ಇತ್ತೀಚೆಗೆ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ನೀವು ತಂತ್ರಜ್ಞಾನಕ್ಕೆ ಗುಲಾಮರಾಗಬೇಡಿ. ಬದಲಿಗೆ ಅದರಿಂದ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ನವದೆಹಲಿ: ಇತ್ತೀಚೆಗೆ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ನೀವು ತಂತ್ರಜ್ಞಾನಕ್ಕೆ ಗುಲಾಮರಾಗಬೇಡಿ. ಬದಲಿಗೆ ಅದರಿಂದ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಸೋಮವಾರ ಪ್ರಸಾರವಾದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ 2ನೇ ಹಂತದಲ್ಲಿ ಪ್ರಧಾನಿ ಕೊಯಮತ್ತೂರು, ರಾಯ್ಪುರ, ರಾಜ್‌ಪುರ, ಗುವಾಹಟಿ, ಗುಜರಾತ್‌ನ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದರು.

‘ನಾವು ಎಐ ಅಥವಾ ಮೊಬೈಲ್‌ ಅನ್ನು ಮಾಸ್ಟರ್‌ ಆಗಿ ಮಾಡಲು ಬಿಡಬಾರದು. ಕೆಲವು ಮಕ್ಕಳು ಮೊಬೈಲ್‌ ಇಲ್ಲದೇ ಹೋದರೆ ಊಟ ತಿನ್ನುವುದಿಲ್ಲ ಎನ್ನುತ್ತಾರೆ. ಆದರೆ ತಂತ್ರಜ್ಞಾನವು ನಿಮ್ಮನ್ನು ಗುಲಾಮರನ್ನಾಗಿ ಮಾಡಲು ಬಿಡಲ್ಲ ಎನ್ನುವ ದೃಢ ಸಂಕಲ್ಪವನ್ನು ನೀವು ಮಾಡಬೇಕು’ ಎಂದರು.

‘ತಂತ್ರಜ್ಞಾನಗಳಿಗೆ ಭಯ ಪಡಬೇಡಿ. ಬದಲಿಗೆ ಅವುಗಳನ್ನು ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಮತ್ತು ಸಾಮರ್ಥ್ಯವನ್ನು ಸುಧಾರಿಸಲು ಬಳಸಿಕೊಳ್ಳಿ’ ಎಂದು ಸಲಹೆ ನೀಡಿದರು.

37 ವರ್ಷದಲ್ಲೇ ಮೊದಲ ಬಾರಿ ಸೇನಾ ಸಭೆಗೆ ಖಮೇನಿ ಗೈರು

ಟೆಹ್ರಾನ್‌: 1989ರಲ್ಲಿ ಇರಾನ್‌ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದ ಸರ್ವೋಚ್ಚ ಧಾರ್ಮಿಕ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು 37 ವರ್ಷಗಳಲ್ಲಿ ಮೊದಲ ಬಾರಿ ಫೆ.8ರಂದು ವಾಯುಪಡೆಯ ಕಮಾಂಡರ್‌ಗಳ ಜತೆ ನಡೆದ ಸಭೆಗೆ ಗೈರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ದಾಳಿಯ ಭೀತಿಯಿಂದ ಹೀಗೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

1979ರ ಈ ದಿನದಂದು ರುಹೊಲ್ಲಾ ಖಮೇನಿ ಅವರೊಂದಿಗೆ ಕೈಜೋಡಿಸಿದ್ದ ವಾಯುಪಡೆ, ಆಗ ಆಳ್ವಿಕೆ ನಡೆಸುತ್ತಿದ್ದ ಪಹ್ಲವಿ ರಾಜವಂಶವನ್ನು ಅಧಿಕಾರದಿಂದ ಕಿತ್ತೆಸೆದಿತ್ತು. ಇದರ ನೆನಪಿಗಾಗಿ ಪ್ರತೀ ವರ್ಷ ಫೆ.8ರಂದು ವಾಯುಪಡೆಯ ಸಿಬ್ಬಂದಿ ಮತ್ತು ಕಮಾಂಡರ್‌ಗಳು ಸರ್ವೋಚ್ಚ ನಾಯಕರೊಂದಿಗೆ ಸಭೆ ನಡೆಸಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ಖಮೇನಿ ಬದಲು ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದೊಲ್‌ರಹೀಂ ಮೌಸವಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಮೆರಿಕದ ಬೆದರಿಕೆಗೆ ಅಂಜಿ ಖಮೇನಿ ಬಂಕರ್‌ನಲ್ಲಿ ಅಡಿಗಿದ್ದಾರೆ ಎಂಬ ವರದಿಗಳ ನಡುವೆ ಈ ಬೆಳವಣಿಗೆಯಾಗಿರುವುದು ಗಮನಾರ್ಹ.

ತಿರುಪ್ಪರಂಕುಂದ್ರಂನಲ್ಲಿ ನಮಾಜ್‌ ನಿಷೇಧ ಸರಿ: ಸುಪ್ರೀಂ

ನವದೆಹಲಿ: ದೀಪೋತ್ಸವ ವಿಚಾರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿನ ದರ್ಗಾದಲ್ಲಿ ನಿತ್ಯದ ನಮಾಜ್‌ ಅನ್ನು ನಿರ್ಬಂಧಿಸಿ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿಹಿಡಿದಿದೆ. ಜೊತೆಗೆ, ಇದನ್ನು ಅತ್ಯಂತ ‘ಸಮತೋಲಿತ ತೀರ್ಪು’ ಎಂದು ಬಣ್ಣಿಸಿದೆ.ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವಿದೆ. ಸಮೀಪದಲ್ಲೇ ದರ್ಗಾ ಕೂಡ ಇದೆ. ಕಳೆದ ವರ್ಷ ಬೆಟ್ಟದ ಮೇಲೆ ದೀಪೋತ್ಸವ ನಡೆಸುವ ವಿಚಾರದಲ್ಲಿ ಹಿಂದೂಗಳ ಪರ ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಇದು ನ್ಯಾಯಾಧೀಶರು ಮತ್ತು ಡಿಎಂಕೆ ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಕಾರಣವಾಗಿತ್ತು.

ಇನ್ನು, ‘ದರ್ಗಾದಲ್ಲಿ ರಂಜಾನ್ ಮತ್ತು ಬಕ್ರೀದ್‌ ದಿನಗಳಂದು ಮಾತ್ರ ಮುಸ್ಲಿಮರು ನಮಾಜ್ ನಡೆಸಬಹುದು. ನಿತ್ಯ ನಮಾಜ್‌ಗೆ ಅವಕಾಶವಿಲ್ಲ. ಆವರಣದಲ್ಲಿ ಪ್ರಾಣಿಬಲಿ ನೀಡುವುದನ್ನೂ ನಿಷೇಧಿಸಲಾಗಿದೆ’ ಎಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸುಪ್ರೀಂ ಮೊರೆ ಹೋಗಿದ್ದರು. ಸುಪ್ರೀಂ ಕೂಡ ಆದೇಶವನ್ನು ಎತ್ತಿಹಿಡಿದಿದೆ.