ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಮಹಿಳೆಯೊಬ್ಬರು ವೀಡಿಯೊ ಕರೆ ಮಾಡುತ್ತಾ ಮೊಬೈಲ್ ಫೋನನ್ನು ಗಂಗೆಯಲ್ಲಿ ಮುಳುಗಿಸಿ ಪುಣ್ಯಸ್ನಾನ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಇನ್ನೇನು ಕಡೆಯ ಹಂತ ತಲುಪಿದ್ದು, ನಾಳೆಯ ಶಿವರಾತ್ರಿಯೊಂದಿಗೆ ಅಂತ್ಯವಾಗಲಿದೆ. ಜನವರಿ 13ರಿಂದ ಆರಂಭವಾದ ಈ ಕುಂಭ ಮೇಳದಲ್ಲಿ ಶ್ರೀಮಂತರು ಬಡವರು ಎನ್ನದೇ ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಪುಣ್ಯಸ್ನಾನ ಮಾಡಿದ್ದಾರೆ. ಒಬ್ಬ ವ್ಯಕ್ತಿ ಜೀವನದಲ್ಲಿ ಒಮ್ಮೆ ಮಾತ್ರ ಇಂತಹ ಮಹಾಕುಂಭ ಮೇಳವನ್ನು ನೋಡಲು ಸಾಧ್ಯ. ಇಂತಹ ಮಹಾಕುಂಭ ಮೇಳವನ್ನು ಮತ್ತೆ ನೋಡಬೇಕು ಎಂದರೆ ಸುಮಾರು 144 ವರ್ಷ ಕಾಯಬೇಕು. ಹೀಗಿರುವಾಗ ಈ ಮಹಾಕುಂಭ ಮೇಳವೂ ಹಲವು ವಿಶೇಷಗಳಿಗೆ ಸಾಕ್ಷಿಯಾದವು. ಈ ಮಹಾ ಕುಂಭ ಮೇಳದ ಹೆಸರಿನಲ್ಲಿ ಅನೇಕರು ಲಕ್ಷ , ಸಾವಿರದ ಲೆಕ್ಕದಲ್ಲಿ ದುಡಿಮೆ ಮಾಡಿದರು. ಅಲ್ಲದೇ ಕೆಲವರು ಫೋಟೋಗಳನ್ನು ಗಂಗೆಯಲ್ಲಿ ಮುಳುಗಿಸುವ ಮೂಲಕ ಡಿಜಿಟಲ್ ಪುಣ್ಯಸ್ನಾನ ಮಾಡಿಸುವುದಾಗಿ ಪ್ರಚಾರ ಮಾಡಿದರು. ಇದರ ವೀಡಿಯೋವೂ ಹಾಗೂ ಜಾಹೀರಾತು ಕೂಡ ಇತ್ತೀಚೆಗೆ ವೈರಲ್ ಆಗಿತ್ತು. 1100 ರೂಪಾಯಿ ಪಡೆದು ಗಂಗೆಯಲ್ಲಿ ಫೋಟೋಗಳನ್ನು ಮುಳುಗಿಸುವ ಮೂಲಕ ಪುಣ್ಯಸ್ನಾನ ಮಾಡಿಸುವುದಾಗಿ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದ. ಇದರ ಜೊತೆಗೆ ಈಗ ಇನ್ನೊಂದು ವೀಡಿಯೋ ವೈರಲ್ ಆಗಿದೆ.
ಕುಂಭ ಮೇಳಕ್ಕೆ ಬಂದ ಮಹಿಳೆಯೊಬ್ಬಳು ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದ್ದಾಳೆ. ಜೊತೆಗೆ ಪತಿಗೆ ವೀಡಿಯೋ ಕಾಲ್ ಮಾಡುತ್ತಲೇ ಮೊಬೈಲ್ ಫೋನನ್ನು ಮೂರು ಬಾರಿ ಗಂಗೆಯಲ್ಲಿ ಮುಳುಗಿಸಿ ಎತ್ತಿದ್ದಾಳೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋ ಕಾಲ್‌ನಲ್ಲಿ ಪತಿ ಇರುವಾಗಲೇ ಪತಿಗೆ ಆಕೆ ಮೊಬೈಲ್ ಮುಳುಗಿಸುವ ಮೂಲಕ ಪುಣ್ಯಸ್ನಾನ ಮಾಡಿಸಿ ಪಾಪ ತೊಳೆದಿದ್ದಾಳೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಹಿಳೆಯ ನಡೆಗೆ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನೇಕರು ಹಾಸ್ಯವಾಗಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಪತ್ನಿಯ ಈ ಕೃತ್ಯದಿಂದ ಎಲ್ಲಾ ಪಾಪಗಳು ತೊಳೆದು ಹೋಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇದು ಪಾಪ ತೊಳೆಯುವ ಹೊಸ ಕ್ರಮ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.
