ನವದೆಹಲಿ(ಏ.25): ಕೊರೋನಾ 2ನೇ ಅಲೆ ಮೇ ತಿಂಗಳ ಮಧ್ಯ ಭಾಗಕ್ಕೆ ತನ್ನ ಗರಿಷ್ಠ ಮಟ್ಟಮುಟ್ಟಲಿದೆ ಎಂಬ ವರದಿಗಳ ಬೆನ್ನಲ್ಲೇ, ಇಂಥ ಪರಿಸ್ಥಿತಿ ಎದುರಿಸಲು ಕೇಂದ್ರ ಸರ್ಕಾರ ಏನೇನು ಕ್ರಮ ಕೈಗೊಂಡಿದೆ ಎಂದು ದೆಹಲಿ ಹೈಕೋರ್ಟ್‌ ಪ್ರಶ್ನಿಸಿದೆ. ಅಲ್ಲದೆ ಈಗಿನದ್ದನ್ನು ಅಲೆಯೆಂದು ಹೇಳಲು ಸಾಧ್ಯವಿಲ್ಲ, ಇದು ಕೊರೋನಾ ಸುನಾಮಿ ಎಂದು ತೀವ್ರ ಆತಂಕ ವ್ಯಕ್ತಪಡಿಸಿದೆ.

ದಿಲ್ಲಿಯ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಕಾಣಿಸಿಕೊಂಡ ವಿಷಯದ ಬಗ್ಗೆ ಶನಿವಾರ ವಿಚಾರಣೆ ನಡೆಸಿದ ನ್ಯಾಯಪೀಠ 2ನೇ ಗರಿಷ್ಠ ಮಟ್ಟಕ್ಕೆ ಮುಟ್ಟಿದಾಗ ಅದಕ್ಕೆ ಬೇಕಾದ ಮೂಲಸೌಕರ್ಯ, ಆಸ್ಪತ್ರೆ, ವೈದ್ಯಕೀಯ ಸಿಬ್ಬಂದಿ, ಔಷಧ, ಲಸಿಕೆ, ಆಕ್ಸಿಜನ್‌ ಮೊದಲಾದವುಗಳಿಗೆ ಯಾವ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿ, ಈ ಕುರಿತು ಏ.26ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತು.

ಇದೇ ವೇಳೆ ದೆಹಲಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಬಗ್ಗೆ ಸರ್ಕಾರ ಸಲ್ಲಿಸಿದ ವರದಿ ಬಗ್ಗೆ ಪ್ರಸ್ತಾಪಿಸಿದ ನ್ಯಾಯಪೀಠ, ಹೀಗೆ ಆಮ್ಲಜನಕ ಕೊರತೆಗೆ ಅಡ್ಡಿ ಮಾಡಿದ ಕೇಂದ್ರ,ರಾಜ್ಯ ಅಥವಾ ಸ್ಥಳೀಯ ಮಟ್ಟದ ಯಾವುದೇ ಅಧಿಕಾರಿಗಳ ಉದಾಹರಣೆ ಇದ್ದರೆ ಕೊಡಿ. ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಅವರನ್ನು ನೇಣುಗಂಬಕ್ಕೆ ಏರಿಸುತ್ತೇವೆ ಎಂದು ಗುಡುಗಿತು.