Asianet Suvarna News Asianet Suvarna News

Farm Laws: ಕೃಷಿ ಕಾಯ್ದೆ ವಾಪಸಿಗೆ ಮಸೂದೆ, ‘ರೈತರ ಸಣ್ಣ ಗುಂಪಿನಿಂದ ಪ್ರತಿಭಟನೆ’ ಎಂದು ಉಲ್ಲೇಖ!

* ಕೃಷಿ ಕಾಯ್ದೆ ವಾಪಸಿಗೆ ನಾಳೆ ಮಸೂದೆ 

* ಲೋಕಸಭೆಯಲ್ಲಿ ಮಂಡನೆ, ನಾಳೆಯೇ ಅಂಗೀಕಾರ

* 'ರೈತರ ಸಣ್ಣ ಗುಂಪಿನಿಂದ ಪ್ರತಿಭಟನೆ’ ಎಂದು ಉಲ್ಲೇಖ

Winter Session Bill to repeal Farm Laws to be introduced on the first day pod
Author
Bangalore, First Published Nov 28, 2021, 4:00 AM IST
  • Facebook
  • Twitter
  • Whatsapp

ನವದೆಹಲಿ(ನ.28): ವಿವಾದಿತ ಮೂರು ಕೃಷಿ ಕಾಯ್ದೆಗಳ (Farm Laws) ವಾಪಸಿಗೆ ಸಂಸತ್ತಿನ ಚಳಿಗಾಲದ ಅಧಿವೇಶನದ (Winter Session Of Parliament)ಮೊದಲ ದಿನವಾದ ಸೋಮವಾರ ಮಸೂದೆಯೊಂದನ್ನು ಮಂಡನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೊದಲು ಲೋಕಸಭೆಯಲ್ಲಿ (Loksabha) ವಿಧೇಯಕ ಮಂಡನೆಯಾಗಲಿದ್ದು, ಮೊದಲ ದಿನವೇ ಅದಕ್ಕೆ ಒಪ್ಪಿಗೆ ಪಡೆದುಕೊಳ್ಳುವ ಇರಾದೆಯಲ್ಲಿ ಕೇಂದ್ರ ಸರ್ಕಾರ ಇದೆ. ‘ರೈತರ ಸಣ್ಣ ಗುಂಪೊಂದು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿತ್ತು. ಸಮಗ್ರ ಅಭಿವೃದ್ಧಿಗಾಗಿ ಎಲ್ಲರನ್ನೂ ಜತೆಯಲ್ಲಿ ಕರೆದೊಯ್ಯಬೇಕಾದ ಅಗತ್ಯವಿದೆ’ ಎಂದು ಮಸೂದೆಯಲ್ಲಿ (Bill) ಉಲ್ಲೇಖಿಸಲಾಗಿದ್ದು, ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗುವ ನಿರೀಕ್ಷೆ ಇದೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ (Narendra Singh Tomar) ಅವರು ಕೃಷಿ ಕಾಯ್ದೆಗಳ ವಾಪಸ್‌ಗೆ ಸಂಬಂಧಿಸಿದ ವಿಧೇಯಕ ಮಂಡನೆ ಮಾಡಲಿದ್ದಾರೆ ಎಂದು ಲೋಕಸಭಾದ ಕಾರ್ಯಕಲಾಪ ಪಟ್ಟಿಹೇಳುತ್ತದೆ.

ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಂದ ಸಂಸದರಿಗೆ ವಿಪ್‌

 ಸೋಮವಾರದಿಂದ ಆರಂಭವಾಗುವ ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ (Winter Session) ಕೃಷಿ ಮಸೂದೆಗಳನ್ನು ಹಿಂಪಡೆಯುವ ಮಸೂದೆ ಮಂಡಿಸುವುದರಿಂದ ಎಲ್ಲಾ ಸಂಸದರು ಕಡ್ಡಾಯವಾಗಿ ಹಾಜರಿರಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು (BJP and Congress Parties) ಸಂಸದರಿಗೆ ವಿಪ್‌ ಜಾರಿ ಮಾಡಿವೆ. ನ.29ರಿಂದ ಅಧಿವೇಶನ ಆರಂಭವಾಗಲಿದೆ.

ಕೃಷಿ ಕಾಯಿದೆಗಳನ್ನು ಹಿಂಪಡೆಯುವ ಮಸೂದೆ ಮಂಡನೆಯ ಸಮಯದಲ್ಲಿ ಹಾಜರಿದ್ದು ಸರ್ಕಾರಕ್ಕೆ ಬೆಂಬಲ ನೀಡುವಂತೆ ಬಿಜೆಪಿ ರಾಜ್ಯಸಭಾ ಸದಸ್ಯರಿಗೆ ವಿಪ್‌ ಜಾರಿ ಮಾಡಿದೆ. ಸೋಮವಾರ ಹಲವು ವಿಚಾರಗಳು ಸಂಸತ್ತಿನ ಮೇಲ್ಮನೆಯಲ್ಲಿ ಚರ್ಚೆಯಾಗಲಿವೆ. ಹಾಗಾಗಿ ಎಲ್ಲಾ ಸಂಸದರು ಕಡ್ಡಾಯವಾಗಿ ಹಾಜರಾಗುವಂತೆ ಕಾಂಗ್ರೆಸ್‌ ಹೇಳಿದೆ.

ಸಾಕಷ್ಟುವಿವಾದಕ್ಕೆ ಕಾರಣವಾಗಿದ್ದ 3 ಕೃಷಿ ಮಸೂದೆಗಳನ್ನು ಹಿಂಪಡೆದುಕೊಳ್ಳುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಮುಂಬರುವ ಅಧಿವೇಶನದಲ್ಲಿ ಕೈಗೊಳ್ಳಲಾಗುತ್ತದೆ.

ರೈತರ ನಾಳಿನ ಟ್ರ್ಯಾಕ್ಟರ್‌ ಪರೇಡ್‌ ಮುಂದೂಡಿಕೆ

ಕೃಷಿ ಕಾಯ್ದೆ ವಿರೋಧಿ ರೈತ ಹೋರಾಟದ ಭಾಗವಾಗಿ ನ.29ರಂದು ಸಂಸತ್ತಿನವರೆಗೆ ಟ್ರ್ಯಾಕ್ಟರ್‌ ಪರೇಡ್‌ ನಡೆಸುವ ತೀರ್ಮಾನವನ್ನು ಸದ್ಯ ಅಮಾನತಿನಲ್ಲಿಡಲಾಗಿದೆ ಎಂದು ರೈತ ನಾಯಕರು ಶನಿವಾರ ತಿಳಿಸಿದ್ದಾರೆ. ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ಕೃಷಿ ಕಾಯ್ದೆ ವಿರೋಧಿ ಚಳವಳಿಯ ಮುಂದಿನ ರೂಪುರೇಷೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಾಗಿದೆ. ಇದೇ ವೇಳೆ ಭವಿಷ್ಯ ಹೋರಾಟದ ಬಗ್ಗೆ ಚರ್ಚಿಸಲು ಮತ್ತೊಮ್ಮೆ ಡಿ.4ರಂದು ಸಭೆ ಕರೆಯಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕ ದರ್ಶನ್‌ ಪಾಲ್‌, ‘ಸರ್ಕಾರ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕಾಯ್ದೆ ರದ್ದು ಮಾಡುವ ಆಶ್ವಾಸನೆ ನೀಡಿದ್ದರಿಂದ ಸೋಮವಾರ ನಡೆಯಬೇಕಿದ್ದ ಟ್ರ್ಯಾಕ್ಟರ್‌ ಪರೇಡ್‌ ಅನ್ನು ಅಮಾನತಿನಲ್ಲಿಡಲು ನಿರ್ದರಿಸಿದ್ದೇವೆ. ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ವಾಪಸ್‌ ಪಡೆಯುವ ಜೊತೆಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇತರ 6 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಸರ್ಕಾರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಅನಂತರವೂ ಪ್ರತಿಕ್ರಿಯೆ ಬಾರದಿದ್ದಲ್ಲಿ ಭವಿಷ್ಯದ ಹೋರಾಟದ ಬಗ್ಗೆ ನಿರ್ಣಯಿಸಲು ಡಿ.4ರಂದು ಮತ್ತೊಂದು ಸಭೆ ಕರೆದಿದ್ದೇವೆ’ ಎಂದು ತಿಳಿಸಿದರು.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಆದರೆ ಸಂಸತ್ತಿನಲ್ಲಿ ಮಂಡನೆಯಾಗಿ ಅಧಿಕೃತವಾಗಿ ರದ್ದು ಮಾಡುವವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ರೈತ ಸಂಘಟನೆಗಳು ಪಟ್ಟು ಹಿಡಿದಿವೆ. ಈ ರೈತ ಹೋರಾಟಕ್ಕೆ ಶುಕ್ರವಾರಕ್ಕೆ ಒಂದು ವರ್ಷ ಪೂರ್ಣಗೊಂಡಿದೆ.

Follow Us:
Download App:
  • android
  • ios