Amit Shah political retirement: ಸಹಕಾರದ ಮೂಲಕ ಸಮೃದ್ಧಿ ಯೋಜನೆಯು ರೈತರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಗ್ರಾಮೀಣ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಹಕಾರಿ ಕಾರ್ಮಿಕರ ಸಂವಾದಲ್ಲಿ ತಮ್ಮ ರಾಜಕೀಯ ನಿವೃತ್ತಿ ನಂತರದ ಜೀವನದ ಬಗ್ಗೆ ಮಾತನಾಡಿದ್ದಾರೆ. ಇಂದು ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಹಕಾರಿ ವಲಯಕ್ಕೆ ಸಂಬಂಧಿಸಿದ ಮಹಿಳೆಯರು ಮತ್ತು ಕಾರ್ಮಿಕರ ಜೊತೆಗಿನ ಸಂವಾದದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ತಾವು ರಾಜಕೀಯ ನಿವೃತ್ತಿ ಹೊಂದಿದ ನಂತರ ಏನು ಮಾಡಬೇಕು ಎಂಬುದರ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದರು.
ರಾಜಕೀಯ ನಿವೃತ್ತಿಯ ನಂತರದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಯ ಅಧ್ಯಯನಕ್ಕೆ ಮೀಸಲಿಡಲು ನಿರ್ಧರಿಸಿದ್ದೇನೆ ಎಂದು ಅಮಿತ್ ಶಾ ಹೇಳಿದರು. ನೈಸರ್ಗಿಕ ಕೃಷಿ ಅನ್ನೋದು ವೈಜ್ಞಾನಿಕ ಪ್ರಯೋಗವಿದ್ದಂತೆ. ರಾಸಾಯನಿಕ ರಸಗೊಬ್ಬರ ಬಳಸಿ ಬೆಳೆದಿರುವ ಗೋಧಿ ಸೇವನೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೈಸರ್ಗಿಕ ಕೃಷಿ ದೇಹವನ್ನು ರೋಗ ಮುಕ್ತವಾಗಿಡಲು ಸಾಧ್ಯವಾಗುತ್ತದೆ. ಹಾಗಾಗಿ ನೈಸರ್ಗಿಕ ಕೃಷಿ ಅನ್ನೋದು ಪ್ರಯೋಗ. ನೈಸರ್ಗಿಕ ಪದ್ದತಿ ಅಳವಡಿಕೆ ಮಾಡಿಕೊಂಡರೆ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಇದೇ ವೇಳೆ ಮಾತನಾಡಿದ ಅಮಿತ್ ಶಾ, ಸಹಕಾರದ ಮೂಲಕ ಸಮೃದ್ಧಿ ಎಂಬ ಯೋಜನೆಯು ರೈತರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ಗ್ರಾಮೀಣ ಆರ್ಥಿಕತೆಯ ಜೊತೆ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ರೈತರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ತಂದಿದ್ದಾರೆ ಎಂದು ಹೇಳಿದರು.
ಹೈನುಗಾರಿಕೆಯಿಂದ ವಾರ್ಷಿಕ 1 ಕೋಟಿ ಸಂಪಾದನೆ
ಸಂವಾದದಲ್ಲಿ ನಾನು ಚಿಕ್ಕವನಿದ್ದಾಗ ಬನಸ್ಕಂತ್‌ನಲ್ಲಿ ಜನರಿಗೆ ವಾರಕ್ಕೊಮ್ಮೆ ಸ್ನಾನ ಮಾಡಲು ನೀರು ಸಿಗುತ್ತಿತ್ತು. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಜನರಿಗೆ ಈ ವಿಷಯ ಗೊತ್ತಿರಲಿಲ್ಲ. ಬನಸ್ಕಾಂತ ಮತ್ತು ಕಚ್ ಅತಿ ಹೆಚ್ಚು ನೀರಿನ ಕೊರತೆಯನ್ನು ಹೊಂದಿರುವ ಗುಜರಾತಿನ ಜಿಲ್ಲೆಗಳಾಗಿವೆ. ಈ ಭಾಗದ ಒಂದು ಕುಟುಂಬ ಕೇವಲ ಹೈನುಗಾರಿಕೆಯಿಂದಲೇ ವಾರ್ಷಿಕವಾಗಿ 1 ಕೋಟಿ ರೂ. ಅಧಿಕ ಸಂಪಾದನೆ ಮಾಡುತ್ತಿದೆ. ಇದು ಅತಿದೊಡ್ಡ ಬದಲಾವಣೆಯಾಗಿದೆ ಎಂದು ಹೇಳಿದರು.
ಈ ಸಂವಾದದಲ್ಲಿ ಕಾರ್ಮಿಕರ ಪ್ರಶ್ನೆಗಳಿಗೆ ಅಮಿತ್ ಶಾ ಉತ್ತರಿಸಿದರು. ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ (PACS) ಸುಮಾರು 25 ಸಣ್ಣ ವ್ಯವಹಾರ ಮಾದರಿಗಳನ್ನು ನಾವು ಗುರುತಿಸಿದ್ದೇವೆ. ಎಲ್ಲಾ PACS ಗಳು ವಿವಿಧ ಚಟುವಟಿಕೆಗಳೊಂದಿಗೆ ಅವುಗಳನ್ನು ಸಂಪರ್ಕಿಸುವ ಮೂಲಕ ಅವುಗಳನ್ನು ಸಮೃದ್ಧಗೊಳಿಸುವತ್ತ ಕೆಲಸ ಮಾಡಬೇಕು ಎಂದು ಅಮಿತ್ ಶಾ ಕರೆ ನೀಡಿದರು.
ಕಳೆದ 4 ವರ್ಷಗಳಲ್ಲಿ ಕೇಂದ್ರ ಸರ್ಕಾರ 60 ಉಪಕ್ರಮಗಳನ್ನು ಕೈಗೊಂಡಿದೆ. ಸಹಕಾರಿ ಆಂದೋಲನವನ್ನು ಪಾರದರ್ಶಕ, ಅಭಿವೃದ್ಧಿ, ಜನಪ್ರಿಯಗೊಳಿಸಲು ಮತ್ತು ರೈತರು, ಮಹಿಳೆಯರು ಮತ್ತು ಯುವಕರ ಆದಾಯವನ್ನು ಹೆಚ್ಚಿಸಲು ಈ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಸಹಕಾರ ವಲಯದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಿದೆ. ಸುಮಾರು 30 ಕೋಟಿ ಜನರು ಸಹಕಾರಿ ಆಂದೋಲನದೊಂದಿಗೆ ಸೇರಿಕೊಂಡಿದ್ದಾರೆ. ಈ ಆಂದೋಲನದ ಮೂಲಕ ಸಹಕಾರಿ ಕಾರ್ಮಿಕರಿಗೆ ಗುಣಮಟ್ಟದ ತರಬೇತಿಯನ್ನು ನೀಡಲಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
