ನಿದ್ದೆಗೆ ಜಾರಿದ ಉಬರ್ ಚಾಲಕ, ಪುಣೆಯಿಂದ ಮುಂಬೈಗೆ ತಾನೇ ಕಾರು ಚಲಾಯಿಸಿದ ಮಹಿಳೆ!
ಆರಾಮದಾಯಕ ಪ್ರಯಾಣಕ್ಕಾಗಿ ಕ್ಯಾಬ್ ಬುಕ್ ಮಾಡಿದ ಮಹಿಳೆ| ಕಾರು ಚಲಾಯಿಸುವಾಗಲೇ ನಿದ್ದೆಗೆ ಜಾರಿದ ಕ್ಯಾಬ್ ಚಾಲಕ| ಚಾಲಕನನ್ನು ಬದಿಗೊತ್ತಿ ತಾನೇ ಕ್ಯಾಬ್ ಚಲಾಯಿಸಿದ ಮಹಿಳೆ
ಮುಂಬೈ[ಫೆ.04]: ವಾಹನ ಚಲಾಯಿಸುವಾಗ ಡ್ರೈವರ್ ನಿದ್ದೆಗೆ ಜಾರಿದರೆ ಅದಕ್ಕಿಂತ ಭಯಾನಕ ಬೇರೇನಿಲ್ಲ. ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಬಹುತೇಕರು ಕ್ಯಾಬ್ ನಂಬಿಕೊಂಡೇ ಜೀವನ ಸಾಗಿಸುತ್ತಾರೆ. ಕ್ಯಾಬ್ ಪ್ರಯಾಣ ಆರಾಮದಾಯಕ ಮಾತ್ರವಲ್ಲ ಡ್ರೈವ್ ಮಾಡುವ ಸಮಸ್ಯೆಯಿಂದಲೂ ಪಾರು ಮಾಡುತ್ತದೆ. ಆದರೀಗ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಊಬರ್ ಚಾಲಕ ಕಾರು ಕೆಲ ದೂರ ಚಲಾಯಿಸುವಷ್ಟರಲ್ಲೇ ನಿದ್ದೆಗೆ ಜಾರಿದ್ದು, ಬೇರೆ ವಿಧಿ ಇಲ್ಲದ ಗ್ರಾಹಕಿ ತಾನೇ ಕಾರು ಚಲಾಯಿಸಿದ್ದಾಳೆ.
ಹೌದು ಈ ಘಟನೆ ಪುಣೆಯಲ್ಲಿ ನಡೆದಿದ್ದು, ಇಲ್ಲಿನ ಮಹಿಳೆ ಮುಂಬೈಗೆ ತೆರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದಳು. ಮುಂಬೈನಿಂದ ಪುಣೆಗೆ ತಲುಪಲು ಸುಮಾರು 3 ತಾಸು ಕಾರು ಚಲಾಯಿಸಬೇಕಾಗುತ್ತದೆ. ನಿಗದಿಯಂತೆ ಕ್ಯಾಬ್ ಚಾಲಕ ಸಮಯಕ್ಕೆ ಸರಿಯಾಗಿ ಪಿಕಪ್ ಪಾಂಯ್ಟ್ ಗೆ ತಲುಪಿದ್ದಾನೆ. ಮಹಿಳೆ ಕಾರನ್ನೇರುತ್ತಿದ್ದಂತೆಯೇ ಮುಂಬೈನೆಡೆ ಪ್ರಯಾಣ ಆರಂಭಿಸಿದ್ದಾನೆ. ಆದರೆ ಕೆಲವೇ ದೂರ ಕ್ರಮಿಸುತ್ತಿದ್ದಂತೆ ಅಚಾನಕ್ಕಾಗಿ ಆತ ನಿದ್ದೆಗೆ ಜಾರಿದ್ದಾನೆ.
ಡ್ರೈವಿಂಗ್ ವೇಳೆ ಆತ ಯಾವ ರೀತಿ ನಿದ್ದೆಗೆ ಜಾರಿದ್ದನೆಂದರೆ ಆತ ಕಾರು ಚಲಾಯಿಸುತ್ತಿದ್ದಾಗಲೇ ಸ್ಟೇರಿಂಗ್ ವ್ಹೀಲ್ ಮೇಲೆ ಮಲಗಿಕೊಂಡಿದ್ದಾನೆ. ಅದೃಷ್ಟವಶಾತ್ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಡ್ರೈವರ್ ನಿದ್ದೆಗೆ ಜಾರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಆಕೆ ಡ್ರೈವರ್ ಬಳಿ ಕಾರು ನಿಲ್ಲಿಸುವಂತೆ ಹೇಳಿ, ಆತನನ್ನು ಪಕ್ಕದ ಸೀಟಿಗೆ ಜಾರುವಂತೆ ಆದೇಶಿಸಿದ್ದಾಳೆ. ಬಳಿಕ ತಾನೇ ಕಾರು ಟ್ರೈವ್ ಮಾಡಿ ಮುಂಬೈ ತಲುಪಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಹೆಸರು ತೇಜಸ್ವಿನಿಯಾಗಿದ್ದು, ಆಕೆ ಈ ಕುರಿತು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಉಬರ್ ಅಧಿಕೃತ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಸದ್ಯ ಈ ವಿಚಾರ ವೈರಲ್ ಆಗುತ್ತಿದ್ದು, ಮಹಿಳೆಯ ಧೈರ್ಯಕ್ಕೆ ಎಲ್ಲರೂ ಭೇಷ್ ಎಂದಿದ್ದಾರೆ.
ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ