ಹೈದರಾಬಾದ್(ಅ.06)‌: ಎರಡು ವಾರಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಜಗನ್ಮೋಹನ ರೆಡ್ಡಿ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಲು ದೆಹಲಿಗೆ ಧಾವಿಸಿದ್ದಾರೆ. ಅದರೊಂದಿಗೆ, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಎನ್‌ಡಿಎ ಮೈತ್ರಿಕೂಟವನ್ನು ಸೇರಲಿದೆ ಎಂಬ ವಾದಕ್ಕೆ ಇನ್ನಷ್ಟು ಪುಷ್ಟಿ ದೊರಕಿದೆ.

ಎನ್‌ಡಿಎದಿಂದ ಶಿವಸೇನೆ ಮತ್ತು ಶಿರೋಮಣಿ ಅಕಾಲಿದಳದಂತಹ ಪ್ರಮುಖ ಪಕ್ಷಗಳನ್ನು ಕಳೆದುಕೊಂಡಿರುವ ಬಿಜೆಪಿಗೆ ಒಂದು ಪ್ರಬಲ ಪಕ್ಷದ ಬೆಂಬಲ ಬೇಕಿದೆ. ಹೀಗಾಗಿ ವೈಎಸ್‌ಆರ್‌ ಪಕ್ಷವನ್ನು ಸೇರ್ಪಡೆ ಮಾಡಿಕೊಳ್ಳಲು ಬಯಸುತ್ತಿದೆ ಎಂದು ಹೇಳಲಾಗಿದ್ದು, ಆ ಪಕ್ಷಕ್ಕೆ ಕೇಂದ್ರ ಸಂಪುಟದಲ್ಲಿ 2 ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ಹಾಗೂ ಒಂದು ಸ್ವತಂತ್ರ ರಾಜ್ಯ ಖಾತೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ.

ಮಂಗಳವಾರ ಬೆಳಿಗ್ಗೆ 10.30ಕ್ಕೆ ಮೋದಿ ಜೊತೆ ಜಗನ್‌ ಸಭೆ ನಿಗದಿಯಾಗಿದೆ. 22 ಲೋಕಸಭಾ ಸಂಸದರನ್ನು ಹಾಗೂ 6 ರಾಜ್ಯಸಭಾ ಸಂಸದರನ್ನು ಹೊಂದಿರುವ ವೈಎಸ್‌ಆರ್‌ ಕಾಂಗ್ರೆಸ್‌ ದೇಶದಲ್ಲೇ 4ನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ.

ಆಂಧ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮೋದಿ ಸರ್ಕಾರದ ಎಲ್ಲಾ ನಿರ್ಧಾರಗಳನ್ನೂ ಜಗನ್ಮೋಹನ ರೆಡ್ಡಿ ಬೆಂಬಲಿಸುತ್ತಾ ಬಂದಿದ್ದಾರೆ. ಇನ್ನು, ಆಂಧ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿ ರೆಡ್ಡಿ ಇದ್ದಾರೆ. ಹಾಗೆಯೇ ತಮ್ಮ ವಿರುದ್ಧ ಇರುವ ಭ್ರಷ್ಟಾಚಾರದ ಸಿಬಿಐ ಕೇಸುಗಳಿಂದ ಮುಕ್ತಿ ಪಡೆಯಲೂ ಅವರು ಬಯಸುತ್ತಿದ್ದಾರೆ.