ನವದೆಹಲಿ(ಜ.26): ಖಾಸಗಿತನಕ್ಕೆ ಸಂಬಂಧಿಸಿದ ಹೊಸ ನೀತಿ ಕುರಿತಾಗಿ ಭಾರತ ಹಾಗೂ ಯುರೋಪಿಯನ್‌ ಬಳಕೆದಾರರ ನಡುವೆ ಪ್ರಸಿದ್ಧ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ ತಾರತಮ್ಯ ಮಾಡುತ್ತಿದೆ. ಇದು ಕಳವಳಕಾರಿ ವಿಷಯವಾಗಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸುತ್ತಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ.

ಖಾಸಗಿತನಕ್ಕೆ ಸಂಬಂಧಿಸಿದ ನೀತಿ ಕುರಿತು ವಾಟ್ಸ್‌ಆ್ಯಪ್‌ ಕಂಪನಿ ಏಕಪಕ್ಷೀಯವಾಗಿ ಬದಲಾವಣೆ ಮಾಡಿದೆ. ಇದು ಕೂಡ ಕಳವಳಕಾರಿ ವಿಚಾರವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾ ಅವರು ಹೈಕೋರ್ಟ್‌ ನ್ಯಾಯಮೂರ್ತಿ ಸಂಜೀವ್‌ ಸಚದೇವ ಅವರ ಎದುರು ವಾದಿಸಿದರು.

ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ಕಂಪನಿ ಖಾಸಗಿತನಕ್ಕೆ ಸಂಬಂಧಿಸಿದ ಹೊಸ ನೀತಿ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ವೇಳೆ ವಾದ ಮಂಡಿಸಿದ ಚೇತನ್‌, ಬಳಕೆದಾರರ ಖಾಸಗಿ ಮಾಹಿತಿಯನ್ನು ಫೇಸ್‌ಬುಕ್‌ ಕಂಪನಿಗಳು ಬಳಸುವಂತಿಲ್ಲ ಎಂಬ ನೀತಿಯನ್ನು ಐರೋಪ್ಯ ದೇಶಗಳ ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ನೀಡುತ್ತಿದೆ. ಆದರೆ ಭಾರತದಲ್ಲಿ ಈ ಅಂಶವಿಲ್ಲ. ಏಕಪಕ್ಷೀಯವಾಗಿ ನೀತಿಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ವಾಟ್ಸ್‌ಆ್ಯಪ್‌ ಎಂಬುದು ಖಾಸಗಿ ಆ್ಯಪ್‌. ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು, ಬಿಡುವುದು ಬಳಕೆದಾರರಿಗೆ ಬಿಟ್ಟದ್ದು ಎಂದು ಜ.18ರ ವಿಚಾರಣೆ ವೇಳೆಯೇ ತಿಳಿಸಲಾಗಿದೆ ಎಂದು ನ್ಯಾಯಾಲಯ ಪುನರುಚ್ಚಾರ ಮಾಡಿತು.