ನವದೆಹಲಿ(ಜೂ.09): ಇತ್ತೀಚೆಗೆ ಭಾರತ ಮತ್ತು ಬಾಂಗ್ಲಾದೇಶದ ಮೇಲೆ ಅಪ್ಪಳಿಸಿದ ಅಂಫಾನ್‌ ಚಂಡಮಾರುತದ ಕುರಿತು ಅತ್ಯಂತ ನಿಖರವಾಗಿ ಮುನ್ಸೂಚನೆ ನೀಡುವ ಮೂಲಕ ಭಾರೀ ಪ್ರಮಾಣದಲ್ಲಿ ಸಾವು- ನೋವು ತಪ್ಪಿಸುವಲ್ಲಿ ಯಶಸ್ವಿಯಾದ ಭಾರತೀಯ ಹವಾಮಾನ ಇಲಾಖೆಯನ್ನು ವಿಶ್ವ ಹವಾಮಾನ ಇಲಾಖೆ ಪ್ರಶಂಸಿಸಿದೆ.

ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆಗೆ ಪತ್ರ ಬರೆದಿರುವ ವಿಶ್ವ ಹವಾಮಾನ ಇಲಾಖೆ, ಚಂಡಮಾರುತದ ವೇಗ, ಹಾದಿ, ಅಪ್ಪಳಿಸುವಿಕೆ, ಮಳೆ ಮುಂತಾದವುಗಳ ಬಗ್ಗೆ ನಿಖರ ಮಾಹಿತಿ ನೀಡಿದ್ದರಿಂದಾಗಿ ಚಂಡ ಮಾರುತ ಎದುರಿಸಲು ಎಲ್ಲಾ ಕ್ರಮ ಕೈಗೊಳ್ಳಲು ಅನುಕೂಲವಾಆಯ್ತು ಎಂದು ಪತ್ರದಲ್ಲಿ ಪ್ರಶಂಸಿಸಿದೆ. ಭಾರತದಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮೇಲೆ ಚಂಡಮಾರುತ ಅಪ್ಪಳಿಸಿತ್ತು.

ಒಡಿಶಾದಲ್ಲಿ 6 ಜನರನ್ನು ಬಲಿ ಪಡೆದ ಅಂಫಾನ್

ಗಂಟೆಗೆ 190 ಕಿ.ಮೀ. ವೇಗದ ಬಿರುಗಾಳಿ ಮಳೆಯೊಂದಿಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಅಪ್ಪಳಿಸಿದ ‘ಅಂಫಾನ್‌’ ಚಂಡಮಾರುತ ಘೋರ ಅನಾಹುತ ಸೃಷ್ಟಿಸಿದೆ. ಅದರಲ್ಲೂ ಕಳೆದ 100 ವರ್ಷಗಳ ಇತಿಹಾಸದಲ್ಲಿ ಬಂಗಾಳ ಕಂಡ ಅತ್ಯಂತ ತೀಕ್ಷ್ಣ ಸ್ವರೂಪದ ಚಂಡಮಾರುತ ಇದಾಗಿದ್ದು, ಕೊರೋನಾದಿಂದ ನಲುಗಿದ್ದ ರಾಜ್ಯವನ್ನು ಮತ್ತಷ್ಟು ಕಂಗೆಡಿಸಿದೆ. ಚಂಡಮಾರುತದ ಅಬ್ಬರ ಬಂಗಾಳದಲ್ಲಿ 72, ಒಡಿಶಾದಲ್ಲಿ 6 ಜನರನ್ನು ಬಲಿ ಪಡೆದಿದ್ದು, ಅಂದಾಜು 1 ಕೋಟಿ ಜನರನ್ನು ತೀವ್ರ ಸಮಸ್ಯೆಯ ಮಡಿಲಿಗೆ ತಳ್ಳಿದೆ. ಈ ಪ್ರಕೃತಿ ವಿಕೋಪದಿಂದ ರಾಜ್ಯ 1 ಲಕ್ಷ ಕೋಟಿ ರು. ಹಾನಿ ಅನುಭವಿಸಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು.