ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು, ಈ 8 ದೇಶಗಳಲ್ಲಿ ಪೊಲೀಸರು ನಿಮ್ಮ ವಾಹನ ಮುಟ್ಟೋದಿಲ್ಲ!
ನಿಮ್ಮ ಬಳಿ ಭಾರತ ಸರ್ಕಾರದಿಂದ ನೀಡಲಾಗುವ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು. ನಿಮ್ಮ ವಾಹನಗಳನ್ನು ಪೊಲೀಸರು ಮುಟ್ಟೋದೇ ಇಲ್ಲ.

ಜಾಗತಿಕ ಮಟ್ಟದಲ್ಲಿ ಕೆಲವೊಂದು ದೇಶಗಳಲ್ಲಿ ವಾಹನ ಚಾಲನೆ ಮಾಡಲು ಆಯಾ ದೇಶದ ಲೈಸೆನ್ಸ್ ಮಾಡಿಸಿಕೊಳ್ಳಬೇಕೇ? ಎನ್ನುವುದು ಅನೇಕರಿಗೆ ಇರುವ ಸಂದೇಹವಾಗಿದೆ. ಹೌದು, ಆಯಾ ದೇಶದ ಡ್ರೈವಿಂಗ್ ಲೈಸೆನ್ಸ್ ಬೇಕು. ಆದರೆ, ಕೆಲವು ದೇಶಗಳು ಭಾರತೀಯ ಚಾಲನಾ ಪರವಾನಗಿಯನ್ನು ಸ್ವೀಕರಿಸುತ್ತವೆ. ಕೆಲವು ದೇಶಗಳು ಸಣ್ಣ ನಿಬಂಧನೆಗಳನ್ನು ಹೊಂದಿದ್ದರೆ, ಇನ್ನು ಕೆಲವು ದೇಶಗಳಲ್ಲಿ ಯಾವುದೇ ನಿಬಂಧನೆಗಳನ್ನು ವಿಧಿಸುವುದಿಲ್ಲ. ಭಾರತೀಯ ಚಾಲನಾ ಪರವಾನಗಿಯನ್ನು ಸ್ವೀಕರಿಸುವ ದೇಶಗಳನ್ನು ನೋಡೋಣ.
1) ನ್ಯೂಜಿಲೆಂಡ್
ಭಾರತೀಯ ಚಾಲನಾ ಪರವಾನಗಿ ಬಳಸಿ ನ್ಯೂಜಿಲೆಂಡ್‌ನಲ್ಲಿ ವಾಹನ ಚಾಲನೆ ಮಾಡಬಹುದು. ಆದರೆ, ಇದಕ್ಕೆ ಕೆಲವು ನಿಬಂಧನೆಗಳಿವೆ. ಒಂದು ವರ್ಷದವರೆಗೆ ಮಾತ್ರ ಭಾರತೀಯ ಪರವಾನಗಿ ಬಳಸಿ ನ್ಯೂಜಿಲೆಂಡ್‌ನಲ್ಲಿ ವಾಹನ ಚಾಲನೆ ಮಾಡಬಹುದು. ಚಾಲಕರಿಗೆ 21 ವರ್ಷ ವಯಸ್ಸಾಗಿರಬೇಕು. ಇಂಗ್ಲಿಷ್‌ನಲ್ಲಿರುವ ಭಾರತೀಯ ಚಾಲನಾ ಪರವಾನಗಿಯೂ ಬೇಕು.
2) ಆಸ್ಟ್ರೇಲಿಯಾ
ನಿಬಂಧನೆಗಳೊಂದಿಗೆ ಭಾರತೀಯ ಪರವಾನಗಿಯನ್ನು ಸ್ವೀಕರಿಸುವ ದೇಶಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಇಂಗ್ಲಿಷ್‌ನಲ್ಲಿರುವ ಭಾರತೀಯ ಪರವಾನಗಿ ಹೊಂದಿರುವವರು ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್, ಸೌತ್ ಆಸ್ಟ್ರೇಲಿಯಾ, ಆಸ್ಟ್ರೇಲಿಯನ್ ರಾಜಧಾನಿ ಪ್ರದೇಶ ಮುಂತಾದ ಸ್ಥಳಗಳಲ್ಲಿ ವಾಹನ ಚಾಲನೆ ಮಾಡಬಹುದು.
3) ಸಿಂಗಾಪುರ
ಸಾಮಾನ್ಯವಾಗಿ ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಸಿಂಗಾಪುರದಲ್ಲಿ ವಾಹನ ಚಾಲನೆಗೆ ಅಗತ್ಯವಾಗಿರುತ್ತದೆ. ಆದರೆ, ಭಾರತೀಯ ಪರವಾನಗಿಯ ಇಂಗ್ಲಿಷ್ ಆವೃತ್ತಿ ಇದ್ದರೆ, ಸಿಂಗಾಪುರದಲ್ಲಿ ಒಂದು ವರ್ಷದವರೆಗೆ ವಾಹನ ಚಾಲನೆ ಮಾಡಬಹುದು.
4) ದಕ್ಷಿಣ ಆಫ್ರಿಕಾ
ಭಾರತೀಯ ಪರವಾನಗಿಯನ್ನು ಸ್ವೀಕರಿಸುವ ಇನ್ನೊಂದು ದೇಶ ದಕ್ಷಿಣ ಆಫ್ರಿಕಾ. ಇಂಗ್ಲಿಷ್‌ನಲ್ಲಿ ಮುದ್ರಿತವಾಗಿರುವ ಭಾರತೀಯ ಪರವಾನಗಿ ಬಳಸಿ ದಕ್ಷಿಣ ಆಫ್ರಿಕಾದ ಸೌಂದರ್ಯವನ್ನು ಆನಂದಿಸಬಹುದು.
5) ಯುನೈಟೆಡ್ ಕಿಂಗ್‌ಡಮ್ (ಯುಕೆ)
ಭಾರತೀಯ ಚಾಲನಾ ಪರವಾನಗಿ ಬಳಸಿ ಯುಕೆಯಲ್ಲಿ ಒಂದು ವರ್ಷ ವಾಹನ ಚಾಲನೆ ಮಾಡಬಹುದು. ಆದರೆ, ನಿಮ್ಮ ಭಾರತೀಯ ಚಾಲನಾ ಪರವಾನಗಿಯಲ್ಲಿ ನಿರ್ದಿಷ್ಟಪಡಿಸಿದ ವಾಹನ ವರ್ಗಗಳನ್ನು ಮಾತ್ರ ನೀವು ಚಾಲನೆ ಮಾಡಲು ಅನುಮತಿ ಇರುತ್ತದೆ.
6) ಸ್ವಿಟ್ಜರ್ಲೆಂಡ್
ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಪ್ರಿಯವಾದ ಸ್ವಿಟ್ಜರ್ಲೆಂಡ್‌ನಲ್ಲಿ ಭಾರತೀಯ ಪರವಾನಗಿ ಬಳಸಿ ವಾಹನ ಚಾಲನೆ ಮಾಡಬಹುದು. ಒಂದು ವರ್ಷದ ಅವಧಿಗೆ ಅನುಮತಿ ಇದೆ. ಇಂಗ್ಲಿಷ್‌ನಲ್ಲಿರುವ ಭಾರತೀಯ ಚಾಲನಾ ಪರವಾನಗಿಯ ಪ್ರತಿ ಇದ್ದರೆ, ನೀವು ಕಾರನ್ನು ಬಾಡಿಗೆಗೆ ಪಡೆಯಬಹುದು.
7) ಸ್ವೀಡನ್
ಭಾರತದ ಪರವಾನಗಿಯನ್ನು ಸ್ವೀಕರಿಸುವ ಇನ್ನೊಂದು ದೇಶ ಸ್ವೀಡನ್. ನಿಮ್ಮ ಪರವಾನಗಿ ಸ್ವೀಡಿಷ್, ಇಂಗ್ಲಿಷ್, ಫ್ರೆಂಚ್, ಜರ್ಮನ್ ಅಥವಾ ನಾರ್ವೇಜಿಯನ್ ಭಾಷೆಯಲ್ಲಿ ಮುದ್ರಿತವಾಗಿರಬೇಕು.
8) ಸ್ಪೇನ್
ಅಗತ್ಯವಾದ ನಿವಾಸ ನೋಂದಣಿ ಪೂರ್ಣಗೊಳಿಸಿದ ನಂತರ ಭಾರತೀಯ ಚಾಲನಾ ಪರವಾನಗಿ ಬಳಸಿ ಸ್ಪೇನ್‌ನಲ್ಲಿ ಪ್ರಯಾಣಿಸಬಹುದು. ನಿಮ್ಮ ಗುರುತಿನ ದಾಖಲೆಗಳನ್ನು ನೀವು ಸಲ್ಲಿಸಬೇಕಾಗಬಹುದು.