಆಫ್ರಿಕಾ ಖಂಡದಲ್ಲಿ ಅತ್ಯುತ್ತಮ ಸಿಬ್ಬಂದಿ ಸೇವೆಗಾಗಿಯೂ ಪ್ರಶಸ್ತಿಯನ್ನು ಗಳಿಸಿತು.