ಜೈಪುರ(ಫೆ.24): ರೈತ ಮುಖಂಡ ರಾಕೇಶ್ ಟಿಕಾಯತ್ ಈ ಬಾರಿ ತಾವು 40 ಲಕ್ಷ ಟ್ರ್ಯಾಕ್ಟರ್ ಮೂಲಕ ಸಂಸತ್ತಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ದಿಲ್ಲಿ ಮಾರ್ಚ್‌ಗೆ ಸಿದ್ಧರಾಗುವಂತೆ ರೈತರಿಗೆ ಸೂಚಿಸಿದ್ದಾರೆ. ರಾಜಸ್ಥಾನದ ಸೀಕರ್‌ನಲ್ಲಿ ನಡೆದ ಸಂಯುಕ್ತ ರೈತ ;ರೈತ ಮಹಾಪಂಚಾಯತ್‌ನಲ್ಲಿ ಅವರು ಇಂತಹುದ್ದೊಂದು ಕರೆ ನೀಡಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರ ಕೃಷಿ ಕಾನೂನು ಹಿಂಪಡೆಯದಿದ್ದರೆ ಈ ಬಾರಿ ಸಂಸತ್ತಿಗೆ ಮುತ್ತಿಗೆ ಹಾಕುತ್ತೇವೆ. ಅಲ್ಲದೇ ನಾಲ್ಕು ಲಕ್ಷವಲ್ಲ ನಲ್ವತ್ತು ಲಕ್ಷ ಟ್ರ್ಯಾಕ್ಟರ್‌ಗಳು ಎಂಟ್ರಿ ನೀಡಲಿವೆ. ಯಾವಾಗ ಬೇಕಾದರೂ ಇಂತಹುದ್ದೊಂದು ಘೋಷಣೆಯಾಗಬಹುದು. ಹೀಗಾಗಿ ಸಿದ್ಧರಾಗಿರಿ ಎಂದು ಟಿಕಾಯತ್ ರೈತರಿಗೆ ಸೂಚಿಸಿದ್ದಾರೆ.

ಇಂಡಿಯಾ ಗೇಟ್‌ ಬಳಿ ಕೃಷಿ

ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಟಿಕಾಯತ್ ರೈತರೂ ದೆಹಲಿಯಲ್ಲಿದ್ದಾರೆ, ಟ್ರ್ಯಾಕ್ಟಟರ್‌ಗಳೂ ಅಲ್ಲೇ ಇವೆ. ಹೀಗಾಗಿ ಇಮಡಿಯಾ ಗೇಟ್‌ ಆಸುಪಾಸಿನ ಪಾರ್ಕ್‌ಗಳಲ್ಲೇ ಉಳುಮೆ ಮಾಡಿ, ಬೆಳೆ ಕೂಡ ಬೆಳೆಯುತ್ತೇವೆ. ಸಂಸತ್‌ ಘೇರಾವ್‌ ಯಾವಾಗ ಎಂದು ಸಂಯುಕ್ತ ಮೋರ್ಚಾ ನಿರ್ಧರಿಸಲಿದೆ ಎಂದೂ ತಿಳಿಸಿದ್ದಾರೆ.

ಕಂಪನಿಗಳ ಗೋದಾಮುಗಳು ನಾಶವಾಗುತ್ತವೆ

ಇನ್ನು ಗಣರಾಜ್ಯೋವದಂದು ನಡೆದ ಘಟನೆ ಬಗ್ಗೆ ಉಲ್ಲೇಖಿಸಿದ ರೈತ ಮುಖಂಡ ಟಿಕಾಯತ್ 'ಜನವರಿ 26ರ ಘಟನೆಯಿಂದ ರೈತರ ಹೆಸರು ಕೆಡಿಸುವ ಷಡ್ಯಂತ್ರ ರೂಪಿಸಲಾಯ್ತು. ದೇಶದ ರೈತರಿಗೆ ತ್ರಿವರ್ಣ ಧ್ವಜದ ಮೇಲೆ ಗೌರವ ಪ್ರೀತಿ ಇದೆ. ಆದರೆ ಈ ದೇಶದ ರಾಜಕೀಯ ನಾಯಕರಿಗಿಲ್ಲ. ಒಂದು ವೇಳೆ ಕೇಂದ್ರ ತಾನು ಜಾರಿಗೊಳಿಸಿದ ಕೃಷಿ ಕಾನೂನು ಹಿಂಪಡೆಯದಿದ್ದರೆ, ರೈತರು ಕಂಪನಿಗಳ ಗೋದಾಮುಗಳು ನಾಶ ಮಾಡುತ್ತಾರೆ' ಎಂದೂ ಎಚ್ಚರಿಸಿದ್ದಾರೆ.