ನವದೆಹಲಿ(ಫೆ.08): ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಸೋಮವಾರದಂದು ತಮ್ಮ ಭಾಷಣದಲ್ಲಿ ರೈತರ ಬಳಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೀಗ ಮೋದಿ ಮನವಿ ಬೆನ್ನಲ್ಲೇ ಭಾರತೀಯ ರೈತ ಸಂಘಟನೆಯ ನಾಯಕ ರಾಕೇಶ್ ಟಿಕಾಯತ್ ತಕೇಂದ್ರಕ್ಕೆ ತಿರುಗೇಟು ನೀಡಿದ್ದಾರೆ. ಸರ್ಕಾರ MSP ಮೇಲೆ ಕಾನೂನು ರೂಪಿಸಲಿ. ಮೂರು ಕೃಷಿ ಕಾನೂನನ್ನು ಹಿಂಪಡೆದರೆ ನಾವು ಪ್ರತಿಭಟನೆ ಹಿಂಪಡೆಯುತ್ತೇವೆ. MSP ಮೇಲೆ ಕಾನೂನು ರೂಪಿಸಿದರೆ ರೈತರಿಗೆ ಲಾಭವಾಗುತ್ತದೆ. ಮೋದಿ ಇಚ್ಛಿಸಿದರೆ ನಮ್ಮ ರೈತ ಸಂಘಟನೆ ಹಾಗೂ ಸಮಿತಿ ಮಾತುಕತೆ ನಡೆಸಲು ಸಿದ್ಧವಿದೆ ಎಂದಿದ್ದಾರೆ.

ಕಾನೂನು ಮುಂದಿಟ್ಟುಕೊಂಡು ರೈತರನ್ನು ದೋಚುತ್ತಿದ್ದಾರೆ ವ್ಯಾಪಾರಿಗಳು

ಅಲ್ಲದೇ MSP ಮೇಲೆ ಕಾನೂನು ಇಲ್ಲದಿರುವುದರಿಂದ ವ್ಯಾಪಾರಿಗಳು ರೈತರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. MSP ಮುಗಿಯುತ್ತದೆ ಎಂದು ನಾವು ಹೇಳುತ್ತಿಲ್ಲ. ಆದರೆ ಇದರ ಮೇಲೆ ಕಾನೂನು ರಚಿಸಬೇಕು. ಹಸಿವಿನ ಮೇಲೆ ವ್ಯಾಪಾರ ನಡೆಸುವುದು ಸರಿಯಲ್ಲ. ದೇಶದಲ್ಲಿ ಧಾನ್ಯಗಳ ಬೆಲೆ ಹಸಿವಿನ ಆಧಾರದಲ್ಲಿ ನಿಗಧಿಯಾಗಬಾರದು ಎಂದಿದ್ದಾರೆ.

ಸಂಸದರು ಪಿಂಚಣಿ ಕೈಬಿಡಲಿ

ಪಿಎಂ ಮೋದಿ ಯಾವ ರೀತಿ ಗ್ಯಾಸ್ ಸಬ್ಸಿಡಿ ಬಿಡಲು ಮನವಿ ಮಾಡುತ್ತಾರೋ ಅದೇ ರೀತಿ ಶಾಸಕರು ಹಾಗೂ ಸಂಸದರರ ಬಳಿ ತಮ್ಮ ಪಿಂಚಣಿ ಕೈಬಿಡುವಂತೆ ಮನವಿ ಮಾಡಲಿ. ಹೀಗೆ ಮಾಡಿದ್ರೆ ಎಲ್ಲರಿಗೂ ಒಳಿತು ಎಂದೂ ಟಿಕಾಯತ್ ತಿಳಿಸಿದ್ದಾರೆ.