ದೆಹಲಿ ಹಿಂಸಾಚಾರ ಪೂರ್ವನಿಯೋಜಿತ!
ಜಾತಿ, ಧರ್ಮ, ಪಕ್ಷ ಲೆಕ್ಕಿಸದೇ ಗಲಭೆಕೋರರಿಗೆ ಶಿಕ್ಷೆ| ದಿಲ್ಲಿ ಗಲಭೆ ಬಗ್ಗೆ ಗೃಹ ಸಚಿವ ಶಾ ಸ್ಪಷ್ಟನೆ| ದೆಹಲಿ ಹಿಂಸಾಚಾರ ಪೂರ್ವನಿಯೋಜಿತ ದುಷ್ಕೃತ್ಯ| ನಮ್ಮನ್ನು ಪ್ರಶ್ನಿಸುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ: ಶಾ
ನವದೆಹಲಿ[ಮಾ.12]: ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಹಿಂಸಾಚಾರದಲ್ಲಿ ಯಾರೇ ಭಾಗಿಯಾಗಿರಲಿ, ಅವರು ಯಾವುದೇ ಪಕ್ಷ ಮತ್ತು ಜಾತಿ-ಧರ್ಮಕ್ಕೆ ಸೇರಿದವರಗಿರಲಿ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಬುಧವಾರ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ಮೇಲ್ನೋಟಕ್ಕೆ ಇದು ಪೂರ್ವನಿಯೋಜಿತ ಹಿಂಸಾಚಾರ ಎನ್ನಿಸುತ್ತದೆ. ಆದರೆ ಗಲಭೆಯು ಮಿತಿ ಮೀರದಂತೆ ಪೊಲೀಸರು ಶ್ರಮ ವಹಿಸಿದ್ದಾರೆ. ಗಲಭೆ ಸಂಭವಿಸಿದ 36 ತಾಸಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ’ ಎಂದರು.
ಇನ್ನು ಕಾಂಗ್ರೆಸ್ ಮೇಲೆ ಹರಿಹಾಯ್ದ ಅವರು, ‘ಶೇ.76ರಷ್ಟುಜನರು ಕಾಂಗ್ರೆಸ್ ಅವಧಿಯಲ್ಲಿ ನಡೆದ ಗಲಭೆಗಳಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ನಮ್ಮನ್ನು ಪ್ರಶ್ನಿಸುವ ಹಕ್ಕು ಕಾಂಗ್ರೆಸ್‌ಗಿಲ್ಲ’ ಎಂದು ತಿರುಗೇಟು ನೀಡಿದರು.
‘ಪೌರತ್ವ ಕಾಯ್ದೆ ವಿರೋಧಿ ಹಿಂಸಾ ಘಟನೆಗಳಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆ. 2647 ಜನರನ್ನು ಬಂಧಿಸಲಾಗಿದೆ ಅಥವಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಗಲಭೆಕೋರರು ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಸೇರಿದವರಾಗಿರಲು. ಅವರನ್ನು ಬಿಡುವುದಿಲ್ಲ. ಆದರೆ ಮುಗ್ಧರಿಗೆ ಕಿರುಕುಳ ನೀಡುವುದಿಲ್ಲ’ ಎಂದರು.
ಇದೇ ವೇಳೆ ಟ್ರಂಪ್‌ಗೆ ದೆಹಲಿಗೆ ಆಗಮಿಸಿದ ವೇಳೆ ನಾನು ಅಲ್ಲಿಗೆ ಹೋಗದೆ, ಹಿಂಸಾಚಾರ ನಿಯಂತ್ರಣ ಉಸ್ತುವಾರಿ ವಹಿಸಿದ್ದೆ ಎಂದು ಸ್ಪಷ್ಟನೆ ನೀಡಿದ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಿಂಸಾಪೀಡಿತ ಪ್ರದೇಶಗಳಿಗೆ ತೆರಳಿ ಜನರಿಗೆ ಸಾಂತ್ವಾನ ಹೇಳಿದ್ದನ್ನು ಸಮರ್ಥಿಸಿಕೊಂಡರು.
‘ಹೋಳಿ ಹಬ್ಬಕ್ಕೆ ಮೊದಲೇ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಿದ್ದರೆ ಹೋಳಿ ವೇಳೆ ದಿಲ್ಲಿಯಲ್ಲಿ ಮತ್ತೆ ಸ್ಥಿತಿ ತ್ವೇಷಮಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಹೋಳಿ ನಂತರ ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಮುಂದೆಬಂತು’ ಎಂದು ಶಾ ಸ್ಪಷ್ಟಪಡಿಸಿದರು.
ಮಾರ್ಚ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ