ಅಮರಾವತಿ(ಜ.02): ಸರ್ಕಾರಿ ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸುವ, ಅವರ ಕಷ್ಟದಲ್ಲಿ ಭಾಗಿಯಾಗಿ ಮಾನವೀಯತೆ ತೋರುವ ಘಟನೆಗಳು ಆಗಾಗ ಸದ್ದು ಮಾಡುತ್ತಿರುತ್ತವೆ. ಹೀಗಿರುವಾಗ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅನಾಥ ಶವಕ್ಕೆ ಹೆಗಲು ಕೊಟ್ಟು, ವಿಧಿ ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸದ್ಯ ಅವರ ಈ ಮಾನವೀಯ ನಡೆಯ ಪೋಟೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಮಹಿಳಾ ಅಧಿಕಾರಿಯ ನಡೆಗೆ ಸೆಲ್ಯೂಟ್ ಎಂದಿದ್ದಾರೆ.

ಹೌದು ಈ ಘಟನೆ ನಡೆದದ್ದು ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ. ಈ ಪೊಲೀಸ್​ ಠಾಣೆಯ ಮಹಿಳಾ ಪಿಎಸ್​ಐ ಕೆ. ಸಿರಿಶಾ ತಮ್ಮ ಕಾರ್ಯ ವೈಖರಿಯಿಂದ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಸುಮಾರು 2 ಕಿ.ಮೀ ವರೆಗೆ ಈ ಪೊಲೀಸ್ ಅಧಿಕಾರಿ ಇತರ ಇಬ್ಬರು ವ್ಯಕ್ತಿಗಳ ಜೊತೆ ಸೇರಿ, ಅಪರಿಚಿತ ವ್ಯಕ್ತಿಯ ಶವವನ್ನು ಹೊತ್ತೊಯ್ದು, ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇನ್ನು ಈ ಅಪರಿಚಿತ ವ್ಯಕ್ತಿ ಭಿಕ್ಷುಕನಾಗಿದ್ದು, ಅನಾರೋಗ್ಯದಿಂದಾಗಿ ರಸ್ತೆ ಬದಿಯಲ್ಲೇ ಕೊನೆಯುಸಿರೆಳೆದಿದ್ದ. ಅನಾಥನಾಗಿದ್ದ ಈತನ ಬಳಿಗೆ ಯಾರೂ ಸುಳಿದಾಡಿರಲಿಲ್ಲ. ಈ ಮಾಹಿತಿ ಪಡೆದ ಮಹಿಳಾ ಪಿಎಸ್​ಐ ಸಿರಿಶಾ ಸ್ಥಳಕ್ಕೆ ತೆರಳಿ, ಸ್ವತಃ ಮುಂದೆ ಬಂದು ಕೆಲ ಸ್ಥಳೀಯರ ಜತೆಗೂಡಿ ಮೃತದೇಹಕ್ಕೆ ಹೆಗಲು ಕೊಟ್ಟಿದ್ದಾರೆ. ಬಳಿಕ ಲಲಿತಾ ಚಾರಿಟಬಲ್​ ಟ್ರಸ್ಟ್​ ಸಹಕಾರದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಸೋಮವಾರ ನಡೆದ ಈ ಘಟನೆಯ ವಿಡಿಯೋ ಹಾಗೂ ಫೋಟೋಗಳು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಸಂಬಂಧಿಕರೇ ವ್ಯಕ್ತಿಯೊಬ್ಬ ಮೃತಪಟ್ಟಾಗ ಹೆಗಲು ಕೊಡಲು ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ, ಅನಾಥ ಶವವೊಂದನ್ನು ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ನೇರವೇರಿಸಿರುವ ಸಿರಿಶಾರವರ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.