ಮಥುರಾ(ಸೆ.07): ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವಿಗೀಡಾದ ಸಹ ವಿಮಾನದ ಸಹ ಪೈಲಟ್‌ ಉತ್ತರ ಪ್ರದೇಶ ಮೂಲದ ಅಖಿಲೇಶ್‌ ಶರ್ಮಾ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತನ್ಮೂಲಕ ಅಖಿಲೇಶ್‌ ಅವರ ಅಗಲಿಕೆಯಿಂದ ದುಃಖದ ಮಡುವಿನಲ್ಲಿ ಸಿಲುಕಿದ್ದ ಕುಟುಂಬಕ್ಕೀಗ ಗಂಡು ಮಗುವಿನ ಜನನವು ಕೊಂಚ ಖುಷಿ ತರಿಸಿದೆ.

ಗಂಡು ಮಗುವಿಗೆ ಜನ್ಮ ನೀಡಿದ ಅಖಿಲೇಶ್‌ ಅವರ ಪತ್ನಿ ಮೇಘಾ ಹಾಗೂ ನವಜಾತ ಶಿಶು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲೇ ನಿಗಾವಣೆಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಆ.7ರಂದು ದುಬೈನಿಂದ 190 ಪ್ರಯಾಣಿಕರ ಹೊತ್ತು ತಂದಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಪತನಗೊಂಡು, ಎರಡು ಹೋಳಾಗಿತ್ತು. ಈ ದುರ್ಘಟನೆಯಲ್ಲಿ ಈ ವಿಮಾನದ ಪೈಲಟ್‌ಗಳಾದ ದೀಪಕ್‌ ಸಾಠೆ ಹಾಗೂ ಅಖಿಲೇಶ್‌ ಸೇರಿದಂತೆ 21 ಮಂದಿ ಸಾವಿಗೀಡಾಗಿದ್ದರು.

ಮೊದಲ ವಂದೇಭಾರತ್‌ ವಿಮಾನ ಇಳಿಸಿದವರು ಅಖಿಲೇಶ್‌

ಕೊರೋನಾ ಲಾಕ್‌ಡೌನ್‌ ವೇಳೆ ದುಬೈನಲ್ಲಿ ಸಿಲುಕಿದ್ದ ಹಲವು ಭಾರತೀಯರನ್ನು ವಂದೇ ಭಾರತ್‌ ಯೋಜನೆಯಡಿ ಮೇ 8ರಂದು ಕೇರಳದ ಇದೇ ಕಲ್ಲಿಕೋಟಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದ ಪೈಲಟ್‌ಗಳ ತಂಡದಲ್ಲಿ ಅಖಿಲೇಶ್‌ ಕುಮಾರ್‌ ಸಹ ಒಬ್ಬರಾಗಿದ್ದರು. 

ವಿಮಾನ ತುಂಡಾದ ಕೂಡಲೇ ಎಲ್ಲರ ಆಕ್ರಂದನ!

ಆ ವೇಳೆ, ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಇವರನ್ನು ಸುತ್ತುವರಿದು ಚಪ್ಪಾಳೆ ತಟ್ಟುವ ಮೂಲಕ ಗೌರವದ ಸ್ವಾಗತ ನೀಡಿದ್ದರು. ಆದರೆ, ಇದೀಗ ವಿಮಾನ ದುರಂತದಲ್ಲಿ ಮಡಿದ ಅಖಿಲೇಶ್‌ ಸೇರಿ 18 ಮಂದಿಗಾಗಿ ಇಡೀ ದೇಶವೇ ದುಃಖತಪ್ತವಾಗಿದೆ.