ಧಾರಾವಿಗೆ ವಿಶ್ವಸಂಸ್ಥೆ ಮೆಚ್ಚುಗೆ: ಕೊರೋನಾ ನಿಯಂತ್ರಿಸಲು ಯಶಸ್ವಿಯಾದ ಏಷ್ಯಾದ ಅತಿದೊಡ್ಡ ಸ್ಲಂ!
ಕೊರೋನಾ ಗೆದ್ದ ಧಾರಾವಿ ಸ್ಲಂ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ| ಸೋಂಕು ಎಷ್ಟೇ ತೀವ್ರವಾಗಿದ್ದರೂ ನಿಯಂತ್ರಿಸಬಹುದು| ಧಾರಾವಿ ಕೂಡ ಉದಾಹರಣೆ: ಡಬ್ಲ್ಯುಎಚ್‌ಒ ಬಾಸ್
ಮುಂಬೈ(ಜು.12): ವಾಣಿಜ್ಯ ರಾಜಧಾನಿ ಮುಂಬೈನಲ್ಲಿರುವ ಏಷ್ಯಾದ ಅತಿದೊಡ್ಡ ಕೊಳಗೇರಿ ಧಾರಾವಿಯಲ್ಲಿ ಕೊರೋನಾ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅತೀವ ಮೆಚ್ಚುಗೆ ವ್ಯಕ್ತಪಡಿಸಿದೆ.
ಕೊರೋನಾ ವೈರಸ್ ಸೋಂಕು ಎಷ್ಟೇ ತೀವ್ರ ಅಬ್ಬರ ಹೊಂದಿದ್ದರೂ, ಅದನ್ನು ನಿಯಂತ್ರಣಕ್ಕೆ ತರಬಹುದು ಎಂಬುದಕ್ಕೆ ವಿಶ್ವದಾದ್ಯಂತ ಹಲವು ಉದಾಹರಣೆಗಳು ಸಿಗುತ್ತವೆ. ಅದರಲ್ಲಿ ಮುಂಬೈನಲ್ಲಿರುವ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಧಾರಾವಿ ಕೂಡ ಒಂದು ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಘೆಬ್ರಿಯೆಸಸ್ ಅವರು ತಿಳಿಸಿದ್ದಾರೆ. ಧಾರಾವಿಯಂತೆಯೇ ಇಟಲಿ, ಸ್ಪೇನ್, ದಕ್ಷಿಣ ಕೊರಿಯಾದಲ್ಲೂ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಆಕ್ಸಿಜನ್ ಸಿಲಿಂಡರ್, ರೇಷನ್, ವೆಂಟಿಲೇಟರ್; ರಿಯಲ್ ಹೀರೋ ಅಜಯ್ ದೇವಗನ್
2.5 ಚದರ ಕಿ.ಮೀ.ಯಷ್ಟುಸಣ್ಣ ಜಾಗದಲ್ಲಿ ಬರೋಬ್ಬರಿ 6.5 ಲಕ್ಷ ಜನರು ವಾಸಿಸುತ್ತಿರುವ ಧಾರಾವಿಯು ಮಹಾರಾಷ್ಟ್ರದ ಕೊರೋನಾ ಹಾಟ್‌ಸ್ಪಾಟ್ ಆಗುವ ಭೀತಿ ಸೃಷ್ಟಿಸಿತ್ತು. ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಇದೀಗ ಈ ಸ್ಲಂನಲ್ಲಿ ಬೆರಳೆಣಿಕೆಯಷ್ಟುಪ್ರಕರಣಗಳು ಮಾತ್ರವೇ ಪತ್ತೆಯಾಗುತ್ತಿವೆ. 2347 ಕೊರೋನಾಪೀಡಿತರ ಪೈಕಿ ಈಗಾಗಲೇ 1815 ಮಂದಿ (ಶೇ.82ರಷ್ಟುಜನ) ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 166 ಸಕ್ರಿಯ ಪ್ರಕರಣಗಳು ಮಾತ್ರವೇ ಇವೆ. ಏಪ್ರಿಲ್‌ನಲ್ಲಿ ಪ್ರತಿ 18 ದಿನಕ್ಕೆ ಡಬಲ್ ಆಗುತ್ತಿದ್ದ ಸೋಂಕು ಈಗ 430 ದಿನಗಳನ್ನು ತೆಗೆದುಕೊಳ್ಳುತ್ತಿದೆ.
ನಿಯಂತ್ರಣ ಹೇಗೆ?:
10 ಅಡಿ ಉದ್ದ, 10 ಅಡಿ ಅಗಲದ ಕೋಣೆಯಲ್ಲಿ 8ರಿಂದ 10 ಮಂದಿ ವಾಸಿಸುವ ಧಾರಾವಿ ಜನ ದಟ್ಟಣೆಯಿಂದ ಕೂಡಿರುವ ಕೊಳಗೇರಿ. ಏ.1ರಂದು ಇಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾಗಿತ್ತು. ಅದು ಕ್ಷಿಪ್ರವಾಗಿ ಹರಡಲು ಆರಂಭಿಸಿತು. ಹೀಗಾಗಿ ಸರ್ಕಾರವೇ ಮಧ್ಯಪ್ರವೇಶಿಸಿ, 6 ಲಕ್ಷ ಜನರನ್ನು ತಪಾಸಣೆಗೆ ಒಳಪಡಿಸಿತು. ಸೋಂಕಿತರನ್ನು ಪ್ರತ್ಯೇಕಿಸಿತು. ಸೋಂಕಿತರ ಜತೆ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಿತು. ಲಾಕ್‌ಡೌನ್ ವೇಳೆ ಸಮುದಾಯ ಅಡುಗೆ ಕೋಣೆ ತೆರೆದು, ಊಟ ವಿತರಿಸಲಾಯಿತು.
ಹೊಟ್ಟೆತುಂಬಿಸಿಕೊಳ್ಳಲು ಹೋಗಿ, ಜೀವ ಉಳಿಸಿಕೊಳ್ಳಲು ಬಂದೆವು: ಮುಂಬೈ ವಲಸಿಗರ ಅಳಲು
ಧಾರಾವಿಯ ಶೇ.80ರಷ್ಟುಜನರು 450 ಸಮುದಾಯ ಶೌಚಾಲಯಗಳ ಮೇಲೆ ಅವಲಂಬಿತರಾಗಿದ್ದರು. ಅದನ್ನು ನೈರ್ಮಲ್ಯೀಕರಣಗೊಳಿಸಿ, ಪ್ರತಿನಿತ್ಯ ಹಲವು ಬಾರಿ ಕ್ರಿಮಿನಾಶಕ ಸಿಂಪಡಿಸಲಾಯಿತು. ಹಿರಿಯ ನಾಗರಿಕರಿಗೆ ವಿಶೇಷ ಗಮನವಹಿಸಲಾಯಿತು. ಪ್ರತಿ ಮನೆಗೂ ತೆರಳಿ ಆರೋಗ್ಯ ತಪಾಸಣೆ ನಡೆಸಲಾಯಿತು. ಕೊಳೆಗೇರಿಯಲ್ಲಿ ಕ್ಲಿನಿಕ್, ಆಸ್ಪತ್ರೆ ತೆರೆಯಲಾಯಿತು. ಆ ಆಸ್ಪತ್ರೆಯಲ್ಲೇ ಶೇ.90ರಷ್ಟುರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.