ಕೋಲ್ಕತ್ತಾ(ಡಿ.22): ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ. ರಾಜಕೀಯ ನಾಯಕರ ಕೆಸರೆರಚಾಟವೂ ಮುಂದುವರೆದಿದೆ. ಹೀಗಿರುವಾಗಲೇ ಇಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಕಿಡಿ ಕಾರುತ್ತಾ 'ಧಾರ್ಮಿಕ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂಬ ಆರೋಪ ಮಾಡಿದ್ದಾರೆ. ಅಲ್ಲದೇ ರಾಷ್ಟ್ರೀಯ ರಜಾದಿನಗಳಲ್ಲಿ ಕ್ರಿಸ್‌ಮಸ್‌ ಯಾಕಿಲ್ಲ? ಎಂದೂ ಪ್ರಶ್ನಿಸಿದ್ದಾರೆ.

ಕೋಲ್ಕತ್ತಾದ ಆಲನ್ ಪಾರ್ಕ್‌ನಲ್ಲಿ ಕ್ರಿಸ್‌ಮಸ್‌ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಹಿಂದಿನ ವರ್ಷ ಹಾಗೂ ಅದಕ್ಕೂ ಮೊದಲು ಕೂಡಾ ಯೇಸು ಕ್ರಿಸ್ತ ಜನಿಸಿದ ದಿನದಂದು ರಾಷ್ಟ್ರೀಯ ರಜಾದಿನ ಎಂದು ಯಾಕೆ ಘೋಷಣೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದೆ. ಅದಕ್ಕೂ ಮೊದಲು ಕ್ರಿಸ್‌ಮಸ್ ರಾಷ್ಟ್ರೀಯ ರಜಾದಿನವೆಂದು ಘೋಷಿಸಲಾಗುತ್ತಿತ್ತು. ಬಿಜೆಪಿ ಯಾಕಿದನ್ನು ರದ್ದುಪಡಿಸಿತು? ಎಲ್ಲರಿಗೂ ಭಾವನೆಗಳಿವೆಯಲ್ಲವೇ. ಕ್ರೈಸ್ತರು ಇವರೆಗೇನು ಹಾನಿಯುಂಟು ಮಾಡಿದ್ದಾರೆ? ಈ ಹಬ್ಬ ಇಡೀ ವಿಶ್ವವೇ ಆಚರಿಸುತ್ತದೆ' ಎಂದಿದ್ದಾರೆ.

ಈ ವರ್ಷ ಕೊರೋನಾದಿಂದಾಗಿ ಕೆಲ ಸಮಸ್ಯೆಗಳಿವೆ. ನಾವು ಮಾಸ್ಕ್ ಧರಿಸಬೇಕಾಗುತ್ತದೆ, ಸಾಮಾಜಿಕ ಅಂತರವನ್ನೂ ಕಾಪಾಡಬೇಕು ಎಂದೂ ಉಲ್ಲೇಖಿಸಿದ್ದಾರೆ. ಇದೇ ವೇಳೆ ದೇಶದಲ್ಲಿರುವ ಜಾತ್ಯಾತೀತತೆ ಬಗ್ಗೆ ಪ್ರಶ್ನಿಸಿದ ಟಿಎಂಸಿ ನಾಯಕಿ, ಬಿಜೆಪಿ ಧಾರ್ಮಿಕ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದೂ ಆರೋಪಿಸಿದ್ದಾರೆ.