ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ ನೀಡಲಾದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ದೆಹಲಿಯಲ್ಲಿನ ಸರ್ಕಾರಿ ಬಂಗಲೆಯನ್ನು ಮರಳಿಸಲಾಗಿದೆ.
ನವದೆಹಲಿ: ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ ನೀಡಲಾದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ದೆಹಲಿಯಲ್ಲಿನ ಸರ್ಕಾರಿ ಬಂಗಲೆಯನ್ನು ಮರಳಿಸಲಾಗಿದೆ. ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ರಾಹುಲ್ ‘ಮೇರಾ ಘರ್ ಪೂರಾ ಹಿಂದೂಸ್ಥಾನ್ ಹೈ’ (ಇಡೀ ಭಾರತವೇ ನನ್ನ ಮನೆ) ಎಂದಿದ್ದಾರೆ.
ಈ ಹಿಂದೆ ರಾಹುಲ್ ವಾಸವಿದ್ದ ದೆಹಲಿಯ ತುಘಲಕ್ ಲೇನ್‌ನಲ್ಲಿರುವ ಅಧಿಕೃತ ಬಂಗಲೆಯನ್ನು ಅವರಿಗೆ ಮರಳಿಸಲಾಗಿದ್ದು, ಅವರು ಶೀಘ್ರವೇ ಅಲ್ಲಿಗೆ ಮರಳುವ ಸಾಧ್ಯತೆ ಇದೆ. ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ಘೋಷಣೆಯಾದ ಬೆನ್ನಲ್ಲೇ ಅವರ ಸಂಸತ್ ಸದಸ್ಯತ್ವ ರದ್ದುಗೊಳಿಸಲಾಗಿತ್ತು. ಹೀಗಾಗಿ ಅವರಿಗೆ ನೀಡಿದ್ದ ಸರ್ಕಾರಿ ಬಂಗಲೆಯನ್ನು ಹಿಂಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ತಮ್ಮ ಮನೆಯಲ್ಲಿದ್ದ ವಸ್ತುಗಳನ್ನು ತಮ್ಮ ತಾಯಿ ಸೋನಿಯಾಗೆ ನೀಡಿರುವ ಮನೆಗೆ ಸ್ಥಳಾಂತರಿಸಿದ್ದರು.
ಅನರ್ಹತೆ ರದ್ದು ಬಳಿಕ ಮೊದಲ ಭೇಟಿ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆ. 12- 13 ರಂದು ತಮ್ಮ ತವರು ಕ್ಷೇತ್ರವಾದ ಕೇರಳದ ವಯನಾಡ್‌ಗೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ. ರದ್ದಾಗಿದ್ದ ಸಂಸದ ಸ್ಥಾನವನ್ನು ಮರಳಿ ಪಡೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ‘ಆ.12-13 ರಂದು ರಾಹುಲ್ ಗಾಂಧಿ ಅವರು ತಮ್ಮ ತವರು ಕ್ಷೇತ್ರ ವಯನಾಡ್‌ನಲ್ಲಿರುತ್ತಾರೆ. ಪ್ರಜಾಪ್ರಭುತ್ವ ಗೆದ್ದಿದೆ ಎಂದು ವಯನಾಡಿನ ಜನರು ಹರ್ಷಿಸಿದ್ದಾರೆ. ಅವರ ಧ್ವನಿ ಸಂಸತ್ತಿಗೆ ಮರಳಿದೆ. ರಾಹುಲ್ ಅವರು ಕೇವಲ ವಯನಾಡಿದ ಸಂಸದರಲ್ಲ. ಅಲ್ಲಿನ ಜನರ ಕುಟುಂಬ ಸದಸ್ಯರು’ ಎಂದು ಬರೆದುಕೊಂಡಿದ್ದಾರೆ.
ಅಕ್ರಮ ಹಣ ವರ್ಗಾವಣೆ: ವಿಚಾರಣೆಗೆ ಬರಲು ಸಿಎಂ ಸೂರೇನ್‌ಗೆ ಇಡಿ ಸಮನ್ಸ್
ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೇನ್‌ಗೆ ಇ.ಡಿ (ಜಾರಿ ನಿರ್ದೇಶನಾಲಯ) ಸಮನ್ಸ್ ನೀಡಿದೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತಮ್ಮ ಹೇಳಿಕೆಗಳನ್ನು ದಾಖಲಿಸಲು ಆ.14 ರಂದು ರಾಂಚಿಯಲ್ಲಿರುವ ಇ.ಡಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ. ಆದರೆ ಯಾವ ಪ್ರಕರಣದಡಿಯಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತು ವಿಚಾರಣೆಗೆ ಕರೆದಿದೆ ಎಂಬುದು ಸ್ಪಷ್ಟವಾಗಿಲ್ಲ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲೂ ಕಳೆದ ವರ್ಷ ನವೆಂಬರ್‌ನಲ್ಲಿ ಹೇಮಂತ್ ಅಕ್ರಮ ಹಣ ವರ್ಗಾವಣೆ ಕುರಿತ ವಿಚಾರಣೆಗೆ ಹಾಜರಾಗಿದ್ದರು.
