ಅಕ್ಟೋಬರ್‌ 21ರಂದು ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. 2019ರ ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿರುವುದರಿಂದ ಇದರ ಫಲಿತಾಂಶ ಕೂತೂಹಲ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಎರಡು ರಾಜ್ಯದ ವಿಧಾನಸಭೆಗಳ ಕಿರು ಪರಿಚಯ ಮತ್ತು ಈ ಚುನಾವಣೆ ಮೇಲೆ ಪ್ರಭಾವ ಬೀರುವ ಅಂಶಗಳ ಕುರಿತ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಮಹಾರಾಷ್ಟ್ರ

ಒಟ್ಟು ಸ್ಥಾನ-289

ಚುನಾವಣೆ ನಡೆಯುವ ಕ್ಷೇತ್ರಗಳು- 288

8.9 ಕೋಟಿ ಮತದಾರರು

95,000 ಮತಗಟ್ಟೆಗಳು

3,239 ಕಣದಲ್ಲಿರುವ ಅಭ್ಯರ್ಥಿಗಳು

ಹರಿಯಾಣ

ಒಟ್ಟು ಕ್ಷೇತ್ರಗಳು-90

ಮತದಾರರು- 1.8 ಕೋಟಿ

19,425- ಮತಗಟ್ಟೆಗಳು

ಮಹಾರಾಷ್ಟ್ರದಲ್ಲಿ ಮೈತ್ರಿ V/S ಮೈತ್ರಿ

ಮಹಾರಾಷ್ಟ್ರ ಭಾರತದ ಮೂರನೇ ಅತಿ ದೊಡ್ಡ ರಾಜ್ಯ. ಸದ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರವಿದೆ. 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೊದಲ ಬಾರಿ ಚುನಾವಣಾ ಪೂರ್ವ ಮೈತ್ರಿಯಿಲ್ಲದೆ ಸ್ಪರ್ಧಿಸಿದ್ದವು. ಬಿಜೆಪಿ 122 ಸೀಟುಗಳನ್ನು ಗೆದ್ದಿತು. ಸರ್ಕಾರ ರಚಿಸಲು ಶಿವಸೇನೆ ಬೆಂಬಲ ನೀಡಿತು. ಅದರಂತೆ ದೇವೆಂದ್ರ ಫಡ್ನವೀಸ್‌ ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಶಿವಸೇನೆ ಹಾಗೂ ಕಾಂಗ್ರೆಸ್‌-ಎನ್‌ಸಿಪಿ ಈ ಬಾರಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿವೆ.

ಚುನಾವಣೆಗೂ ಮುನ್ನ ಸ್ವಪಕ್ಷೀಯರಿಂದಲೇ ಶಿವಸೇನೆಗೆ ಬಿಗ್ ಶಾಕ್!

ಠಾಕ್ರೆ ಕುಟುಂಬದಿಂದ ಮೊದಲ ಬಾರಿ ಸ್ಪರ್ಧೆ!

ಮಹಾರಾಷ್ಟ್ರ ರಾಜಕೀಯದಲ್ಲಿ ಶಿವಸೇನೆ ಸಕ್ರಿಯವಾಗಿದ್ದರೂ, ಶಿವಸೇನೆಯ ಸಂಸ್ಥಾಪಕರಾದ ಠಾಕ್ರೆ ಕುಟುಂಬದಿಂದ ಯಾರೊಬ್ಬರೂ ಇದುವರೆಗೆ ಚುನಾವಣೆಗೆ ನಿಂತಿರಲಿಲ್ಲ. ಆದರೆ ಈ ಬಾರಿ ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಪುತ್ರ ಹಾಗೂ ಯುವಸೇನೆಯ ಮುಖ್ಯಸ್ಥ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

29 ವರ್ಷದ ಆದಿತ್ಯ ಠಾಕ್ರೆಯೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದು ಶಿವಸೇನೆ ಕಾರ‍್ಯಕರ್ತರು ಹೇಳುತ್ತಿದ್ದಾರೆ. ಇತ್ತ ಬಿಜೆಪಿಯ ದೇವೆಂದ್ರ ಫಡ್ನವೀಸ್‌ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಆದಿತ್ಯ ಠಾಕ್ರೆಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬಹುದು ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಕುತೂಹಲ ಹುಟ್ಟಿಸುತ್ತಿದೆ.

ಬಂಡಾಯ/ಪಕ್ಷಾಂತರದ ಲಾಭ ಯಾರಿಗೆ?

ಚುನಾವಣೆ ಘೋಷಣೆಯಾಗುತ್ತಿದ್ದಂತೇ ವಿಪಕ್ಷಗಳ ಹಲವು ನಾಯಕರು ಬಿಜೆಪಿ ಹಾಗೂ ಶಿವಸೇನೆಗೆ ಪಕ್ಷಾಂತರ ಮಾಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷಾಂತರ ಆಗಿದೆ. ಇತ್ತ ಬಂಡಾಯ ಎದ್ದ ಬಿಜೆಪಿ-ಶಿವಸೇನೆ ಮೈತ್ರಿ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಕರೆದು ಸೀಟು ಹಂಚುತ್ತಿವೆ. ಹಾಗಾಗಿ ಈ ಬಂಡಾಯ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದೇ ಕುತೂಹಲಕಾರಿ.

ಮಹಾರಾಷ್ಟ್ರದ ಮುಮದಿನ ಮುಖ್ಯಮಂತ್ರಿ ಆದಿತ್ಯ ಠಾಕ್ರೆ?

ಕಾಂಗ್ರೆಸ್‌ ನೆಲದಲ್ಲಿ ಬಿಜೆಪಿ ಮತ್ತೆ ಜಯಭೇರಿ ಬಾರಿಸುತ್ತಾ?

1996ರಲ್ಲಿ ರಾಜ್ಯ ಎಂಬ ಮಾನ್ಯತೆ ಪಡೆದ ಹರಿಯಾಣದಲ್ಲಿ ಕಾಂಗ್ರೆಸ್‌ ಪ್ರಬಲ ಪಕ್ಷವಾಗಿತ್ತು. 1996-2005ರ ವರೆಗೆ ಇಂಡಿಯನ್‌ ನ್ಯಾಷನಲ್‌ ಲೋಕದಳ ಹರಿಯಾಣದ ಆಡಳಿತ ಚುಕ್ಕಾಣಿ ಹಿಡಿದಿತ್ತು. ಬಳಿಕ ಮತ್ತೆ ಕಾಂಗ್ರೆಸ್‌ 2 ಅವಧಿಯಲ್ಲಿ ಗೆದ್ದು ಹರಿಯಾಣದಲ್ಲಿ ಪ್ರಬಲವಾಗಿ ಬೆಳೆಯಿತು. ಆದರೆ 2014ರ ವಿಧಾನಸಭಾ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂತು. ಜಾಟರೇ ಪ್ರಬಲರಾಗಿರುವ ಇಲ್ಲಿ ಪಂಜಾಬಿನ ಮನೋಹರ್‌ ಲಾಲ್‌ ಕಟ್ಟರ್‌ ಮುಖ್ಯಮಂತ್ರಿಯಾಗಿದ್ದಾರೆ. ಒಟ್ಟು 90 ವಿಧಾನಸಭಾ ಕ್ಷೇತ್ರಗಳಿದ್ದು, 2014ರ ಚುನಾವಣೆಯಲ್ಲಿ ಬಿಜೆಪಿ 48 ಸೀಟುಗಳನ್ನು ಗೆಲ್ಲುವ ಮೂಲಕ ಜಯಭೇರಿ ಬಾರಿಸಿತ್ತು.

ಹರಿಯಾಣದಲ್ಲಿ ಮಿಷನ್‌-75

ಹರಿಯಾಣ ರಾಜಕೀಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹಿಂದಿನ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿರುವ ಬಿಜೆಪಿ ಈ ಬಾರಿಯೂ ಈ ಬಾರಿಯೂ ಗೆಲ್ಲುವ ಪಣ ತೊಟ್ಟಿದೆ. ಅದಕ್ಕಾಗಿ ‘ಮಿಷನ್‌-75’ ಎಂಬ ಆಂದೋಲನವನ್ನೇ ಪ್ರಾರಂಭಿಸಿದೆ. ಒಟ್ಟು 90 ಸೀಟುಗಳ ಪೈಕಿ ಕನಿಷ್ಠ 75 ಸೀಟುಗಳನ್ನು ತನ್ನದಾಗಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಿದೆ.

ಜಾತಿ ಬಲವಿಲ್ಲದ ಮುಖ್ಯಮಂತ್ರಿಗಳು

ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಪ್ರಾಬಲ್ಯವಿದೆ. ಆದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಮನೋಹರ್‌ ಜೋಷಿ ಬಳಿಕ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ 2ನೇ ಬ್ರಾಹ್ಮಣ. ಈ ಬಾರಿಯೂ ತಾನೇ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಫಡ್ನವೀಸ್‌ ಹೇಳಿಕೊಂಡಿದ್ದಾರೆ.

ಅದೇ ರೀತಿ ಹರಿಯಾಣದಲ್ಲಿ ಜಾಟ್‌ ಸಮುದಾಯದವರ ಪ್ರಾಬಲ್ಯವಿದೆ. ಆದರೆ ಪಂಜಾಬಿ ಮನೋಹರ್‌ ಲಾಲ್‌ ಕಟ್ಟರ್‌ ಅವರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿದೆ. 18 ವರ್ಷದ ನಂತರ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಜಾಟ್‌ ಸಮುದಾಯಕ್ಕೆ ಸೇರಿಲ್ಲದ ವ್ಯಕ್ತಿ ಕಟ್ಟರ್‌. ಆದರೆ ಜಾಟರ ಮೀಸಲಾತಿ ಹೋರಾಟವನ್ನು ಕಟ್ಟರ್‌ ಸರಿಯಾಗಿ ನಿಭಾಯಿಸಲಿಲ್ಲ ಎಂಬ ಆರೋಪ ಅವರ ಮೇಲಿದೆ. ಅದೂ ಕೂಡ ಚುನಾವಣೆಯಲ್ಲಿ ಪ್ರಭಾವ ಬೀರಬಹುದು.

ಯಾವ್ಯಾವ ಪ್ರಶ್ನೆಗೆ ಈ ಚುನಾವಣೆಯಲ್ಲಿ ಉತ್ತರ ಸಿಗಲಿದೆ? ಕಾಂಗ್ರೆಸ್‌ ಉಳಿಯುತ್ತಾ? ಅಳಿಯುತ್ತಾ?

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯು ಕಾಂಗ್ರೆಸ್‌ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌ಗೆ ಈ ಬಾರಿಯ ಚುನಾವಣೆಯಲ್ಲೂ ಹಿನ್ನಡೆಯಾದರೆ, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹತಾಶೆ ಮತ್ತಷ್ಟುತೀವ್ರವಾಗಲಿದೆ. ಈಗಾಗಲೇ ಕಾಂಗ್ರೆಸ್‌ನ ಹಲವು ಪ್ರಭಾವಿ ಮುಖಂಡರನ್ನು ಬಿಜೆಪಿ ಸೆಳೆದಿರುವುದು ಪಕ್ಷಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಲಿದೆ.

370ನೇ ವಿಧಿ ರದ್ದು ಮಾಡುವ ಮೂಲಕ ಬಿಜೆಪಿ ಸೃಷ್ಟಿಸಿರುವ ರಾಷ್ಟ್ರೀಯತೆಯ ಸೆಂಟಿಮೆಂಟನ್ನು ಮೆಟ್ಟಿನಿಲ್ಲುವಂತಹ ಯಾವುದೇ ಅಸ್ತ್ರ ಕಾಂಗ್ರೆಸ್‌ ಬಳಿ ಇಲ್ಲ. ಸಾಲದೆಂಬಂತೆ ಕಾಂಗ್ರೆಸ್‌ ನಾಯಕರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳು, ಜೈಲು ಸೇರಿರುವ ಕಾಂಗ್ರೆಸ್‌ ನಾಯಕರಿಂದಾಗಿ ಪಕ್ಷದ ವರ್ಚಸ್ಸು ಮತ್ತಷ್ಟುಕುಗ್ಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರಯೋಗಿಸಲು ಹೊರಟಿರುವ ಆರ್ಥಿಕ ಹಿಂಜರಿಕೆ, ಉದ್ಯೊಗ ನಷ್ಟಮುಂತಾದ ಅಸ್ತ್ರಗಳು ಯಾವುದೇ ಪರಿಣಾಮ ಬೀರುತ್ತವೆಯೇ ಎಂದು ಕಾದು ನೋಡಬೇಕಿದೆ.

ಮೋದಿ ಮತ್ತು ಬಿಜೆಪಿ ಜನಪ್ರಿಯತೆ ಹೇಗಿದೆ?

2019ರ ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇವು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿತ್ತು. ಅದೇ ಜನಪ್ರಿಯತೆ ಇನ್ನೂ ಉಳಿದಿದೆಯೇ ಎಂಬ ಪ್ರಶ್ನೆಗೆ ಈಗ ಉತ್ತರ ಸಿಗಲಿದೆ.

370ನೇ ವಿಧಿಗೆ ಜನರು ಏನು ಹೇಳುತ್ತಾರೆ?

ಇತ್ತೀಚೆಗೆ ಕೇಂದ್ರ ಸರ್ಕಾರ ಜಮ್ಮು-ಕಾಶ್ಮಿರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್‌ 370ಯನ್ನು ರದ್ದು ಮಾಡುವ ಐತಿಹಾಸಿಕ ನಿರ್ಧಾರ ಕೈಗೊಡಿತ್ತು. ಈ ಬಗ್ಗೆ ಈ ಎರಡು ರಾಜ್ಯದ ಜನರ ಮನಸ್ಸಿನಲ್ಲಿ ಏನಿದೆ, ಜನಾಭಿಪ್ರಾಯ ಏನು ಎಂಬುದು ಈ ಚುನಾವಣೆ ಮೂಲಕ ತಿಳಿಯಲಿದೆ.

ತ್ರಿವಳಿ ತಲಾಕ್‌ ನಿಷೇಧ ಬಿಜೆಪಿಗೆ ವರವೇ?

ಹೊಸದಾಗಿ ರಚನೆಯಾದ ಮೋದಿ 2.0 ಸರ್ಕಾರವು ಬಜೆಟ್‌ ಅಧಿವೇಶನದ ವೇಳೆ ತ್ರಿವಳಿ ತಲಾಕ್‌ ಪದ್ಧತಿಯನ್ನು ನಿಷೇಧಿಸಿತು. ಇದನ್ನೂ ಕೇಂದ್ರ ಸರ್ಕಾರ ಇಟ್ಟಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿತ್ತು. ಆದರೆ ಈ ಎರಡು ರಾಜ್ಯಗಳ ಮುಸ್ಲಿಂ ಸಮುದಾಯ ಮೋದಿ ಸರ್ಕಾರದ ಈ ಕ್ರಮವನ್ನು ಹೇಗೆ ಸ್ವೀಕರಿಸುತ್ತವೆ ಎಂಬುದೇ ಕುತೂಹಲಕಾರಿ.

ಆರ್ಥಿಕ ಹಿಂಜರಿತ ಬಿಜೆಪಿ ಶಾಪವಾಗುತ್ತಾ?

ಚುನಾವಣೆ ಸಮಯಯಲ್ಲೇ ಭಾರತದಲ್ಲಿ ಹಿಂದೆಂದೂ ಕಾಣದ ಆರ್ಥಿಕ ಹಿಂಜರಿತ ಸಂಭವಿಸಿದೆ. ವಾಹನ ಮಾರಾಟ ಸಾರ್ವಕಾಲಿಕ ಇಳಿಕೆ ಕಂಡಿದೆ. ಜಿಡಿಪಿ 6 ವರ್ಷ ಹಿಂದಕ್ಕೆ ಹೋಗಿದೆ. ನಿರುದ್ಯೋಗ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳು ಈ ಅಂಕಿಂಶಗಳನ್ನಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ಆಕ್ರಮಣ ಮಾಡುತ್ತಿವೆ. ಮೋದಿ ಅಲೆಯಿಂದ ಕೊಚ್ಚಿ ಹೋಗಿರುವ ವಿಪಕ್ಷಗಳಿಗೆ ಮೋದಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಲೇಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆರ್ಥಿಕ ಹಿಂಜರಿತ ದೊಡ್ಡ ಅಸ್ತ್ರ. ಆದರೆ ವಿಪಕ್ಷಗಳು ಅದನ್ನು ಹೇಗೆ ಬಳಸಿಕೊಳ್ಳುತ್ತವೆ, ಜನರಿಗೆ ಹೇಗೆ ಮನವರಿಕೆ ಮಾಡುತ್ತವೆ ಎಂಬುದು ಸದ್ಯದ ಕುತೂಹಲ.

ರಾಹುಲ್‌ ಗಾಂಧಿ ಬೇಕೋ, ಬೇಡವೋ?

ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್‌ ಪಕ್ಷ ಎದುರಿಸುತ್ತಿರುವ ಮೊದಲ ಚುನಾವಣೆಗಳು ಇವು. ಮತ್ತೆ ಅನಿವಾರ್ಯವಾಗಿ ಎಐಸಿಸಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ಅವರಿಂದಾಗಿಯೇ ಪಕ್ಷ ಸೋಲನುಭವಿಸುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಈಗ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ನ ಸಾಧನೆ ಉತ್ತಮವಾಗಿದ್ದರೆ ಈ ವಾದಕ್ಕೆ ಇನ್ನಷ್ಟುಪುಷ್ಟಿಸಿಗಬಹುದು. ಹಾಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ರಾಹುಲ್‌ ನಾಯಕತ್ವ ಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆಗೂ ಈ ಚುನಾವಣೆ ಉತ್ತರ ನೀಡಬಹುದು.