ಟೆಲಿ ಮೆಡಿಸಿನ್ ಮತ್ತಷ್ಟುಜನಪ್ರಿಯವಾಗಲಿ: ಮೋದಿ
ಟೆಲಿ ಮೆಡಿಸಿನ್ ಲಭ್ಯತೆ ಹಾಗೂ ಉಪಯೋಗ ಹೆಚ್ಚಿನ ಜನಕ್ಕೆ ತಲುಪುವಂತೆ ಮಾಡಲು ಹೊಸ ಮಾದರಿ ಹುಡುಕಬೇಕಿದೆ.ಜತೆಗೆ, ಆರೋಗ್ಯ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಕಲ್ಪನೆಗೆ ಹೆಚ್ಚಿನ ಉತ್ತೇಜನ ಸಿಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಬೆಂಗಳೂರು (ಜೂ. 02): ಟೆಲಿ ಮೆಡಿಸಿನ್ ಲಭ್ಯತೆ ಹಾಗೂ ಉಪಯೋಗ ಹೆಚ್ಚಿನ ಜನಕ್ಕೆ ತಲುಪುವಂತೆ ಮಾಡಲು ಹೊಸ ಮಾದರಿ ಹುಡುಕಬೇಕಿದೆ.ಜತೆಗೆ, ಆರೋಗ್ಯ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಕಲ್ಪನೆಗೆ ಹೆಚ್ಚಿನ ಉತ್ತೇಜನ ಸಿಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್)ದ ರಜತ ಮಹೋತ್ಸವ ಹಾಗೂ ಕೊರೋನಾ ನಿಗ್ರಹಕ್ಕೆ ವಿವಿ ವತಿಯಿಂದ ಆರಂಭಿಸಿರುವ ‘ಕೊರೋನಾ ಆವಿಷ್ಕಾರ ಕಾರ್ಯಕ್ರಮ’ ಹ್ಯಾಕಥಾನ್ ಚಾಲೆಂಜ್‌ಗೆ ಆನ್‌ಲೈನ್ ಮೂಲಕ ದೆಹಲಿಯಿಂದಲೇ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ 19 ಹಿಮ್ಮೆಟ್ಟಿಸುವಲ್ಲಿ ಆತ್ಮಸ್ಥೈರ್ಯ ತುಂಬಿದ್ದು ರಾಜೀವ್ ಗಾಂಧಿ ವಿವಿ
ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಹಿತವಾಗಿ ಕೊರೋನಾ ವಾರಿಯರ್ಸ್ ಅತ್ಯಂತ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಜೀವನ ಶೈಲಿ ಆಧಾರಿತ ರೋಗಳನ್ನು ತಡೆಯುವ ನಿಟ್ಟಿನಲ್ಲಿ 40 ಸಾವಿರಕ್ಕೂ ಅಧಿಕ ವೆಲ್ನೆಸ್ ಕೇಂದ್ರಗಳು ಸೇವೆ ಸಲ್ಲಿಸುತ್ತಿವೆ. ಆದ್ದರಿಂದ ಟೆಲಿ ಮೆಡಿಸಿನ್ ಉಪಯೋಗದ ಬಗ್ಗೆ ಜನರಿಗೆ ತಿಳಿಸಬೇಕಿದೆ ಎಂದರು.
ಕಳೆದ ಆರು ವರ್ಷದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದ್ದೇವೆ. ವೈದ್ಯ ಆಕಾಂಕ್ಷಿಗಳ ಕನಸು ನನಸು ಮಾಡುವ ಉದ್ದೇಶದಿಂದ 30 ಸಾವಿರ ಎಂಬಿಬಿಎಸ್ ಮತ್ತು 15 ಸಾವಿರ ಸ್ನಾತಕೋತ್ತರ ಕೋರ್ಸ್‌ಗಳ ಇನ್‌ಟೇಕ್ ಅನ್ನು ಹೆಚ್ಚಳ ಮಾಡಲಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ ನಿಯಮದ ಪ್ರಕಾರ ಪ್ರತಿ ಜಿಲ್ಲೆಯಲ್ಲೊಂದು ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಭಾರತವನ್ನು 2025ರ ವೇಳಗೆ ‘ಕ್ಷಯ ಮುಕ್ತ ಭಾರತ’ ಮಾಡಲು ಪಣ ತೊಡಲಾಗಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಶೇ.80ರಷ್ಟುಕೊರೋನಾ ಪಾಸಿಟಿವ್ ಆದ ವ್ಯಕ್ತಿಗಳಿಗೆ ಸೋಂಕಿನ ಲಕ್ಷಣಗಳೇ ಕಂಡು ಬಂದಿಲ್ಲ. ಇದು ಆಶ್ಚರ್ಯಕರ ಸಂಗತಿ. ಇದಕ್ಕೆ ಇರುವ ಕಾರಣ ಹುಡುಕಿ ಅದನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಉಪಯೋಗವಾಗುವಂತಹ ಔಷಧಿಗಳ ಆವಿಷ್ಕಾರ ನಮ್ಮ ಗುರಿ ಎಂದು ತಿಳಿಸಿದರು.
ಕೊರೋನಾ ಎಫೆಕ್ಟ್: ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರ್ಕಾರ, ದೇಶದಲ್ಲಿಯೇ ಮೊದಲ ಪ್ರಯತ್ನ
ರಾಜೀವ್‌ಗಾಂಧಿ ವಿವಿಗೆ ಇದು ಐತಿಹಾಸಿಕ ದಿನವಾಗಿದೆ. ಪ್ರಧಾನಿ ಮೋದಿ ಸಮಾರಂಭವನ್ನು ಉದ್ಘಾಟಿಸಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಸ್ಥೆಯು ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡಲು ಪ್ರೇರಣೆಯಾಗಿದ್ದಾರೆ. ರಾಜೀವ್‌ಗಾಂಧಿ ವಿವಿಯು ಐಐಐಟಿ, ಐಐಎಂ, ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯಂತಹ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದಲ್ಲಿ ಕೊರೋನಾ ಹ್ಯಾಕಥಾನ್ ಹಮ್ಮಿಕೊಂಡಿದೆ ಎಂದರು.
ವಿವಿ ಕುಲಪತಿ ಡಾ. ಎಸ್. ಸಚ್ಚಿದಾನಂದ ಮಾತನಾಡಿ, ಕೊರೋನಾ ಆವಿಷ್ಕಾರ ಹ್ಯಾಕಥಾನ್‌ನಲ್ಲಿ 150 ತಂಡಗಳು ಭಾಗವಹಿಸುತ್ತಿದ್ದು, ಅಂತಿಮವಾಗಿ 20 ತಂಡಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ರಾಜೀವ್ ಗಾಂಧಿ ವಿವಿ ಹೊರ ತಂದಿರುವ ಹ್ಯಾಕಥಾನ್ ಕೈಪಿಡಿಯನ್ನು ರಾಜ್ಯಪಾಲ ವಿ.ಆರ್. ವಾಲಾ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯ ರೆಡ್ಡಿ, ಮೌಲ್ಯಮಾಪನ ಕುಲ ಸಚಿವ ಡಾ.ಕೆ.ಬಿ.ಲಿಂಗೇಗೌಡ ಉಪಸ್ಥಿತರಿದ್ದರು.