Asianet Suvarna News Asianet Suvarna News

ಉಪ ಸ್ಪೀಕರ್ ಸ್ಥಾನಕ್ಕಾಗಿ ಕಾಂಗ್ರೆಸ್ ಪಟ್ಟು; ಸರ್ವಪಕ್ಷ ಸಭೆಯಲ್ಲಿ ಏನೇನಾಯ್ತು? ಪ್ರತಿಪಕ್ಷಗಳ ಡಿಮ್ಯಾಂಡ್ ಏನು?

ಸಭೆಯಲ್ಲಿ 44 ರಾಜಕೀಯ ಪಕ್ಷಗಳ 55 ನಾಯಕರು ಪಾಲ್ಗೊಂಡಿದ್ದರು. ಆ.12ರವರೆಗೂ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ.

what happen all party meeting congress demand vice speaker post mrq
Author
First Published Jul 22, 2024, 8:00 AM IST | Last Updated Jul 22, 2024, 8:00 AM IST

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅಧ್ಯಕ್ಷತೆಯಲ್ಲಿ ಭಾನುವಾರ ಸರ್ವಪಕ್ಷಗಳ ಸಭೆ ನಡೆಯಿತು. ಈ ವೇಳೆ, ಪ್ರತಿಪಕ್ಷಗಳಿಗೆ ಉಪಸ್ಪೀಕರ್‌ ಸ್ಥಾನವನ್ನು ಬಿಟ್ಟುಕೊಡಬೇಕು ಎಂಬ ಆಗ್ರಹವನ್ನು ಕಾಂಗ್ರೆಸ್‌ ಮಂಡಿಸಿತು. ಜತೆಗೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೀಟ್‌ ವಿವಾದಗಳನ್ನೂ ಪ್ರಸ್ತಾಪ ಮಾಡಿತು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು, ಸಂಸತ್ತಿನ ಉಭಯ ಸದನಗಳಲ್ಲೂ ಸುಗಮ ಕಲಾಪಕ್ಕೆ ಪ್ರತಿಯೊಂದು ಪಕ್ಷಗಳು ಕೂಡ ಸಹಕಾರ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ಗೌರವ್‌ ಗೊಗೊಯ್‌ ಅವರು, ಸಂಸತ್ತಿನಲ್ಲಿ ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ರಾಜನಾಥ ಸಿಂಗ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಅಧಿವೇಶನದಲ್ಲಿ ಭಾಷಣ ಮಾಡಿದಾಗ ಪ್ರತಿಪಕ್ಷಗಳು ನಿರಂತರವಾಗಿ ಪ್ರತಿಭಟನೆ ಮಾಡಿದ್ದನ್ನು ಪ್ರಸ್ತಾಪಿಸಿ, ಸಂಸತ್ತಿನಲ್ಲಿ ಇಂಥದ್ದು ನಡೆಯಕೂಡದು ಎಂದು ಹೇಳಿದರು. ಸಭೆಯಲ್ಲಿ 44 ರಾಜಕೀಯ ಪಕ್ಷಗಳ 55 ನಾಯಕರು ಪಾಲ್ಗೊಂಡಿದ್ದರು ಎಂದು ಸಭೆಯ ಬಳಿಕ ರಿಜಿಜು ಅವರು ಮಾಹಿತಿ ನೀಡಿದರು.

ಇಂದು ಸಂಸತ್‌ ಅಧಿವೇಶನಶುರು: ನಾಳೆ ಕೇಂದ್ರ ಬಜೆಟ್‌!

ಈ ನಡುವೆ, ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರೆ, ತೆಲುಗುದೇಶಂ ಪಕ್ಷದ ಸಂಸದರು ಆ ವಿಚಾರವಾಗಿ ಮೌನಕ್ಕೆ ಜಾರಿದರು. ಬಿಜೆಡಿ ಕೂಡ ಒಡಿಶಾಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿತು ಎಂದು ಮೂಲಗಳು ವಿವರಿಸಿವೆ.

ಆ.12ರವರೆಗೂ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು, ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮಾಡಲಿದ್ದಾರೆ. 

ಹೋಟೆಲ್ ಬೋರ್ಡಲ್ಲಿ ಮಾಲೀಕರ ಹೆಸರು ಕಡ್ಡಾಯ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

Latest Videos
Follow Us:
Download App:
  • android
  • ios