ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸದಿದ್ದರೆ ಮುಂದೆ ಅಧಿಕಾರದಲ್ಲಿ ಉಳಿಯುವುದು ಕಷ್ಟ|  ಕೃಷಿ ಕಾಯ್ದೆಗಳ ವಾಪಸಿಯನ್ನು ಮಾತ್ರ ಕೇಳುತ್ತಿದ್ದೇವೆ| ದೇಶದ ಯುವಕರು ಕುರ್ಚಿ ವಾಪಸಿ ಕೇಳತೊಡಗಿದರೆ ಏನು ಮಾಡುತ್ತೀರಿ 

ಹರ್ಯಾಣ(ಫೆ.04): ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸದಿದ್ದರೆ ಮುಂದೆ ಅಧಿಕಾರದಲ್ಲಿ ಉಳಿಯುವುದು ಕಷ್ಟವಾಗಬಹುದು. ಈಗ ಕೃಷಿ ಕಾಯ್ದೆಗಳ ವಾಪಸಿಯನ್ನು ಮಾತ್ರ ಕೇಳುತ್ತಿದ್ದೇವೆ. ಮುಂದೆ ದೇಶದ ಯುವಕರು ಕುರ್ಚಿ ವಾಪಸಿ ಕೇಳತೊಡಗಿದರೆ ಏನು ಮಾಡುತ್ತೀರಿ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಹರ್ಯಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ‘ಮಹಾಪಂಚಾಯತ್‌’ ಎಂಬ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಟಿಕಾಯತ್‌, ‘ಸರ್ಕಾರ ಎಚ್ಚರಿಕೆಯಿಂದ ಕೇಳಿಸಿಕೊಳ್ಳಲಿ. ನಾವು ಇಲ್ಲಿಯವರೆಗೆ ಕಾಯ್ದೆ ವಾಪಸಿ ಮಾತ್ರ ಕೇಳಿದ್ದೇವೆ. ಇನ್ನುಮುಂದೆ ಯುವಕರು ಬಂಡೆದ್ದು ಕುರ್ಚಿ ವಾಪಸಿ ಕೇಳತೊಡಗಿದರೆ ಏನಾಗಬಹುದು’ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಸಮಾವೇಶದ ಬೃಹತ್‌ ವೇದಿಕೆ ಜನರ ಭಾರ ತಾಳಿಕೊಳ್ಳಲಾಗದೆ ಕುಸಿದು ಬಿದ್ದಿತು. ವೇದಿಕೆಯ ಮೇಲಿದ್ದ ಯಾರಿಗೂ ಗಾಯವಾಗಲಿಲ್ಲ. ಮುರಿದ ವೇದಿಕೆಯಲ್ಲೇ ಕಾರ್ಯಕ್ರಮ ನಡೆಯಿತು.