ಮೋದಿ ಸರ್ಕಾರ ರಚನೆಗೂ ಮುನ್ನವೇ ಅಗ್ನಿವೀರ್ ಯೋಜನೆ ಬಗ್ಗೆ ಜೆಡಿಯು, ಎಲ್‌ಜೆಪಿ ಕ್ಯಾತೆ!
ಈ ಬಾರಿ ಕೇಂದ್ರದಲ್ಲಿ ರಚನೆಯಾಗಲಿರುವ ಸಮ್ಮಿಶ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಗೆ ತಂತಿಯ ಮೇಲಿನ ನಡಿಗೆಯಾಗಬಹುದು ಎಂಬ ವಿಶ್ಲೇಷಣೆಗಳ ನಡುವೆಯೇ, ಹಿಂದಿನ ಮೋದಿ ಸರ್ಕಾರದ ಪ್ರಮುಖ ಯೋಜನೆಯೊಂದಕ್ಕೆ ಮೈತ್ರಿಕೂಟದ ಪಕ್ಷಗಳಿಂದ ಅಪಸ್ವರ ಕೇಳಿಬಂದಿದೆ.
ನವದೆಹಲಿ (ಜೂ.07): ಈ ಬಾರಿ ಕೇಂದ್ರದಲ್ಲಿ ರಚನೆಯಾಗಲಿರುವ ಸಮ್ಮಿಶ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಗೆ ತಂತಿಯ ಮೇಲಿನ ನಡಿಗೆಯಾಗಬಹುದು ಎಂಬ ವಿಶ್ಲೇಷಣೆಗಳ ನಡುವೆಯೇ, ಹಿಂದಿನ ಮೋದಿ ಸರ್ಕಾರದ ಪ್ರಮುಖ ಯೋಜನೆಯೊಂದಕ್ಕೆ ಮೈತ್ರಿಕೂಟದ ಪಕ್ಷಗಳಿಂದ ಅಪಸ್ವರ ಕೇಳಿಬಂದಿದೆ. ಹೊಸ ಸರ್ಕಾರ ರಚನೆಯಲ್ಲಿ ಅತ್ಯಂತ ಪ್ರಮುಖವಾಗಿರುವ ಜೆಡಿಯು ಮತ್ತು ಎಲ್‌ಜೆಪಿ ಪಕ್ಷಗಳು ಸರ್ಕಾರ ರಚನೆಗೆ ಮುನ್ನವೇ ಅಗ್ನಿವೀರ್ ಯೋಜನೆ ಬಗ್ಗೆ ಕ್ಯಾತೆ ತೆಗೆದಿವೆ.
ಸೇನೆಗೆ ಯೋಧರನ್ನು ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಬಹುಚರ್ಚಿತ ಅಗ್ನಿವೀರ್ ಯೋಜನೆಗೆ ಸಮಾಜದ ಹಲವು ವಲಯಗಳಲ್ಲಿ ವಿರೋಧವಿದೆ. ಹೀಗಾಗಿ ಯೋಜನೆ ಕುರಿತು ಪುನರ್ ಪರಿಶೀಲನೆ ನಡೆಸುವುದು ಸೂಕ್ತ. ಯೋಜನೆಯಲ್ಲಿ ಏನೇನು ಲೋಪದೋಷ ಇದೆ ಎಂದು ಪರಿಶೀಲಿಸಿ ಅವುಗಳನ್ನು ಸರಿಪಡಿಸಬೇಕು ಎಂದು ಜೆಡಿಯು ನಾಯಕ ಕೆ.ಸಿ.ತ್ಯಾಗಿ ಮತ್ತು ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಅಲ್ಲದೆ ಇಂಡಿಯಾ ಮೈತ್ರಿಕೂಟ ಬಹುವಾಗಿ ಪ್ರತಿಪಾದಿಸಿದ್ದ ಜಾತಿಗಣತಿಗೆ ಬೆಂಬಲವಿದೆ ಎಂದು ಉಭಯ ಪಕ್ಷಗಳು ಹೇಳಿವೆ.
ಚನ್ನಪಟ್ಟಣಕ್ಕೆ ಡಿಕೆಸು ನಿಲ್ಲಿಸುವ ಚಿಂತನೆಯಿಲ್ಲ: ಡಿ.ಕೆ.ಶಿವಕುಮಾರ್
ವಿಶೇಷವೆಂದರೆ, ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಅಗ್ನಿವೀರ್ ಯೋಜನೆ ರದ್ದು ಮತ್ತು ದೇಶವ್ಯಾಪಿ ಜಾತಿಗಣತಿ ಪರ ಇದೆ. ಇನ್ನೊಂದೆಡೆ ಬಿಜೆಪಿ ಈ ಅಗ್ನಿವೀರ್ ಪರ ಮತ್ತು ಜಾತಿ ಗಣತಿಗೆ ವಿರುದ್ಧವಿತ್ತು. ಅದರ ಬೆನ್ನಲ್ಲೇ ಇದೀಗ ಎನ್‌ಡಿಎ ಕೂಟದ ಎರಡು ಪಕ್ಷಗಳು ವಿಪಕ್ಷಗಳ ಅಜೆಂಡಾವನ್ನು ಬೆಂಬಲಿಸಿ ಮಾತನಾಡಿವೆ.ಇದೇ ವೇಳೆ ಬಿಜೆಪಿಯ ಇತರೆ ಪ್ರಮುಖ ವಿಷಯಗಳಾದ ಏಕರೂಪ ನಾಗರಿಕ ಸಂಹಿತೆ ಮತ್ತು ಒಂದು ದೇಶ, ಒಂದು ಚುನಾವಣೆ ಯೋಜನೆಗಳ ಕುರಿತು ನಮಗೆ ಯಾವುದೇ ಆಕ್ಷೇಪ ಇಲ್ಲ ಎಂದು ತ್ಯಾಗಿ ಹೇಳಿದ್ದಾರೆ.ಜೆಡಿಯು ಈಗಾಗಲೇ ಲೋಕಸಭೆಯ ಸ್ಪೀಕರ್ ಸ್ಥಾನ, ಕೃಷಿ, ಗ್ರಾಮೀಣಾಭಿವೃದ್ಧಿ, ರೈಲ್ವೆ, ಹಣಕಾಸು ಖಾತೆಗೆ ಮತ್ತು ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.