ನವದೆಹಲಿ (ಫೆ.29): 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರ ಬಲಿಪಡೆದ 2019ರ ಪುಲ್ವಾಮ ಆತ್ಮಾಹುತಿ ದಾಳಿ ಪ್ರಕರಣದ ಪ್ರಮುಖ ಸಂಚುಕೋರನೊಬ್ಬನನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಶುಕ್ರವಾರ ಬಂಧಿಸಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಹಲವು ಉಗ್ರರು ಭದ್ರತಾ ಪಡೆಗಳಿಗೆ ಬಲಿಯಾಗಿದ್ದರಾದರೂ, ಇದುವರೆಗೆ ಯಾರೂ ಸೆರೆ ಸಿಕ್ಕಿರಲಿಲ್ಲ. ಹೀಗಾಗಿ ಇದು ಪ್ರಕರಣದಲ್ಲಿ ಮೊದಲ ಬಂಧನವಾಗಿದ್ದು, ಪ್ರಕರಣದ ಮೇಲೆ ತನಿಖಾ ತಂಡಗಳು ಇನ್ನಷ್ಟುಬೆಳಕು ಚೆಲ್ಲಲು ಸಾಧ್ಯವಾಗಲಿದೆ.

ಬಂಧಿತನನ್ನು ಪುಲ್ವಾಮಾದ ಕಾಕಪೋರಾದ ನಿವಾಸಿ, ಪೀಠೋಪಕರಣ ಅಂಗಡಿ ಮಾಲೀಕ ಶಾಕಿರ್‌ ಬಷೀರ್‌ ಮಗ್ರೇ (22) ಎಂದು ಗುರುತಿಸಲಾಗಿದೆ. ಈತ 2018ರಿಂದಲೂ ಪಾಕಿಸ್ತಾನ ಮೂಲದ ಜೈಷ್‌ ಎ ಮಹಮ್ಮದ್‌ ಸಂಘಟನೆಯ ಪರವಾಗಿ ಭೂಗತವಾಗಿ ಕಾರ್ಯನಿರ್ವಹಿಸುತ್ತಿದ್ದ ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.

ದಾಳಿಕೋರಗೆ ಆಶ್ರಯ:

2018ರಲ್ಲಿ ಪಾಕ್‌ ಮೂಲದ ಉಗ್ರ ಮಹಮ್ಮದ್‌ ಉಮರ್‌ ಫಾರುಖ್‌ ಎಂಬಾತ ಶಾಕಿರ್‌ಗೆ, ಪುಲ್ವಾಮಾ ಆತ್ಮಾಹುತಿ ದಾಳಿಕೋರ ಆದಿಲ್‌ ಅಹ್ಮದ್‌ ದಾರ್‌ನನ್ನು ಪರಿಚಯ ಮಾಡಿಕೊಟ್ಟಿದ್ದ. ಬಳಿಕ ಶಾಕಿರ್‌, ದಾರ್‌ಗೆ ತನ್ನ ಮನೆಯಲ್ಲೇ ಆಶ್ರಯ ನೀಡಿದ್ದ. ಆತನಿಗೆ ದಾಳಿಗೆ ಬೇಕಾದ ಸ್ಫೋಟಕ ವಸ್ತು ತಯಾರಿಸಲು ನೆರವು ನೀಡಿದ್ದ. ದಾಳಿಗೆ ಬಳಸಿದ್ದ ಕಾರಿನ ವಿನ್ಯಾಸ ಬದಲಾಯಿಸಲು ನೆರವಾಗಿದ್ದ. ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಷ್ಟುಮಾತ್ರವಲ್ಲ, ಸಾಕಷ್ಟುಬಾರಿ ತಾನು ಉಗ್ರರಿಗೆ ಅಗತ್ಯವಾದ ಹಣ, ಶಸ್ತ್ರಾಸ್ತ್ರ, ಸ್ಫೋಟಕ ಪದಾರ್ಥಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ನೆರವಾಗಿದ್ದ ಎಂಬ ವಿಷಯವನ್ನು ವಿಚಾರಣೆ ವೇಳೆ ಶಾಕಿರ್‌ ಒಪ್ಪಿಕೊಂಡಿದ್ದಾನೆ.

ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ಅವಮಾನ ಮಾಡಿದ್ರಾ ರಾಹುಲ್ ಗಾಂಧಿ...

ಸೇನೆ ಮೇಲೆ ನಿಗಾ:

ಶಾಕಿರ್‌ ತನ್ನ ಫರ್ನಿಚರ್‌ ಅಂಗಡಿಯಿರುವ ಲೆಥ್‌ಪೊರಾ ಸೇತುವೆ ಪ್ರದೇಶದಿಂದಲೇ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿನ ಸಿಆರ್‌ಪಿಎಫ್‌ ಬೆಂಗಾವಲು ವಾಹನಗಳ ಮೇಲೆ ನಿಗಾ ವಹಿಸಿದ್ದ. ಬಳಿಕ ಈ ಎಲ್ಲ ಮಾಹಿತಿಗಳನ್ನು ದಾಳಿಕೋರ ದಾರ್‌ ಹಾಗೂ ಉಮರ್‌ಗೆ ನೀಡಿದ್ದ ನೀಡುತ್ತಿದ್ದ.
  
ಉಗ್ರರೆಲ್ಲಾ ಗುಂಡಿಗೆ ಬಲಿ

ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಇತರೆ ಉಗ್ರರ ಪೈಕಿ ಮುದ್ದಾಸಿರ್‌ ಅಹ್ಮದ್‌ ಖಾನ್‌ನನ್ನು 2019ರ ಮಾ.11ರಂದು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಇನ್ನು ಫಾರುಖ್‌, ಕಮ್ರಾನ್‌ 2019ರ ಮಾ.29ರಂದು, ದಾಳಿಗೆ ಬಳಸಲಾದ ಕಾರಿನ ಮಾಲಿಕ ಸಜ್ಜದ್‌ ಅಹ್ಮದ್‌ ಭಟ್‌ನನ್ನು 2019ರ ಜೂ.16, ಕಾಶ್ಮೀರದ ಜೆಇಎಂ ಕಮಾಂಡರ್‌ ಖ್ವಾರಿ ಯಾಸಿರ್‌ನನ್ನು 2020ರ ಜ.25ರಂದು ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿದ್ದವು.