* ಛತ್ತೀಸ್‌ಗಢದ ರಾಯ್ಪುರದಲ್ಲಿ ಶಾಕಿಂಗ್ ಘಟನೆ* ರೈಲ್ವೇ ನಿಲ್ದಾಣದಲ್ಲಿ ನಡೆಯಿತು ದುರಂತ* ಸಾವಿನ ಕದ ತಟ್ಟಿದ್ದ ಮಹಿಳೆಯನ್ನು ಕಾಪಾಡಿದ ರೈಲ್ವೇ ಪೊಲೀಸ್
ರಾಯ್ಪುರ(ಜೂ.01): ಕೊಂಚ ಯಾಮಾರಿದ್ರೂ ಅವಘಡ ಸಂಭವಿಸುತ್ತೆ ಎಂಬ ಮಾತಿದೆ. ಈ ಮಾತುಗಳನ್ನು ಹಲವಾರು ಬಾರಿ ಕೇಳಿದರೂ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ರಸ್ತೆ ದಾಟುವಾಗ, ರೈಲಿನಲ್ಲಿ ಹೋಗುವಾಗ ಈ ಮಾತುಗಳನ್ನು ನಾವು ಗಮನದಲ್ಲಿರಿಸಬೇಕಾಗುತ್ತದೆ. ಇಲ್ಲವೆಂದಾದರೆ ಸಾವನ್ನೇ ಎದುರಿಸಬೇಕಾಗುತ್ತದೆ. ಆದರೆ ಹೀಗೇ ಎಡವಟ್ಟು ಮಾಡಿಕೊಂಡ ಮಹಿಳೆಯೊಬ್ಬಳು ಅದೃಷ್ಟವಶಾತ್, ದೇವರ ಅನುಗ್ರಹದಿಂದ ಸಾವಿನ ಕದತಟ್ಟಿ ಹಿಂತಿರುಗಿದ್ದಾರೆ. ಈ ಘಟನೆ ನಡೆದಿದ್ದು ಛತ್ತೀಸ್‌ಗಢದಲ್ಲಿ ನಡೆದಿದೆ.
ಹೌದು ಛತ್ತೀಸ್‌ಗಢದ ರಾಯ್ಪುರ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇಲ್ಲೊಬ್ಬ ಮಹಿಳೆ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ, ಇದ್ದಕ್ಕಿದ್ದಂತೆ ಮಹಿಳೆಯ ಕಾಲು ಜಾರಿ, ಅಲ್ಲೇ ಸಿಕ್ಕಾಕೊಂಡಿದ್ದಾರೆ. ಒಂದು ರೀತಿಯಲ್ಲಿ ಆಕೆ ಇನ್ನೇಢನು ಸಾಯುತ್ತಿದ್ದಳು, ಆದರೆ ಅಷ್ಟರಲ್ಲೇ ರೈಲ್ವೇ ಪೋಲೀಸ್ ದೇವದೂತನಂತೆ ಬಂದು, ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಮಹಿಳೆಯನ್ನು ಸಾವಿನ ದವಡೆಯಿಂದ ಕಾಪಾಡಿ ಮರಳಿ ಕರೆತಂದಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಸ್ವತಃ ರೈಲ್ವೇ ಸಚಿವಾಲಯವೇ ಬಿಡುಗಡೆ ಮಾಡಿದೆ.
ಘಟನೆಯ ವಿವರ
ಈ ಘಟನೆಯ ವಿಡಿಯೋವನ್ನು ಬಿಡುಗಡೆ ಮಾಡಿರುವ ರೈಲ್ವೇ ಸಚಿವಾಲಯ, ಈ ವಿಷಯ ಛತ್ತೀಸ್‌ಗಢದ ರಾಯ್‌ಪುರ ನಿಲ್ದಾಣದಲ್ಲಿ ನಡೆದಿದ್ದು ಎಂದು ಹೇಳಿದೆ. ಇದರಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲು ಹತ್ತುವಾಗ ಏಕಾಏಕಿ ಕೆಳಗೆ ಬಿದ್ದಿದ್ದಾರೆ. ಆದರೆ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಉದ್ಯೋಗಿಯೊಬ್ಬರು ಕೂಡಲೇ ಮಹಿಳೆಯ ಪ್ರಾಣ ಉಳಿಸಿದ್ದಾರೆ. ರೈಲು ಚಲಿಸಲು ಆರಂಭವಾದ ಬಳಿಕ ಮಹಿಳೆ ರೈಲು ಹತ್ತಲು ಓಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆಕೆ ಮೆಟ್ಟಿಲ ಮೇಲೆ ಮೇಲೆ ಹೆಜ್ಜೆ ಇಟ್ಟಿದ್ದಳು ಆದರೆ ಇದ್ದಕ್ಕಿದ್ದಂತೆ ಆಕೆ ನಿಯಂತ್ರಣ ಕಳೆದುಕೊಂಡು ಬೀಳಲು ಪ್ರಾರಂಭಿಸುತ್ತಾಳೆ. ರೈಲ್ವೆ ಪೊಲೀಸರು ಮಹಿಳೆಯತ್ತ ವೇಗವಾಗಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಆರ್‌ಪಿಎಫ್ ಜವಾನನು ಮಹಿಳೆಯನ್ನು ತ್ವರಿತವಾಗಿ ಹಿಡಿದು ಎಳೆದುಕೊಂಡು ಹೋಗಿದ್ದಾನೆ.
ವಿಡಿಯೋ ಭಾರೀ ವೈರಲ್
ಇಡೀ ಘಟನೆ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಟ್ವೀಟ್ ಮಾಡುವ ಮೂಲಕ ರೈಲ್ವೆ ಸಚಿವಾಲಯ ಈ ಘಟನೆಯ ಬಗ್ಗೆ ತಿಳಿಸಿದೆ. ಅಲ್ಲದೆ ಚಲಿಸುವ ರೈಲು ಹತ್ತಲು ಪ್ರಯತ್ನಿಸಬೇಡಿ ಅದು ಮಾರಣಾಂತಿಕವಾಗಬಹುದು ಎಂದೂ ಎಚ್ಚರಿಸಿದೆ. ರೈಲ್ವೇ ಇಲಾಖೆ ಬಿಡುಗಡೆ ಮಾಡಿರುವ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು, ಇದುವರೆಗೆ 20,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 400ಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಇದಲ್ಲದೇ ಸಾಕಷ್ಟು ಮಂದಿ ಪೊಲೀಸರನ್ನು ಶ್ಲಾಘಿಸಿ ಕಮೆಂಟ್ ಮಾಡಿದ್ದಾರೆ. ಆರ್‌ಪಿಎಫ್ ತಂಡಕ್ಕೆ ಅಭಿನಂದನೆಗಳು ಎಂದು ಬಳಕೆದಾರರು ಬರೆದಿದ್ದಾರೆ. ಅಂತಹ ಘಟನೆಯನ್ನು ತಪ್ಪಿಸಲು ಪ್ಲಾಟ್‌ಫಾರಂ ಮಟ್ಟವನ್ನು ಹೆಚ್ಚಿಸಬಹುದು ಎಂದೂ ಸಲಹೆ ನೀಡಿದ್ದಾರೆ.