ನವದೆಹಲಿ(ಜು.10): ಲಡಾಖ್‌ನ ಬಹುತೇಕ ಹತ್ತು ಕಡೆಗಳಲ್ಲಿ ಗಡಿ ಭಾಗಗಳ ಮುಂದಿರುವ ಬಫರ್‌ ಜೋನ್‌ ದಾಟಿ ಒಳಗೆ ಬಂದಿದ್ದ ಚೀನಿ ಸೈನಿಕರು, ಸಾಮಾನು ಮತ್ತು ವಾಹನಗಳ ಜೊತೆ ಹಿಂದೆ ಹೊರಟಿದ್ದಾರೆ. ಬಹುತೇಕ ಕಡೆಗಳಲ್ಲಿ ಭಾರತೀಯ ಸೈನಿಕರೇ ಹೋಗಿ ಪರಿಶೀಲನೆ ನಡೆಸಿದ್ದಾರೆ.

ಸೋಮವಾರ ಗಲ್ವಾನ್‌ ನದಿಯ ಪೆಟ್ರೋಲಿಂಗ್‌ ಪಾಯಿಂಟ್‌-14, ಮಂಗಳವಾರ ಹಾಟ್‌ಸ್ಟ್ರಿಂಗ್ಸ್‌ ಬಳಿಯ ಪಾಯಿಂಟ್‌-15 ಮತ್ತು ಗೋಗ್ರಾ ಪೋಸ್ಟ್‌ ಬಳಿಯ ಪಾಯಿಂಟ್‌ ನಂಬರ್‌ 17ರಿಂದ 1.8ರಿಂದ 2 ಕಿಲೋಮೀಟರ್‌ನಷ್ಟುಚೀನಿ ಸೈನಿಕರು ಹಿಂದೆ ಸರಿದಿದ್ದಾರೆ.

ಬಫರ್‌ ಜೋನ್‌ನ 2 ಕಿಲೋಮೀಟರ್‌ ಹಿಂದೆ 30ಕ್ಕೂ ಕಡಿಮೆ ಸೈನಿಕರು, 4 ಕಿಲೋಮೀಟರ್‌ ಹಿಂದೆ 50ಕ್ಕೂ ಕಡಿಮೆ ಸೈನಿಕರು ಮತ್ತು ಅದರ 2 ಕಿಲೋಮೀಟರ್‌ ಹಿಂದೆ ಸಾಮಾನ್ಯ ಗಡಿ ಪೋಸ್ಟ್‌ಗಳು ಇರಬೇಕೆಂದು ಮಾತುಕತೆಯಲ್ಲಿ ಒಪ್ಪಂದವಾಗಿತ್ತು. ಅದರಂತೆ ಎರಡೂ ಸೇನೆಗಳು ಹಿಂದೆ ಸರಿಯುತ್ತಿವೆ. ಆದರೆ ಗಲ್ವಾನ್‌ಗಿಂತ ಮೊದಲು ಘರ್ಷಣೆ ನಡೆದ ಉಪ್ಪು ನೀರಿನ ಸರೋವರ ಪೆಂಗೊಂಗ್‌ ತ್ಸೋನಲ್ಲಿ ಮಾತ್ರ ಚೀನಿ ಸೇನೆ ಫಿಂಗರ್‌ 4ನಿಂದ 5 ವರೆಗೆ ಮಾತ್ರ ಹಿಂದೆ ಸರಿದಿದ್ದು, 8ರ ವರೆಗೆ ಹೋಗುವುದಾಗಿ ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ.

ಕಳೆದ ಒಂದು ತಿಂಗಳಲ್ಲಿ 40 ಸಾವಿರ ಸೈನಿಕರನ್ನು ದೂರದ ಪ್ರದೇಶಗಳಿಂದ ಅಕ್ಸಾಯ್‌ಚಿನ್‌ ಬಳಿ ತಂದಿರುವ ಚೀನಿ ಸೇನೆ ಯಾವಾಗ ಮನಸ್ಸು ಬದಲಾಯಿಸುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ಭಾರತೀಯ ಸೇನೆ 2 ಬ್ರಿಗೇಡ್‌ಗಳನ್ನು ಚಳಿಗಾಲದವರೆಗೆ ಅಲ್ಲೇ ಮುಂದುವರೆಸಲು ತೀರ್ಮಾನ ತೆಗೆದುಕೊಂಡಿದೆ. ಆದರೆ ಘರ್ಷಣೆ ತಳ್ಳಿಹಾಕಲು ಬಫರ್‌ ಝೋನ್‌ನಲ್ಲಿ ಸದ್ಯಕ್ಕೆ ಪೆಟ್ರೋಲಿಂಗ್‌ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ಆದರೆ ನಿರ್ದಿಷ್ಟವಾಗಿ ಗಡಿ ಘರ್ಷಣೆಯಿಂದ ಚೀನಾ ಸಾಧಿಸಿದ್ದೇನು ಎಂದು ಸ್ಪಷ್ಟವಾಗುವವರೆಗೆ ನಾವು ಗೆದ್ದೆವು, ಸೋತೆವು ಅಥವಾ ಮೋದಿ ಹೇಳಿಕೆಯಿಂದ ಚೀನಾ ಬೆದರಿತು ಎಂದೆಲ್ಲ ಹೇಳುವುದು ತಪ್ಪಾದೀತು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ