* ಟಿಕಾಯತ್ ಮುಖಕ್ಕೆ ಮಸಿ, ಮಹಿಳೆ ಮನೆಯಲ್ಲಿ ಮಾರಕಾಸ್ತ್ರ ಪತ್ತೆ* ಮಸಿ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸರ್ಕಾರ* ಮಹಿಳೆ 5 ದಿನ ಪೊಲೀಸ್‌ ವಶಕ್ಕೆ, ವಿಚಾರಣೆ* ರೈತ ನಾಯಕನಿಗೆ ಮಸಿ ಬಳಿಯಲು ಶಿವಕುಮಾರ್‌ಗೆ ಆತನ ಸಹೋದರಿ ಉಮಾದೇವಿ ಕುಮ್ಮಕ್ಕು?

ಬೆಂಗಳೂರು(ಜೂ.07): ರೈತ ನಾಯಕ ರಾಕೇಶ್‌ ಟಿಕಾಯತ್‌ಗೆ ಮಸಿ ಬಳಿದು ಹಲ್ಲೆ ಮಾಡಿದ ಪ್ರಕರಣ ಸಂಬಂಧ ಮಹಿಳಾ ಸಂಘಟನೆಯೊಂದರ ಅಧ್ಯಕ್ಷೆಯನ್ನು ಹೈಗ್ರೌಂಡ್‌್ಸ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಾಳ ನಿವಾಸಿ ಉಮಾದೇವಿ(52) ಬಂಧಿತ ಆರೋಪಿ. ಆಕೆಯ ಮನೆಯಲ್ಲಿ ಪತ್ತೆಯಾದ ಮಚ್ಚು, ಲಾಂಗ್‌ ಸೇರಿದಂತೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಮೇ 30ರಂದು ನಗರದ ಗಾಂಧಿ ಭವನದಲ್ಲಿ ರೈತ ನಾಯಕ ರಾಕೇಶ್‌ ಟಿಕಾಯತ್‌ಗೆ ಮಸಿ ಬಳಿದು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಈಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಪ್ಪು ಮಸಿ, ಮಾರಣಾಂತಿಕ ದಾಳಿ ರೈತರ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ: ರಾಕೇಶ್ ಟಿಕಾಯತ್

ಟಿಕಾಯತ್‌ ಮೇಲೆ ಹಲ್ಲೆ ಸಂಬಂಧ ಈ ಹಿಂದೆ ಭರತ್‌ ಶೆಟ್ಟಿ, ಶಿವಕುಮಾರ್‌, ಪ್ರದೀಪ್‌ ನಾಯಕ್‌ನನ್ನು ಬಂಧಿಸಲಾಗಿದೆ. ಆರೋಪಿ ಶಿವಕುಮಾರ್‌ ಸಹೋದರಿಯಾಗಿರುವ ಉಮಾದೇವಿ ಶಿವಶಕ್ತಿ ಮಹಿಳಾ ಸಂಘಟನೆಯ ಅಧ್ಯಕ್ಷೆಯಾಗಿದ್ದಾಳೆ. ಘಟನೆ ದಿನ ಸ್ಥಳದಲ್ಲೇ ಇದ್ದು ಟಿಕಾಯತ್‌ ಮೇಲೆ ಹಲ್ಲೆಗೆ ಆರೋಪಿಗಳನ್ನು ಪ್ರೇರೇಪಿಸಿದ್ದಳು ಎನ್ನಲಾಗಿದೆ.

ಪ್ರಕರಣದ ತನಿಖೆ ವೇಳೆ ಪೊಲೀಸರು ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ಶಿವಕುಮಾರ್‌, ಸಹೋದರಿ ಉಮಾದೇವಿಯ ಸೂಚನೆಯಂತೆ ರೈತ ನಾಯಕ ಟಿಕಾಯತ್‌ಗೆ ಮಸಿ ಬಳಿದು ಹಲ್ಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ ಎನ್ನಲಾಗಿದೆ. ಈ ಹೇಳಿಕೆ ಮೇರೆಗೆ ಪೊಲೀಸರು ಉಮಾದೇವಿಯನ್ನು ಬಂಧಿಸಿದ್ದಾರೆ. ಆಕೆಯ ಮನೆ ಮೇಲೆ ದಾಳಿ ಮಾಡಿ ತಪಾಸಣೆ ಮಾಡಿದಾಗ ಮಾರಕಾಸ್ತ್ರಗಳು ಪತ್ತೆಯಾಗಿವೆ

ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ

ಆರೋಪಿ ಉಮಾದೇವಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನ ವಶಕ್ಕೆ ಪಡೆದಿರುವ ಪೊಲೀಸರು, ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ರಾಷ್ಟ್ರಮಟ್ಟದ ರೈತ ನಾಯಕ ರಾಕೇಶ್‌ ಟಿಕಾಯತ್‌ ಮೇಲೆ ಹಲ್ಲೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಸ್ವೀಕರಿಸಿದೆ. ಹೀಗಾಗಿ ಪೊಲೀಸರು ಆರೋಪಿ ಉಮಾದೇವಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮನೆಯಲ್ಲಿ ಪತ್ತೆಯಾದ ಮಾರಕಸ್ತ್ರಗಳ ಬಗ್ಗೆಯೂ ವಿಚಾರಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.