ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿ ಬರೋಬ್ಬರಿ ಎರಡೂವರೆ ತಿಂಗಳಾದರೂ ರಾಜ್ಯ ಇನ್ನೂ ಸಹ ಹೊತ್ತಿ ಉರಿಯುತ್ತಿದೆ. ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನವನ್ನು ನೀಡುವುದನ್ನು ವಿರೋಧಿಸಿ ಆರಂಭವಾದ ಘರ್ಷಣೆ, ದೇಶವೇ ತಲೆತಗ್ಗಿಸುವಂತಹ ಹೇಯ ಕೃತ್ಯಗಳಿಗೆ ಕಾರಣವಾಗಿದೆ. 10 ಸಾವಿರ ಯೋಧರನ್ನು ನೇಮಕ ಮಾಡಿದರೂ ಇದನ್ನೇಕೆ ತಡೆಯಲಾಗುತ್ತಿಲ್ಲ ಎಂಬುದರ ಕುರಿತಾಗಿ ಒಂದಷ್ಟು ಮಾಹಿತಿಗಳು ಇಲ್ಲಿವೆ.
ಇಂಫಾಲ್: ಈಶಾನ್ಯ ಭಾರತದ ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿ ಬರೋಬ್ಬರಿ ಎರಡೂವರೆ ತಿಂಗಳಾದರೂ ರಾಜ್ಯ ಇನ್ನೂ ಸಹ ಹೊತ್ತಿ ಉರಿಯುತ್ತಿದೆ. ಮೈತೇಯಿ ಸಮುದಾಯಕ್ಕೆ ಪರಿಶಿಷ್ಟಪಂಗಡ ಸ್ಥಾನಮಾನವನ್ನು ನೀಡುವುದನ್ನು ವಿರೋಧಿಸಿ ಆರಂಭವಾದ ಘರ್ಷಣೆ, ದೇಶವೇ ತಲೆತಗ್ಗಿಸುವಂತಹ ಹೇಯ ಕೃತ್ಯಗಳಿಗೆ ಕಾರಣವಾಗಿದೆ. ಇಲ್ಲಿ ನಡೆಯುತ್ತಿರುವ ದುರ್ಘಟನೆಗಳನ್ನು ತಡೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ಇಷ್ಟುದಿನವಾದರೂ ಗಲಭೆ ಮುಂದುವರೆಯಲು ಕಾರಣವೇನು? 10 ಸಾವಿರ ಯೋಧರನ್ನು ನೇಮಕ ಮಾಡಿದರೂ ಇದನ್ನೇಕೆ ತಡೆಯಲಾಗುತ್ತಿಲ್ಲ ಎಂಬುದರ ಕುರಿತಾಗಿ ಒಂದಷ್ಟು ಮಾಹಿತಿಗಳು ಇಲ್ಲಿವೆ.
ಎಸ್‌ಟಿ ಸ್ಥಾನಮಾನ ವಿವಾದವೇ ಹಿಂಸೆಗೆ ನಾಂದಿ
ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ಪ್ರಸ್ತಾಪವೇ ಮಣಿಪುರ(Manipur) ಧಗಧಗಿಸಲು ಮುಖ್ಯ ಕಾರಣ. ಇವರಿಗೆ ಎಸ್‌ಟಿ ಸ್ಥಾನಮಾನ ವಿರೋಧಿಸುತ್ತಿರುವವರು ಕುಕಿ ಸಮುದಾಯದವರು. ಕುಕಿಗಳು ಕ್ರೈಸ್ತರಾದರೆ ಮೈತೇಯಿಗಳು ಹಿಂದೂ ಸಮುದಾಯಕ್ಕೆ ಸೇರಿದವರು. ಶೇ.53ರಷ್ಟಿರುವ ಮೈತೇಯಿ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರ್ಪಡೆ ಮಾಡುವುದರ ಬಗ್ಗೆ ಪರಿಶೀಲಿಸಬೇಕು ಮಣಿಪುರ ಹೈಕೋರ್ಟ್ ಏ.19ರಂದು ಆದೇಶಿಸಿತ್ತು. ಇದರ ವಿರುದ್ಧ ಕುಕಿ ಹಾಗೂ ಇತರೆ ಬುಡಕಟ್ಟು ಪಂಗಡಗಳು ಪ್ರತಿಭಟನೆ ಆರಂಭಿಸಿದವು. ಏಕೆಂದರೆ ಕುಕಿ (Kuki) ಹಾಗೂ ಇತರ ನಾಗಾ ಪಂಗಡಗಳು (Naga Comunity) ಮಣಿಪುರದಲ್ಲಿ ಅಲ್ಪಸಂಖ್ಯಾತರು. ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡಿದರೆ ಅವರು ಪ್ರಬಲರಾಗುತ್ತಾರೆ. ಶೇ.10ರಷ್ಟು ಮಾತ್ರ ಬಯಲು ಪ್ರದೇಶವನ್ನು ಹೊಂದಿರುವ ಕಣಿವೆ ರಾಜ್ಯದಲ್ಲಿ ಮೈತೇಯಿಗಳಿಗೆ ಹಕ್ಕುಗಳು ವಿಸ್ತರಣೆಯಾದರೆ ತಮ್ಮ ಭೂಮಿ ಹಾಗೂ ಅರಣ್ಯಕ್ಕೆ ಭಂಗ ಬರುತ್ತದೆ ಎಂಬ ಭಯ ಅರಣ್ಯದಲ್ಲಿ ಹೆಚ್ಚಾಗಿ ನೆಲೆಸಿರುವ ಕುಕಿ ಸಮುದಾಯವನ್ನು ಕಾಡಿದೆ. ಹೀಗಾಗಿ ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡದಂತೆ ಒತ್ತಾಯಿಸುತ್ತಿದ್ದಾರೆ. ಹೈಕೋರ್ಟ್ ಆದೇಶ ನೀಡಿದ ಬಳಿಕ ನಿಧಾನವಾಗಿ ಆರಂಭವಾದ ಪ್ರತಿಭಟನೆಗಳು ಉಗ್ರ ರೂಪ ಪಡೆದು ಭಾರಿ ಹಿಂಸಾಚಾರಕ್ಕೆ (Violence)ಕಾರಣವಾಗಿದೆ. ಆದರೆ, ‘ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲ ನಮ್ಮನ್ನು ಬುಡಕಟ್ಟು ಎಂದೇ ಗುರುತಿಸಲಾಗುತ್ತಿತ್ತು. ಈಗ ಕೈಬಿಡಲಾಗಿದೆ. ಹಾಗಾಗಿ ನಮಗೆ ಎಸ್‌ಟಿ ಸ್ಥಾನಮಾನ ಬೇಕು’ ಎಂದು ಮೈತೇಯಿ ಸಮುದಾಯ ವಾದಿಸುತ್ತಿದೆ.
ಮಣಿಪುರ ಯುವತಿಯರ ಬೆತ್ತಲೆ ಪ್ರಕರಣಕ್ಕೆ ಪ್ರಧಾನಿಯ ಟೀಕಿಸಿದ ಕಿಶೋರ್, 'ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ..'
ಆರದ ಗಲಭೆಗಿದೆ ಹಲವು ಕಾರಣ
ಮಣಿಪುರದಲ್ಲಿ ಗಲಭೆ ಆರಂಭವಾಗಿ 80 ದಿನಗಳು ಕಳೆದರೂ ಇನ್ನೂ ಸಹ ಈ ಹಿಂಸಾಚಾರ ಇನ್ನೂ ಹೊಗೆಯಾಡುತ್ತಲೇ ಇದೆ. ಕೇಂದ್ರೀಯ ರಕ್ಷಣಾ ಪಡೆಗಳು ಮತ್ತು ರಾಜ್ಯ ಪೊಲೀಸರು ಎಷ್ಟೇ ಶ್ರಮ ವಹಿಸಿದರೂ ಗಲಭೆಯನ್ನು ನಿಯಂತ್ರಣಕ್ಕೆ ತರಲಾಗದ್ದಕ್ಕೆ ಹಲವು ಅಂಶಗಳು ಕಾರಣವಾಗಿವೆ.
1. ಎರಡು ಸಮುದಾಯಗಳ ನಡುವಿನ ಹಳೆಯ ದ್ವೇಷ
ಮೈತೇಯಿ-ಕುಕಿಗಳ ನಡುವಿನ ದ್ವೇಷ ಇಂದು-ನಿನ್ನೆಯದಲ್ಲ. ಮೈತೇಯಿ ಸಮುದಾಯ ಸುಮಾರು 10 ವರ್ಷಗಳಿಂದ ಎಸ್‌ಟಿ ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಲೇ ಇದೆ. ಮಣಿಪುರದಲ್ಲಿರುವ 60 ಶಾಸಕರಲ್ಲಿ 50 ಶಾಸಕರು ಮೈತೇಯಿ ಸಮುದಾಯಕ್ಕೆ ಸೇರಿದವರಾದ ಕಾರಣ, ಮೀಸಲಾತಿಯು ತಮ್ಮನ್ನು ರಾಜಕೀಯವಾಗಿ ದುರ್ಬಲಗೊಳಿಸಬಹುದು ಎಂಬ ಭೀತಿ ಕುಕಿಗಳನ್ನು ಕಾಡುತ್ತಿದೆ, ಈ ಸಮುದಾಯಗಳಲ್ಲಿರುವ ಬಂಡುಕೋರರು, ನಾಗರಿಕ ಪಡೆಗಳು ಮತ್ತು ಕಿಡಿಗೇಡಿಗಳು ಅವಕಾಶ ಸಿಕ್ಕಾಗೆಲ್ಲಾ ಇನ್ನೊಂದು ಗುಂಪಿನ ಮೇಲೆ ದಾಳಿ ನಡೆಸಿ, ಹಾನಿ ಉಂಟು ಮಾಡುತ್ತಿರುವುದು ಈ ಸಮುದಾಯಗಳ ನಡುವೆ ನಿರಂತರ ದ್ವೇಷಕ್ಕೆ ಕಾರಣವಾಗಿದೆ. ಪ್ರತಿ ಬಾರಿ ದಾಳಿ ನಡೆಸಿದಾಗಲೂ ನಡೆಯುತ್ತಿರುವ ಅಮಾನುಷ ಹತ್ಯೆಗಳು, ಆಸ್ತಿ ಪಾಸ್ತಿ ಕೊಳ್ಳೆ ಮತ್ತು ಧಾರ್ಮಿಕ ಸ್ಥಳಗಳ ನಾಶ ಇಬ್ಬರ ನಡುವೆ ಬದ್ಧ ದ್ವೇಷ ಉಂಟಾಗುವಂತೆ ಮಾಡಿದ್ದು, ಅವಕಾಶ ಸಿಕ್ಕಾಗೆಲ್ಲಾ ಅದು ಭುಗಿಲೇಳುತ್ತಿದೆ.
2. ರಾಜ್ಯ ಸರ್ಕಾರ, ಪೊಲೀಸ್ ವ್ಯವಸ್ಥೆ ಮೇಲಿನ ಅಪನಂಬಿಕೆ
ಇಲ್ಲಿನ ರಾಜ್ಯ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯ ಮೇಲೆ ಎರಡೂ ಪಂಗಡಗಳಿಗೂ ಅಪನಂಬಿಕೆ ಇರುವುದು ಅನಾಹುತ ನಿಲ್ಲದಿರಲು ಇನ್ನೊಂದು ಕಾರಣವಾಗಿದೆ. 50 ಮೈತೇಯಿ ಶಾಸಕರನ್ನು ಹೊಂದಿದ್ದರೂ ಎಸ್‌ಟಿ ಮೀಸಲಾತಿಗಾಗಿ ವರ್ಷಾನುಗಟ್ಟಲೆ ಹೋರಾಟ ಮಾಡಬೇಕಿರುವುದು ಮೈತೇಯಿ ಸಮುದಾಯವನ್ನು ಕೆರಳಿಸಿದೆ. ಮತ್ತೊಂದೆಡೆ ಮೈತೇಯಿಗಳು ಪ್ರಬಲವಾದರೆ ತಾವು ಮೂಲೆಗುಂಪು ಖಚಿತ ಎಂಬ ಭಾವನೆ ಕುಕಿಗಳಿಗಿದ್ದು, ಯಾವಾಗಲೂ ತಮ್ಮ ಸಮುದಾಯದ ವಿರುದ್ಧ ಪೊಲೀಸರು ನಡೆದುಕೊಳ್ಳುತ್ತಾರೆ ಎಂದು ಕುಕಿಗಳು ವಾದಿಸುತ್ತಲೇ ಇದ್ದಾರೆ.
ಕಾರ್ಗಿಲ್‌ನಲ್ಲಿ ದೇಶ ಕಾಪಾಡಿದ ನನ್ಗೆ, ಪತ್ನಿ ಕಾಪಾಡಲಾಗಲಿಲ್ಲ,ನಗ್ನ ಮೆರವಣಿಗೆ ಸಂತ್ರಸ್ತೆ ಪತಿ ಕಣ್ಣೀರು!
3. ಸೇನಾಪಡೆಗಳಿಗೆ ಮುಳುವಾದ ಆಫ್‌ಸ್ಪಾ ರದ್ದತಿ
ಮಣಿಪುರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ವರ್ಷ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ‘ಆಫ್‌ಸ್ಪಾ’ವನ್ನು ತೆಗೆದು ಹಾಕಿರುವ ಕಾರಣ, ಉಗ್ರ ಕೃತ್ಯ ನಡೆಸುತ್ತಿರುವ ಜನರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳುವುದು ಸೇನಾಪಡೆಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ 10 ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ನೇಮಿಸಿದರೂ ಸಹ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೇನೆ ಹಾಗೂ ಅಸ್ಸಾಂ ರೈಫಲ್ಸ್ ಪಡೆಗಳು ವಿಫಲವಾಗಿವೆ. ಹಿರಿಯ ಅಧಿಕಾರಿಗಳ ಆಣತಿ ಇಲ್ಲದೇ ಬಂಧಿಸಲು ಸಾಧ್ಯವಾಗದೇ ದುಷ್ಕರ್ಮಿಗಳು ಮತ್ತಷ್ಟು ಹಿಂಸಾಚಾರದಲ್ಲಿ ತೊಡಗಿಕೊಂಡಿದ್ದಾರೆ.
4. ದುಷ್ಕರ್ಮಿಗಳ ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ
3 ತಿಂಗಳ ಗಲಭೆ ವೇಳೆ ಸಾವಿರಾರು ಶಸ್ತ್ರಾಸ್ತ್ರಗಳನ್ನು ಸೈನಿಕರು ಹಾಗೂ ಪೊಲೀಸರಿಂದ ದುಷ್ಕರ್ಮಿಗಳು ಲೂಟಿ ಮಾಡಿದ್ದರೆ. ಅಲ್ಲದೆ, ಮಣಿಪುರ ಸಂಪೂರ್ಣವಾಗಿ ಕಣಿವೆ ರಾಜ್ಯವಾಗಿದ್ದು, ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಎರಡೂ ಗುಂಪುಗಳಿಗೂ ಆಯುಧಗಳು ಸುಲಭವಾಗಿ ದೊರೆಯುತ್ತಿವೆ. ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡಿ ಆಯುಧಗಳನ್ನು ತಂದು ಇವರಿಗೆ ಮಾರುವ ಅನೇಕ ಕಳ್ಳದಂಧೆಗಳು ಇಲ್ಲಿ ಸಾಕಷ್ಟಿವೆ. ಆಯುಧಗಳು ಸುಲಭವಾಗಿ ದೊರೆಯುತ್ತಿರುವುದರಿಂದ ಘರ್ಷಣೆಗಳು ನಡೆದಾಗೆಲ್ಲಾ ಆಗುತ್ತಿರುವ ಹಾನಿ ಹೆಚ್ಚಿನ ಮಟ್ಟದ್ದಾಗಿದೆ. ಹಿಂಸಾಚಾರದ ಬಳಿಕ ನಡೆದ ಸೈನಿಕ ಕಾರ್ಯಾಚರಣೆಯ ವೇಳೆ ಎಕೆ-47, ಎಂ-16, ಎನ್‌ಸಾಸ್ ಸೇರಿದಂತೆ ಸುಮಾರು 4 ಸಾವಿರಕ್ಕೂ ಹೆಚ್ಚು ಆಯುಧಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದವು.
ಶಾಂತಿ ಸ್ಥಾಪನೆಗೆ ಸರ್ಕಾರಗಳು ಕೈಗೊಂಡ ಕ್ರಮಗಳೇನು?
ಮಣಿಪುರ ಹಿಂಸೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಅನೇಕ ಕ್ರಮ ಕೈಗೊಂಡಿವೆ. ಆದರೆ ಅದು ಸಾಲದಾಗಿದೆ. ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಸಮತೋಲನ ಮಾಡಲಾಗದೇ ಸರ್ಕಾರಗಳು ಒದ್ದಾಡುತ್ತಿವೆ.
ಮಣಿಪುರದಲ್ಲಿ ಸಂಘರ್ಷ ಆರಂಭವಾದ ಕೂಡಲೇ ಅದನ್ನು ನಿಯಂತ್ರಿಸಲು ಮೇ 4ರಂದು ರಾಜ್ಯಸರ್ಕಾರ ಕಂಡಲ್ಲಿ ಗುಂಡು ನೀತಿಯನ್ನು ಜಾರಿ ಮಾಡಿತು. ಇದಾದ ಬಳಿಕ ಅಸ್ಸಾಂ ರೈಫಲ್ಸ್ ಮತ್ತು ಸೇನೆಯನ್ನು ನಿಯೋಜಿಸಲಾಯಿತು. ಗಲಭೆ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ವಿಧಿಸಿ, ಕೇಂದ್ರೀಯ ಭದ್ರತಾ ಪಡೆಗಳ ಪ್ರಮಾಣವನ್ನು 10 ಸಾವಿರಕ್ಕೆ ಹೆಚ್ಚಿಸಲಾಯಿತು. ರಾಜ್ಯಾದ್ಯಂತ ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಗಲಭೆಯನ್ನು ತಡೆಯಲು ಮುಂದಾದ ಸೇನಾಪಡೆಗಳು ಈ ಸಮುದಾಯಗಳಿಂದ ಆಯುಧಗಳನ್ನು ವಶಪಡಿಸಿಕೊಳ್ಳುವುದಕ್ಕೆ ಮುಂದಾದವು. ಆದರೆ ಈ ವೇಳೆ ಸೇನಾಪಡೆಗಳ ಮೇಲೂ ದಾಳಿ ನಡೆದ ಕಾರಣ ಗುಂಡಿನ ಚಕಮಕಿಯಲ್ಲಿ 33 ಮಂದಿ ಗಲಭೆಕೋರರು ಮೃತಪಟ್ಟರು. ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಖುದ್ದು 3 ದಿನ ರಾಜ್ಯದಲ್ಲಿ ಸಂಚರಿಸಿ ಶಾಂತಿಸಭೆಗಳನ್ನು ನಡೆಸಿದರು. ಆದರೂ ಹಿಂಸೆ ನಿಯಂತ್ರಣಕ್ಕೆ ಬಂದಿಲ್ಲ. ಇದೀಗ ಖುದ್ದು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಶಾಂತಿ ಸ್ಥಾಪನೆಗೆ ನಾವೇ ಸೂಚನೆ ನೀಡಬೇಕಾದೀತು ಎಂದಿದೆ.
ಭೀಕರ ಘಟನೆಗಳು
1. ಮಹಿಳೆಯರ ಬೆತ್ತಲೆ ಮೆರವಣಿಗೆ
ಮಣಿಪುರದಲ್ಲಿನ ಮಹಿಳೆಯರ ಬೆತ್ತಲೆ ಮೆರವಣಿಗೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಣಿಪುರ ಹಿಂಸಾಚಾರ ಆರಂಭವಾದ ಸಮಯದಲ್ಲಿ ಹರಡಲಾದ ಸುಳ್ಳುಸುದ್ದಿಯ ಕಾರಣದಿಂದ ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ, ವಿಡಿಯೋ ಮೂಲಕ ಈಗ ಬೆಳಕಿಗೆ ಬಂದಿದೆ. ಇದಕ್ಕೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿತು. ಈ ಘಟನೆ ಶಾಂತಸ್ಥಿತಿಗೆ ಮರಳುತ್ತಿದ್ದ ಮಣಿಪುರದಲ್ಲಿ ಮತ್ತೊಮ್ಮೆ ಪ್ರತಿಭಟನೆಗೆ ಕಾರಣವಾಗಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಿದೆ.
2. ಶಾಸಕರು-ಸಚಿವರ ಮನೆಗೆ ಬೆಂಕಿ
ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವಿನ ಘರ್ಷಣೆಯ ಸಮಯದಲ್ಲಿ ಹಲವು ಶಾಸಕರು ಹಾಗೂ ಸಚಿವರ ಮನೆಗಳಿಗೂ ಬೆಂಕಿ ಹಚ್ಚಿದ ಘಟನೆಗಳು ನಡೆದವು. ಕಾಂಗ್ರೆಸ್ ಶಾಸಕ ರಂಜಿತ್, ಏಕೈಕ ಮಹಿಳಾ ಸಚಿವೆ ನೇಮ್ಚಾ ಅವರ ಮನೆಗಳ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.
ಇದುವರೆಗಿನ ಸಾವು- ನೋವು, ಹಾನಿ
- 142- ಮಂದಿ ಸಾವು
- 310- ಮಂದಿಗೆ ಗಾಯ
- 26000 - ತಾತ್ಕಾಲಿಕವಾಗಿ ಸ್ಥಳಾಂತರ
- 46000 - ಬೇರೆ ಸ್ಥಳಗಳಿಗೆ ಸ್ಥಳಾಂತರ
- 5995 - ಇಲ್ಲಿವರೆಗೆ ದಾಖಲಾದ ಪ್ರಕರಣ
- 6745 - ಇಲ್ಲಿವರೆಗೆ ಬಂಧಿಸಲಾದ ಮಂದಿ
