ಲಗೇಜ್ ಹಿಡಿದು ಹಳಿ ದಾಟಿದ ಮಹಿಳೆ, ರೈಲು ಬಂದರೂ ಪವಾಡ ಸದೃಶ ರೀತಿ ಬಚಾವ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬರು ರೈಲು ಬರುತ್ತಿರುವ ವೇಳೆ ಹಳಿ ದಾಟಲು ಹೋಗಿ ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿದ್ದಾರೆ.
ರೈಲು ಬರುತ್ತಿರುವ ವೇಳೆ ರೈಲು ಹಳಿಯನ್ನು ದಾಟದಿರಿ ಚಲಿಸುತ್ತಿರುವ ರೈಲಿನಿಂದ ಇಳಿಯದಿರಿ. ಚಲಿಸುವ ರೈಲನ್ನು ಚೇಸ್ ಮಾಡಲು ಹೋಗದಿರಿ ಹೀಗೆ ರೈಲ್ವೆ ಇಲಾಖೆ ಸದಾ ಕಾಲ ತನ್ನ ಪ್ರಯಾಣಿಕರಿಗೆ ಎಚ್ಚರಿಕೆಗಳನ್ನು ನೀಡುತ್ತಲೇ ಇರುತ್ತದೆ. ಕೂದಲೆಳೆ ಅಂತರದಲ್ಲಿ ರೈಲ್ವೆ ಅನಾಹುತದಿಂದ ಜನ ಪಾರಾದ, ಹಾಗೂ ಅವರನ್ನು ರೈಲ್ವೆ ಸಿಬ್ಬಂದಿ ಕ್ಷಣದಲ್ಲಿ ರಕ್ಷಿಸಿದ ಹಲವು ವಿಡಿಯೋಗಳನ್ನು ರೈಲ್ವೆ ಇಲಾಖೆ ಆಗಾಗ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜಾಗೃತಿ ಮೂಡಿಸುತ್ತಿರುತ್ತದೆ.
ಆದಾಗ್ಯೂ ಜನ ಈ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಪ್ರಾಣಕ್ಕೆ ಕಂಟಕ ತಂದುಕೊಳ್ಳುತ್ತಾರೆ. ಅದೇ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬರು ರೈಲು ಬರುತ್ತಿರುವ ವೇಳೆ ಹಳಿ ದಾಟಲು ಹೋಗಿ ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿದ್ದಾರೆ.
ಐಎಎಸ್ ಅಧಿಕಾರಿ ಅವನೀಶ್ ಶರ್ಮಾ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಈಗಾಗಲೇ ಹಳಿ ಮೇಲೆ ನಿಂತಿರುವ ಒಂದು ರೈಲಿನಿಂದ ಇಳಿದ ಮಹಿಳೆ ಹಾಗೂ ಆಕೆಯ ಕುಟುಂಬ ಹಳಿ ದಾಟಲು ಪ್ರಯತ್ನಿಸುತ್ತಿರುತ್ತಾರೆ. ಇವರೊಂದಿಗೆ ಸಾಕಷ್ಟು ಲಗೇಜುಗಳಿರುತ್ತವೆ. ಒಂದು ಲಗೇಜ್‌ನ್ನು ಮೊದಲಿಗೆ ಹಳಿಯ ಮತ್ತೊಂದು ಬದಿಗೆ ಸಾಗಿಸಿದ ಮಹಿಳೆ ಮತ್ತೊಂದು ಲಗೇಜ್ ಹಾಗೂ ತನ್ನ ಪೋಷಕರನ್ನು ಕರೆತರಲು ಮತ್ತೆ ಆ ಬದಿಗೆ ರೈಲು ಬರುತ್ತಿರುವುದನ್ನು ನೋಡುತ್ತಿದ್ದರೂ ದಾಟುತ್ತಲೇ ಮಹಿಳೆ ದಾಟಿದ ಒಂದು ಕ್ಷಣದಲ್ಲಿ ರೈಲು ಆಕೆಯನ್ನು ದಾಟಿ ಮುಂದೆ ಸಾಗಿದ್ದು, ಕೇವಲ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರಾಗಿದ್ದಾಳೆ. ಈ ಭಯಾನಕ ವಿಡಿಯೋ ಈಗ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಅನೇಕರು ಮಹಿಳೆಗೇಕೆ ಇಷ್ಟೊಂದು ತರಾತುರಿ ಜೀವಕ್ಕಿಂತ ವಸ್ತು ಮುಖ್ಯವೇ ಎಂದು ಪ್ರಶ್ನಿಸಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಆರ್ ಪುರಂ ರೈಲ್ವೇ ನಿಲ್ದಾಣದಲ್ಲಿ ಪೊಲೀಸರ ಧೈರ್ಯ ಹಾಗೂ ಸಾಹಸದಿಂದ ಪ್ರಯಾಣಿಕ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಕೆಆರ್ ಪುರಂ ರೈಲು ನಿಲ್ದಾಣದ ಫ್ಲಾಟ್ ಮೇಲಿದ್ದ ವ್ಯಕ್ತಿ ನೇರವಾಗಿ ರೈಲು ಹಳಿ ದಾಟಲು ಮುಂದಾಗಿದ್ದಾನೆ. ಪ್ಲಾಟ್‌ಫಾರ್ಮ್‌ನಿಂದ ಕೆಳಗಿಳಿದ ವ್ಯಕ್ತಿ ಆಯ ತಪ್ಪಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಓಡೋಡಿ ಬಂದಿದ್ದಾರೆ. ಇತ್ತ ರೈಲು ಆಗಮಿಸುತ್ತಿದ್ದಂತೆ ವ್ಯಕ್ತಿಯನ್ನು ಹಳಿಯಿಂದ ಮೇಲೇತ್ತಿ ಜೀವ ಕಾಪಾಡಿದ್ದಾರೆ. ಈ ಭಯಾನಕ ವಿಡಿಯೋ ವೈರಲ್ ನಂತರ ವೈರಲ್ ಆಗಿತ್ತು.
ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪ್ರದೀಪ್ ಕುಮಾರ್ ಹಾಗೂ ಎಎಸ್ಐ ರವಿ ಜಿಡಿ ರೈಲು ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತಿದ್ದಂತೆ ಒಂದು ಬಾರಿ ಹಳಿಯ ಸುತ್ತ ಕಣ್ಣಾಡಿಸಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಹಳಿ ದಾಟಲು ಯತ್ನಿಸಿರುವುದು ಗಮನಕ್ಕೆ ಬಂದಿದೆ. ಇನ್ನೇನು ರೈಲು ಆಗಮಿಸುತ್ತಿದೆ ಅನ್ನುವಷ್ಟರಲ್ಲಿ ಗಾಬರಿಯಾದ ವ್ಯಕ್ತಿ ರೈಲು ಹಳಿಯಲ್ಲೇ ಜಾರಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಪೊಲೀಸ್ ಓಡೋಡಿ ಬಂದಿದ್ದಾರೆ. ವ್ಯಕ್ತಿಯ ಹಿಡಿದು ಮೇಲಕ್ಕಿತ್ತಿ ಅಪಾಯದಿಂದ ಪಾರು ಮಾಡಿದ್ದಾರೆ.
ರೈಲ್ವೇ ನಿಲ್ದಾಣದಲ್ಲಿ ಅತ್ಯಂತ ಜಾಗರೂಕತೆಯಿಂದ ತೆರಳಬೇಕು. ಇದಕ್ಕಾಗಿಯೇ ಸೂಚನಾ ಫಲಕಗಳನ್ನು ಅಳವಡಿಸಿರುತ್ತಾರೆ. ಇಷ್ಟೇ ಅಲ್ಲ ಸೂಚನೆಗಳನ್ನು ಪದೇ ಪದೆ ನೀಡುತ್ತಲೇ ಇರುತ್ತಾರೆ. ಆದರೆ ಇವೆಲ್ಲವನ್ನು ನಿರ್ಲಕ್ಷಿಸಿ ತೆರಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ರೈಲು ಹಳಿಯ ಮೇಲೆ ಇಳಿಯದಂತೆ ಕಟ್ಟು ನಿಟ್ಟಿನ ಸೂಚನೆ ಇದೆ. ಮತ್ತೊಂದು ಬದಿಗೆ ತೆರಳಲು ಸ್ಕೈ ವಾಕ್ ಅಥಾವ ಸುರಕ್ಷಿತ ಮಾರ್ಗಗಳನ್ನು ಮಾಡಲಾಗಿರುತ್ತದೆ. ಆದರೆ ಹಲವರು ಸಮಯದ ಉಳಿತಾಯಕ್ಕಾಗಿ ನೇರವಾಗಿ ಹಳಿಯಿಂದಲೇ ಮತ್ತೊಂದು ಪ್ಲಾಟ್‌ಫಾರ್ಮ್ ತೆರಳುತ್ತಾರೆ. ಇದು ಅಪಾಯತಂದೊಡ್ಡಲಿದೆ. ಈ ರೀತಿ ಹಲವು ಘಟನೆಗಳು ಸಂಭವಿಸಿದೆ. ಹಲವು ಬಾರಿ ಪೊಲೀಸರ ಸಾಹಸಕ್ಕೆ, ಧೈರ್ಯಕ್ಕೆ ಹಾಗೂ ಸಮಯಪ್ರಜ್ಞೆಗೆ ಪ್ರಯಾಣಿಕರ ಪ್ರಾಣ ಉಳಿದಿದೆ. ಆದರೆ ಒಂದು ಕ್ಷಣ ತಡವಾದರೆ ಅಪಘಾತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ