ನವದೆಹಲಿ(ಅ.28): ತನ್ನ ನೆಲದಿಂದ ನಡೆಯುತ್ತಿರುವ ಭಯೋತ್ಪಾದನೆಯನ್ನು ಮಟ್ಟಹಾಕಲು ಪಾಕಿಸ್ತಾನ ತ್ವರಿತ, ಸುಸ್ಥಿರ ಮತ್ತು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತ ಮತ್ತು ಅಮರಿಕ ದೇಶಗಳು ಮಂಗಳವಾರ ಜಂಟಿಯಾಗಿ ಆಗ್ರಹಿಸಿವೆ.

ಭಾರತ ಮತ್ತು ಅಮೆರಿಕ ನಡುವಿನ 2+2 ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯ ವೇಳೆ ಹೇಳಿಕೆ ಬಿಡುಗಡೆ ಮಾಡಿದ ಉಭಯ ದೇಶಗಳ ರಕ್ಷಣಾ ಹಾಗೂ ವಿದೇಶಾಂಗ ಸಚಿವರು, ಪಾಕಿಸ್ತಾನ ಭಯೋತ್ಪಾದನೆಯನ್ನು ಪೋಷಿಸುತ್ತಿರುವುದನ್ನು ಖಂಡಿಸಿದ್ದಾರೆ. 26/11 ಮುಂಬೈ ದಾಳಿ, ಉರಿ, ಪಠಾಣ್‌ಕೋಟ್‌ ದಾಳಿಕೋರರಿಗೆ ಶಿಕ್ಷಿಸುವ ಮೂಲಕ ಪಾಕಿಸ್ತಾನ ನ್ಯಾಯ ಒದಗಿಸಬೇಕು. ಅಲ್‌ ಖೈದಾ, ಐಸಿಸ್‌, ಲಷ್ಕರ್‌ ಎ ತೊಯಿಬಾ, ಜೈಷ್‌ ಎ ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದ್ದೀನ್‌ ಸೇರಿದಂತೆ ಎಲ್ಲ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಇಂಡೋ ಪೆಸಿಫಿಕ್‌ ಪ್ರದೇಶವನ್ನು ಚೀನಾದ ಹಿಡಿತದಿಂದ ಮುಕ್ತಗೊಳಿಸುವ ಭಾರತದ ಪ್ರಯತ್ನಕ್ಕೆ ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ಬಂಬಲ ನೀಡಲಿದೆ ಎಂದು ಅಮೆರಿಕ ರಕ್ಷಣಾ ಸಚಿವ ಎಸ್ಪರ್‌ ಹೇಳಿದ್ದಾರೆ.