ಮಾತುಕತೆ ಮೂಲಕ ಬಿಕ್ಕಟ್ಟು ಪರಿಹಾರಕ್ಕೆ ಪ್ರಧಾನಿ ಸಲಹೆ ಯುರೋಪಿಯನ್ ಒಕ್ಕೂಟದೊಡನೆ ಶೀಘ್ರ ಮುಕ್ತ ವ್ಯಾಪಾರ ಒಪ್ಪಂದ ದೇಶದಲ್ಲಿ ಹೂಡಿಕೆಗೆ ಆಹ್ವಾನ ನೀಡಿದ ಪ್ರಧಾನಿ ಮೋದಿ
ಕೋಪನ್‌ಹೇಗನ್(ಮೇ.04): ಉಕ್ರೇನ್‌ನಲ್ಲಿ ತಕ್ಷಣ ಕದನ ವಿರಾಮವನ್ನು ಘೋಷಿಸಿ ಉಭಯ ದೇಶಗಳು ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವಿದೇಶಿ ಪ್ರವಾಸದಲ್ಲಿರುವ ಮೋದಿ ಮಂಗಳವಾರ ಡೆನ್ಮಾರ್ಕ್ಗೆ ಭೇಟಿ ನೀಡಿದ್ದು, ಡ್ಯಾನಿಶ್ ಪ್ರಧಾನಿ ಮೆಟ್ಟಿಫ್ರೆಡ್ರಿಕ್‌ಸನ್ ಜೊತೆಗೆ ಉಕ್ರೇನಿನ ಬಿಕ್ಕಟ್ಟಿನಿಂದಾಗಿ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು ಸೇರಿದಂತೆ ಜಾಗತಿಕ ಪರಿಣಾಮಗಳ ಬಗ್ಗೆ ಮೆರಿನಬಗ್‌ರ್‍ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಚರ್ಚೆ ನಡೆಸಿದರು. ಉಕ್ರೇನಿನಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆಯ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ ಮೋದಿ, ಕೂಡಲೇ ಯುದ್ಧ ವಿರಾಮವನ್ನು ಘೋಷಿಸಿ, ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ತಿಳಿಸಿದಂತೇ ಮಾತುಕತೆಯ ಬಿಕ್ಕಟ್ಟನ್ನು ಪರಿಹರಿಸಲು ಉಭಯ ದೇಶಗಳು ಮುಂದಾಗಬೇಕು. ದೇಶದ ಸಮಗ್ರತೆ, ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕಾನೂನುಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಮತ್ತೆ ಪ್ರಧಾನಿಯಾಗಿ ಮೋದಿ ಬಯಸಿದ ಜರ್ಮನಿಯ ಭಾರತೀಯರು!
ಈ ವೇಳೆ ಮಾತನಾಡಿದ ಫ್ರೆಡ್ರಿಕ್‌ಸನ್ ‘ಪುಟಿನ್ ಯುದ್ಧವನ್ನು ನಿಲ್ಲಿಸಿ, ಉಕ್ರೇನಿನಲ್ಲಿ ನಡೆಯುತ್ತಿರುವ ಮಾರಣಹೋಮವನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಭಾರತವು ರಷ್ಯಾದ ಮೇಲೆ ತನ್ನ ಪ್ರಭಾವ ಬೀರಲಿದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದ
ಉಕ್ರೇನ್ ಬಿಕ್ಕಟ್ಟಿನಿಂದಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಹಣದುಬ್ಬರವನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ-ಫೆಸಿಪಿಕ್ ವಲಯದಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಅನುಕೂಲತೆಯ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಭಾರತ-ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶೀಘ್ರ ಅಂಕಿತ ಬೀಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಹೂಡಿಕೆಗೆ ಆಹ್ವಾನ
ಭಾರತದಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಆರ್ಥಿಕ ಸುಧಾರಣೆಯಿಂದಾಗಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಿವೆ. ದೇಶದಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಹಾಗೂ ಹಸಿರು ಶಕ್ತಿ ಉತ್ಪಾದನೆ ವಿಚಾರವಾಗಿ ಹೂಡಿಕೆಗೆ ಉತ್ತಮ ಅವಕಾಶಗಳಿವೆ ಎಂದು ದೇಶದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದರು.ಅಲ್ಲದೇ ಭಾರತ ಡೆನ್ಮಾರ್ಕ್ ವ್ಯಾಪಾರ ವೇದಿಕೆಯನ್ನುದ್ದೇಶಿಸಿ ಮೋದಿ ಮಾತನಾಡಿದರು.
ವಿದೇಶದ ನೈಟ್ ಕ್ಲಬ್‌ನಲ್ಲಿ ರಾಹುಲ್ : ಮೋದಿ ಪ್ರವಾಸ ಟೀಕಿಸಿದ ಕಾಂಗ್ರೆಸ್‌ಗೆ ಮುಜುಗರ
ಉಕ್ರೇನ್-ರಷ್ಯಾ ಬಿಕ್ಕಟ್ಟಿನಲ್ಲಿ ಭಾರತ ಶಾಂತಿ ಪರ
ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಭಾರತವು ಶಾಂತಿಯ ಪರವಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ. ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್‌್ಜ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಉಕ್ರೇನ್-ರಷ್ಯಾ ಯುದ್ಧದಲ್ಲಿ ಯಾರೂ ವಿಜೇತರೆನಿಸಿಕೊಳ್ಳಲಾರರು. ಯುದ್ಧ ಎಲ್ಲರಿಗೂ ನಷ್ಟವನ್ನೇ ಉಂಟು ಮಾಡಲಿದೆ. ಹೀಗಾಗಿ ನಾವು ಶಾಂತಿಯ ಪರವಾಗಿದ್ದೇವೆ’ ಎಂದರು.
‘ಉಕ್ರೇನ್ ಬಿಕ್ಕಟ್ಟಿನಿಂದಾಗಿ ತೈಲ ಬೆಲೆ ಗಗನಕ್ಕೇರಿದೆ, ಆಹಾರ, ರಸಗೊಬ್ಬರದ ತೀವ್ರ ಕೊರತೆ ಕಾಡುತ್ತಿದೆ. ಯುದ್ಧದ ಹೊರೆಯನ್ನು ಜಗತ್ತಿನ ಪ್ರತಿ ಕುಟುಂಬವೂ ಹೊರುತ್ತಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಹಾಗೂ ಬಡ ರಾಷ್ಟ್ರಗಳಿಗೆ ಇನ್ನಷ್ಟುಸಂಕಷ್ಟವನ್ನು ತಂದೊಡ್ಡಿದೆ’ ಎಂದು ಹೇಳಿದರು.ಯುದ್ಧದಿಂದಾದ ಮಾನವೀಯ ಪರಿಣಾಮಗಳ ಬಗ್ಗೆಯೂ ಭಾರತವು ಕಳಕಳಿ ಹೊಂದಿದೆ ಎಂದರು.
