‘ಬಹುಶಃ ನೀವಿದನ್ನು ನಂಬುವುದಿಲ್ಲ. ಈ ಮಹಿಳೆ ನಿಜವಾದ ಮಹಿಳೆಯಲ್ಲ, ಈಕೆ ರೋಬೊಟ್‌. ಕೆಲವೇ ದಿನಗಳ ಹಿಂದೆ ಜಪಾನ್‌ನಲ್ಲಿ ಈ ರೋಬೊಟ್‌ ಬಿಡುಗಡೆ ಮಾಡಲಾಗಿದೆ.’ ಹೀಗೊಂದು ಸಂದೇಶ ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

 

ಈ ಸಂದೇಶದೊಂದಿಗೆ ಒಂದು ವಿಡಿಯೋ ಇದೆ. ಅದರಲ್ಲಿ ರೋಬೊಟ್‌ ಎನ್ನಲಾದ ಮಹಿಳೆಯೊಬ್ಬಳನ್ನು ವ್ಯಕ್ತಿಯೊಬ್ಬ ಸಂದರ್ಶನ ಮಾಡುತ್ತಾನೆ. ಸಂದರ್ಶಕ ಕೇಳುವ ಪ್ರಶ್ನೆಗೆ ರೋಬೊಟ್‌ ಅತ್ಯಂತ ಜಾಣತನದಿಂದ ಉತ್ತರ ನೀಡುತ್ತದೆ ಮತ್ತು ಅದರ ಹಾವಭಾವ ಥೇಟ್‌ ಮಹಿಳೆಯಂತೆಯೇ ಇರುತ್ತದೆ.

‘ಮನುಷ್ಯನ ಬುದ್ಧಿವಂತಿಕೆಯಿಂದ ನಾನು ಸೃಷ್ಟಿಯಾಗಿದ್ದೇನೆ. ನಾನು ಏನು ಬೇಕಾದರೂ ಮಾಡಬಲ್ಲೆ. ಆದರೆ, ನನಗೆ ಆತ್ಮವೊಂದೇ ಇಲ್ಲ’ ಎಂದು ಕೂಡ ಈ ರೋಬೊಟ್‌ ಹೇಳುತ್ತದೆ. ವಿಡಿಯೋ ನೋಡಿದರೆ ಇದು ರೋಬೊಟ್‌ ಎಂದು ನಂಬುವಂತೆಯೇ ಇಲ್ಲ.

Fact Check: ಶಹೀನ್‌ ಭಾಗ್‌ ಪ್ರತಿಭಟನಾಕಾರರು ದುಡ್ಡು ತೆಗೆದುಕೊಂಡರೆ?

ಆದರೆ, ನಿಜವಾಗಿಯೂ ಜಪಾನ್‌ ಇಂತಹದ್ದೊಂದು ರೋಬೊಟ್‌ ತಯಾರಿಸಿದೆಯೇ ಎಂದು ಶೋಧಿಸಿದಾಗ ಇದೊಂದು ವಿಡಿಯೋ ಗೇಮ್‌ ಎಂಬುದು ಪತ್ತೆಯಾಗಿದೆ. ‘ಡೆಟ್ರಾಯ್‌್ಟ: ಬಿಕಮ್‌ ಹ್ಯೂಮನ್‌’ ಹೆಸರಿನ ಈ ವಿಡಿಯೋ ಗೇಮ್‌ಗಾಗಿ ಫ್ರಾನ್ಸ್‌ನ ನಟಿ ಗೇಬ್ರಿಯಲ್‌ ಹಶ್‌ರ್‍ ಎಂಬಾಕೆಯ ಪ್ರತಿರೂಪದಂತೆ ‘ಕ್ಲೋ’ ಎನ್ನುವ ಕ್ಯಾರೆಕ್ಟರ್‌ ತಯಾರಿಸಲಾಗಿದೆ. ಆ ಗೇಮ್‌ನ ಪ್ರೋಮೋ ರೂಪದಲ್ಲಿ ಇಲ್ಲಿರುವ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದನ್ನೇ ಕೆಲವರು ಥೇಟ್‌ ಮನುಷ್ಯನಂತಿರುವ ಮಹಿಳಾ ರೋಬೊಟ್‌ ಅನ್ನು ಜಪಾನ್‌ ತಯಾರಿಸಿದೆ ಎಂದು ಕ್ಯಾಪ್ಷನ್‌ ಬರೆದು ಸೋಷಿಯಲ್‌ ಮೀಡಿಯಾದಲ್ಲಿ ಹರಡುತ್ತಿದ್ದಾರೆ.

- ವೈರಲ್ ಚೆಕ್