ಸಾರಿಸ್ಕಾ ಹುಲಿ ಧಾಮದಲ್ಲಿ ಕಾಡ್ಗಿಚ್ಚು, 10 ಚದರ ಕಿ.ಮೀ ಅರಣ್ಯ ವ್ಯಾಪಿಸಿದ ಬೆಂಕಿ!
* ರಾಜಸ್ಥಾನ: ಸಾರಿಸ್ಕಾ ಹುಲಿ ಧಾಮದಲ್ಲಿ ಕಾಡ್ಗಿಚ್ಚು
* ಸುಮಾರು 10 ಚದರ ಕಿ.ಮೀ ಪ್ರದೇಶ ಬೆಂಕಿಗಾಹುತಿ
* ವಾಯುಪಡೆಯ 2 ಹೆಲಿಕಾಪ್ಟರ್‌ನಿಂದ ಬೆಂಕಿ ನಂದಿಸುವ ಕಾರ್ಯ
* 43 ಕಿ.ಮೀ ದೂರದ ಜಲಾಶಯದಿಂದ ನೀರು ತರುತ್ತಿರುವ ಕಾಪ್ಟರ್
ಜೈಪುರ(ಮಾ.30): ರಾಜಸ್ಥಾನದ ಅಳ್ವರ್‌ನಲ್ಲಿರುವ ಸಾರಿಸ್ಕಾ ಹುಲಿ ರಕ್ಷಿತಾರಣ್ಯ ಭಾರಿ ಪ್ರಮಾಣದ ಕಾಡ್ಗಿಚ್ಚಿಗೆ ತುತ್ತಾಗಿದೆ. ಸೋಮವಾರ ಸಾಯಂಕಾಲ ಕಾಣಿಸಿಕೊಂಡ ಬೆಂಕಿ ಸುಮಾರು 10 ಚದರ ಕಿ.ಮೀ ಅರಣ್ಯವನ್ನು (ಸುಮಾರು 1800 ಫುಟ್ಬಾಲ್ ಮೈದಾನದ ವ್ಯಾಪ್ತಿಯ ಪ್ರದೇಶ) ವ್ಯಾಪಿಸಿದೆ. ಈ ಬೆಂಕಿ ನಂದಿಸಲು ಐಎಎಫ್‌ನ 2 ಹೆಲಿಕಾಪ್ಟರ್‌ಗಳು ಸತತ ಪ್ರಯತ್ನ ನಡೆಸುತ್ತಿವೆ.
ಈ ರಕ್ಷಿತಾರಣ್ಯದಲ್ಲಿ ಸುಮಾರು 20 ಹೆಚ್ಚು ಹುಲಿಗಳು ವಾಸ ಮಾಡುತ್ತಿವೆ ಎಂದು ಅಂದಾಜಿಸಲಾಗಿದೆ. ಬೆಂಕಿಯಿಂದಾಗಿ ಎಲ್ಲೆಡೆ ಹೊಗೆ ಆವರಿಸಿರುವುದರಿಂದ ಇದು ಹುಲಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬೃಹತ್ತಾಗಿ ಹಬ್ಬಿರುವ ಬೆಂಕಿಯನ್ನು ನಂದಿಸಲು ವಾಯುಪಡೆಯ 2 ಎಂ.ಐ-17 ಹೆಲಿಕಾಪ್ಟರ್‌ಗಳು 43 ಕಿ.ಮೀ ದೂರದಲ್ಲಿರುವ ಸಿಲಿಸೇರ್ ಜಲಾಶಯದಿಂದ ನೀರನ್ನು ಹೊತ್ತು ತಂದು ಸುರಿಯುತ್ತಿವೆ. ಅರಣ್ಯದ ಅಕ್ಕಪಕ್ಕದಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಲಾಗಿದೆ.
ಸೋಮವಾರ ಸಾಯಂಕಾಲ ಅರಣ್ಯಕ್ಕೆ ಬೆಂಕಿ ಬಿದ್ದಿರುವುದನ್ನು ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದ ಕಾರಣ ಬೆಂಕಿ ವೇಗವಾಗಿ ಹರಡಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.