ರೈತರ ಒಕ್ಕಲೆಬ್ಬಿಸಿದರೆ ಕಚೇರಿಗಳಿಗೆ ನುಗ್ಗುತ್ತೇವೆ: ಟಿಕಾಯತ್‌ ಎಚ್ಚರಿಕೆ!

* 11 ತಿಂಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರು

* ರೈತರನ್ನು ಒತ್ತಾಯಪೂರ್ವಕವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ

* ರೈತರ ಒಕ್ಕಲೆಬ್ಬಿಸಿದರೆ ಕಚೇರಿಗಳಿಗೆ ನುಗ್ಗುತ್ತೇವೆ: ಟಿಕಾಯತ್‌ ಎಚ್ಚರಿಕೆ

Will occupy govt offices if evicted from protest sites Says Rakesh Tikait pod

ನವದೆಹಲಿ(ನ.01): ‘ಕೇಂದ್ರದ ಕೃಷಿ ಕಾನೂನುಗಳನ್ನು (Farm Law) ವಿರೋಧಿಸಿ ಕಳೆದ 11 ತಿಂಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಒತ್ತಾಯಪೂರ್ವಕವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ. ದೇಶಾದ್ಯಂತ ಇರುವ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅವುಗಳನ್ನೇ ಧಾನ್ಯಗಳ ಮಾರುಕಟ್ಟೆ(ಗಲ್ಲಾ ಮಂಡಿಗಳಾಗಿ) ಯಾಗಿ ಪರಿವರ್ತಿಸುತ್ತೇವೆ’ ಎಂದು ರೈತ ನಾಯಕ ರಾಕೇಶ್‌ ಟಿಕಾಯತ್‌ (Rakesh Tikait) ಭಾನುವಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳು ಪ್ರತಿಭಟನಾ ಸ್ಥಳಗಳಲ್ಲಿರುವ ಟೆಂಟ್‌ಗಳನ್ನು ಕಿತ್ತೆಸೆಯಲು ಯತ್ನಿಸಿದರೆ ಪೊಲೀಸ್‌ ಠಾಣೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರೇ ಟೆಂಟ್‌ ಹಾಕಿ ಕೂರುತ್ತೇವೆ ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ದೆಹಲಿ ಪೊಲೀಸರು ಗಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ತೆಗೆದ ಬೆನ್ನಲ್ಲೇ ಟಿಕಾಯತ್‌ ಈ ಹೇಳಿಕೆ ನೀಡಿದ್ದಾರೆ. ಕಳೆದ ವಾರ ಸುಪ್ರೀಂಕೋರ್ಟ್‌ (Supreme Court), ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಹಾಗಂತ ಅವರು ಅನಿರ್ದಿಷ್ಟಾವಧಿಗೆ ರಸ್ತೆ ಬಂದ್‌ ಮಾಡುವಂತಿಲ್ಲ ಎಂದಿತ್ತು. ಇದಕ್ಕೆ ಉತ್ತರಿಸಿದ ರೈತ ಸಂಘಟನೆಗಳು ಪೊಲೀಸರು ಬ್ಯಾರಿಕೇಡ್‌ ಇಟ್ಟಿದ್ದರಿಂದ ರಸ್ತೆ ಬಂದ್‌ ಆಗಿದೆ ಎಂದು ತಿಳಿಸಿದ್ದವು.

ಕಳೆದ ವರ್ಷ ನ.26ರಿಂದ ಸಾವಿರಾರು ರೈತರು ದೆಹಲಿಯ ಸಿಂಘೂ, ಟಿಕ್ರಿ, ಗಾಜಿಪುರ್‌ ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

ಬಿಜೆಪಿಗರ ಸಾವಿಗೆ ಕಾರಣರಾದ ರೈತರು ದೋಷಿಗಳಲ್ಲ: ಟಿಕಾ​ಯ​ತ್‌

 ಲಖೀಂಪುರ ಹಿಂಸಾಚಾರದ ವೇಳೆ ನಾಲ್ವರು ಬಿಜೆಪಿ ಕಾರ್ಯಕರ್ತರ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದ ರೈತರನ್ನು ತಪ್ಪಿತಸ್ಥರು ಎಂಬುದಾಗಿ ಪರಿಗಣಿಸಲಾಗದು ಎಂದು ಭಾರತೀಯ ಕಿಸಾನ್‌ ಒಕ್ಕೂಟದ ನಾಯಕ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

ಈ ಬಗ್ಗೆ ಶನಿವಾರ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟಿಕಾಯತ್‌ ಅವರು, ‘ಲಖೀಂಪುರದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಸಚಿವರ ಬೆಂಗಾವಲು ಕಾರುಗಳು ಹಾದು ಹೋಗಿವೆ. ಇದರಿಂದ ರೊಚ್ಚಿಗೆದ್ದ ರೈತರು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ದೋಷಿಗಳೆಂದು ಪರಿಗಣಿಸಲಾಗದು. ಇಲ್ಲಿ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನಡೆದಿದೆಯಷ್ಟೇ’ ಎಂದು ಹೇಳಿದರು. ತನ್ಮೂಲಕ ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಟಿಕಾಯತ್‌ ಅವರು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ ರೈತರು ಸೇರಿದಂತೆ 8 ಮಂದಿ ಸಾವಿಗೆ ಕಾರಣವಾಗಿರುವ ಲಖೀಂಪುರ ಹಿಂಸಾಚಾರವು ಪೂರ್ವ ಯೋಜಿತ ಪಿತೂರಿಯಾಗಿದ್ದು, ಈ ಕೃತ್ಯಕ್ಕೆ ಕಾರಣವಾದ ಕೇಂದ್ರ ಸಚಿವ ಅಜಯ್‌ ಮಿಶ್ರಾ ಮತ್ತು ಅವರ ಪುತ್ರ ಆಶಿಷ್‌ ಮಿಶ್ರಾರನ್ನು ಬಂಧಿಸಬೇಕು. ಜತೆಗೆ ಅಜಯ್‌ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ಈ ಘಟನೆ ಖಂಡಿಸಿ ದಸರಾ ಹಬ್ಬವಾದ ಅ.15ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ ಎಂದು ರೈತ ನಾಯಕರು ಹೇಳಿದ್ದಾರೆ.

Latest Videos
Follow Us:
Download App:
  • android
  • ios