Asianet Suvarna News Asianet Suvarna News

ಇಂದಿನಿಂದ ಚಳಿಗಾಲ ಅಧಿವೇಶನ: ಹಳೆಯ ಸಂಸತ್ತಲ್ಲಿ ಕಡೆಯ ಕಲಾಪ?

ಬೆಲೆ ಏರಿಕೆ, ನಿರುದ್ಯೋಗ, ಚೀನಾ ಗಡಿ ವಿವಾದ, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ, ಆರ್ಥಿಕತೆ, ಆರ್ಥಿಕವಾಗಿ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲು ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಸಜ್ಜಾದ ವಿಪಕ್ಷಗಳು 

Winter Session of Parliament Will Be Start on December 07th grg
Author
First Published Dec 7, 2022, 12:30 AM IST

ನವದೆಹಲಿ(ಡಿ.07): ಸಂಸತ್ತಿನ ಮಹತ್ವದ ಚಳಿಗಾಲದ ಅಧಿವೇಶನಕ್ಕೆ ಇಂದು(ಬುಧವಾರ) ಚಾಲನೆ ಸಿಗಲಿದ್ದು, ಡಿ.29ರವರೆಗೆ ಅಧಿವೇಶನ ನಡೆಯಲಿದೆ. ಇದು ಎಂದಿನಂತೆ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ‘ಸಮರಾಂಗಣ’ ಆಗುವ ಎಲ್ಲ ಸಾಧ್ಯತೆ ಇದೆ. ಒಟ್ಟು 17 ದಿನಗಳ ಅವಧಿಯಲ್ಲಿ 16 ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಮತ್ತೊಂದೆಡೆ ಬೆಲೆ ಏರಿಕೆ, ನಿರುದ್ಯೋಗ, ಚೀನಾ ಗಡಿ ವಿವಾದ, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ, ಆರ್ಥಿಕತೆ, ಆರ್ಥಿಕವಾಗಿ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲು ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.

ಅಧಿವೇಶನ ಆರಂಭವಾದ ಮಾರನೇ ದಿನವೇ ಗುಜರಾತ್‌ ಮತ್ತು ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಕೂಡಾ ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ, ಅದು ಕೂಡಾ ಕಲಾಪದ ಮೇಲೆ ಪರಿಣಾಮ ಬೀರುವುದು ನಿಶ್ಚಿತ.
ಉಳಿದಂತೆ 17 ದಿನಗಳ ಅವಧಿಯಲ್ಲಿ 16 ಮಸೂದೆ ಮಂಡನೆಗೆ ಸರ್ಕಾರ ಸಜ್ಜಾಗಿದೆ. ಇವುಗಳ ಪೈಕಿ ಬಹುರಾಜ್ಯ ಸಹಕಾರ ಸೊಸೈಟಿ (ತಿದ್ದುಪಡಿ) ಕಾಯ್ದೆ, ಅರಣ್ಯ ಸಂರಕ್ಷಣಾ ತಿದ್ದುಪೊಡಿ ಕಾಯ್ದೆ, ಜೈವಿಕ ವೈವಿಧ್ಯತೆ ತಿದ್ದುಪಡಿ ಮಸೂದೆ, ರಾಷ್ಟ್ರೀಯ ದಂತವೈದ್ಯ ಆಯೋಗ ಮಸೂದೆ, ರಾಷ್ಟ್ರೀಯ ನರ್ಸಿಂಗ್‌ ಆಯೋಗ ಮಸೂದೆ ಮೊದಲಾದವುಗಳು ಪ್ರಮುಖವಾದುದು.

ಭಾರತ್ ಜೋಡೋ ಯಾತ್ರೆ, ಚಳಿಗಾಲದ ಅಧಿವೇಶನಕ್ಕೆ ರಾಹುಲ್ ಗಾಂಧಿ ಗೈರು!

ವಿಪಕ್ಷಗಳು ಸಜ್ಜು:

ಅಧಿವೇಶನದಲ್ಲಿ ನಮ್ಮ ಪಕ್ಷವು ಬೆಲೆ ಏರಿಕೆ, ದೇಶದಲ್ಲಿ ಆರ್ಥಿಕ ಪರಿಸ್ಥಿತಿ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಸರ್ಕಾರದ ಯತ್ನ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲು, ಚೀನಾ ಗಡಿ ಬಿಕ್ಕಟ್ಟು ವಿಷಯಗಳನ್ನು ಚರ್ಚಿಸಲಿದೆ. ಸರ್ಕಾರ ಈ ವಿಷಯಗಳ ಚರ್ಚೆಗೆ ಸಿದ್ಧವಾಗಿದ್ದರೆ, ನಾವು ಕೂಡಾ ರಚನಾತ್ಮಕವಾಗಿ ಬೆಂಬಲಿಸಲಿದ್ದೇವೆ. ಆದರೆ ಹಿಂದಿನ ಉದಾಹರಣೆ ನೋಡಿದರೆ ಸರ್ಕಾರ ತನಗೆ ಬೇಕಿರುವ ವಿಷಯಗಳನ್ನು ಮಾತ್ರವೇ ಚರ್ಚೆಗೆ ಅವಕಾಶ ನೀಡುತ್ತದೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಸರ್ವಪಕ್ಷ ಸಭೆ:

ಚಳಿಗಾಲದ ಅಧಿವೇಶನವನ್ನು ಸುಗಮವಾಗಿ ನಡೆಸಲು ಸಹಕಾರ ಕೋರುವ ಸಲುವಾಗಿ ಸರ್ಕಾರ ಮಂಗಳವಾರ ಸರ್ವಪಕ್ಷಗಳ ಸಭೆ ಆಯೋಜಿಸಿತ್ತು. ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ 30 ವಿಪಕ್ಷಗಳ ನಾಯಕರು, ಬೆಲೆ ಏರಿಕೆ, ನಿರುದ್ಯೋಗ, ಚೀನಾ ಗಡಿ ಬಿಕ್ಕಟ್ಟು, ಇಡಬ್ಯುಎಸ್‌ ಮೀಸಲು, ಚುನಾವಣಾ ಆಯುಕ್ತರ ನೇಮಕದಲ್ಲಿ ಆತುರ, ಕಾಶ್ಮೀರಿ ಪಂಡಿತರ ಹತ್ಯೆ, ತನಿಖಾ ಸಂಸ್ಥೆಗಳ ದುರ್ಬಳಕೆ, ರಾಜ್ಯಗಳಿಗೆ ಅನುದಾನ ಬಿಡುಗಡೆ ತಡೆ, ಮಹಿಳಾ ಮೀಸಲು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಹಳೆಯ ಪಿಂಚಣಿ ನೀತಿ ಜಾರಿ ಮೊದಲಾದ ವಿಷಯಗಳ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದವು.

ಹಳೆಯ ಸಂಸತ್ತಲ್ಲಿ ಕಡೆಯ ಕಲಾಪ?

1927ರಲ್ಲಿ ನಿರ್ಮಾಣಗೊಂಡು 95 ವರ್ಷ ಪೂರೈಸುವ ಹೊಸ್ತಿಲಲ್ಲಿರುವ ಈಗಿನ ಸಂಸತ್‌ ಭವನದಲ್ಲಿ ನಡೆಯಲಿರುವ ಕಡೆಯ ಅಧಿವೇಶನ ಇದಾಗುವ ಸಾಧ್ಯತೆಯಿದೆ. ಸಮೀಪದಲ್ಲೇ ನಿರ್ಮಾಣವಾಗುತ್ತಿರುವ ಹೊಸ ಸಂಸತ್‌ ಭವನದಲ್ಲಿ ಮುಂದಿನ ಬಜೆಟ್‌ ಅಧಿವೇಶನ ನಡೆಯುವುದು ಖಚಿತ ಎನ್ನಲಾಗಿದೆ. ಹೀಗಾಗಿ ಸಂಸದರ ಪಾಲಿಗೆ ಇದು ಹಳೆಯ ಕಟ್ಟಡಕ್ಕೆ ಭಾವನಾತ್ಮಕ ವಿದಾಯ ಹೇಳುವ ಸಮಯವೂ ಆಗಿರಲಿದೆ.
 

Follow Us:
Download App:
  • android
  • ios