ವೈದ್ಯೆ ರೇಪ್ ಬೆನ್ನಲ್ಲೇ ಪ.ಬಂಗಾಳದಲ್ಲಿ ಮತ್ತೊಂದು ಭೀಕರ ಘಟನೆ; 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ!
ಪ.ಬಂಗಾಳ ರಾಜಧಾನಿಯಲ್ಲಿ ಸಂಭವಿಸಿದ್ದ ವೈದ್ಯೆಯ ರೇಪ್ ಹಾಗೂ ಕೊಲೆಯ ಬೆನ್ನಲ್ಲೇ, ರಾಜ್ಯದ ದಕ್ಷಿಣ 24-ಪರಗಣ ಜಿಲ್ಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸ್ ಔಟ್‌ಪೋಸ್ಟ್‌ಗೆ ಬೆಂಕಿ ಹಚ್ಚಿದ್ದಾರೆ.
ಕೋಲ್ಕತಾ (ಅ.6) : ಪ.ಬಂಗಾಳ ರಾಜಧಾನಿಯಲ್ಲಿ ಸಂಭವಿಸಿದ್ದ ವೈದ್ಯೆಯ ರೇಪ್ ಹಾಗೂ ಕೊಲೆಯ ಬೆನ್ನಲ್ಲೇ, ರಾಜ್ಯದ ದಕ್ಷಿಣ 24-ಪರಗಣ ಜಿಲ್ಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸ್ ಔಟ್‌ಪೋಸ್ಟ್‌ಗೆ ಬೆಂಕಿ ಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.ಶುಕ್ರವಾರ ಸಂಜೆಯಿಂದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಶನಿವಾರ ಮುಂಜಾನೆ ಜಯನಗರ ಪ್ರದೇಶದ ಜವುಗು ಭೂಮಿಯಿಂದ ಬಾಲಕಿಯ ಶವ ಪತ್ತೆಗಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು, ‘ಟ್ಯೂಶನ್‌ನಿಂದ ಮರಳುತ್ತಿದ್ದ ಬಾಲಕಿಯನ್ನು ದುಷ್ಕರ್ಮಿಗಳು ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಶಕ್ತಿ ಮಾತೆಯಾದ ದುರ್ಗಾ ಪೂಜೆ ವೇಳೆಯೇ ಈ ಘಟನೆ ನಡೆದಿದ್ದನ್ನು ನೋಡಿದರೆ ಬಂಗಾಳವು ಮಹಿಳೆಯರಿಗೆ ಸುರಕ್ಷಿತವಾಗಿಲ್ಲ ಎಂಬುದು ಸಾಬೀತಾಗಿದೆ. ಮಹಿಳೆಯರ ರಕ್ಷಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.
ಈ ನಡುವೆ, ಬಿಜೆಪಿ ನಾಯಕರ ತೀವ್ರ ಒತ್ತಾಯದ ಮೇರೆಗೆ ಪರಗಣ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡದೇ ಕೋಲ್ಕತಾಗೆ ಶವ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಪೋಸ್ಟ್ ಮಾರ್ಟಂ ನಡೆಯಲಿದೆ.
ಹೊರಠಾಣೆಗೆ ಬೆಂಕಿ:ಶನಿವಾರ ಬಾಲಕಿ ಶವ ಪತ್ತೆ ಬಳಿಕ ಗುಂಪೊಂದು ಮಹಿಸ್ಮರಿ ಪೊಲೀಸ್ ಔಟ್‌ಪೋಸ್ಟ್‌ಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಹೊರಠಾಣೆ ಹೊರಗೆ ನಿಲ್ಲಿಸಿದ್ದ ಹಲವಾರು ವಾಹನಗಳನ್ನು ಧ್ವಂಸಗೊಳಿಸಿದೆ.
ಪೊಲೀಸ್ ಪೇದೆಗಳಿಗೆ ಠಾಣೆಯಿಂದ ಹೊರಹೋಗುವಂತೆ ಬಲವಂತ ಮಾಡಿದೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೂಡಿ ಹಾಕಲು ಯತ್ನಿಸಿದೆ.ಬಳಿಕ ಈ ಪ್ರದೇಶಕ್ಕೆ ಹೆಚ್ಚಿನ ಪೊಲೀಸ್ ಪಡೆಗಳನ್ನು ಕಳಿಸಲಾಗಿದ್ದು, ಗುಂಪನ್ನು ಹತ್ತಿಕ್ಕಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಿ ಸ್ಥಿತಿಯನ್ನು ನಿಯಂತ್ರಿಸಿವೆ.
ಪೊಲೀಸರ ನಿರ್ಲಕ್ಷ್ಯ- ಆರೋಪ:
‘ಬಾಲಕಿ ನಾಪತ್ತೆ ಆಗಿದ್ದಾಳೆ ಎಂದು ಶುಕ್ರವಾರವೇ ಕುಟುಂಬ ಸದಸ್ಯರು ಪ್ರದೇಶದ ಮಹಿಸ್ಮರಿ ಔಟ್‌ಪೋಸ್ಟ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಆದರೆ ಪೊಲೀಸರು ದೂರಿನ ಮೇರೆಗೆ ತಕ್ಷಣ ಕ್ರಮ ಕೈಗೊಳ್ಳಲಿಲ್ಲ. ಕೋಲ್ಕತಾ ವೈದ್ಯೆಯ ಮೇಲೆ ಅತ್ಯಾಚಾರ ಆದಾಗ ಹೇಗೆ ನಿರ್ಲಕ್ಷ್ಯ ತಾಳಿ ಸುಮ್ಮನಿದ್ದರೋ ಅದೇ ರೀತಿ ಈಗಲೂ ವರ್ತಿಸಿದ್ದಾರೆ. ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದರೆ ಬಾಲಕಿಯನ್ನು ಉಳಿಸಬಹುದಿತ್ತು’ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
‘ಇದು ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ. ತಪ್ಪಿತಸ್ಥರ ಬಂಧನದವರೆಗೂ ನಾವು ಸುಮ್ಮನಿರಲ್ಲ. ಪ್ರತಿಭಟನೆ ನಡೆಸುತ್ತೇವೆ ಹಾಗೂ ದೂರು ಸ್ವೀಕರಿಲು ಹಿಂದೇಟು ಹಾಕಿದ ಪೊಲೀಸರ ಮೇಲೂ ಕ್ರಮಕ್ಕೆ ಆಗ್ರಹಿಸುತ್ತೇವೆ’ ಎಂದಿದ್ದಾರೆ.ಆದರೆ ಪೊಲೀಸ್ ಅಧಿಕಾರಿಯೊಬ್ಬರು ಈ ಆರೋಪ ನಿರಾಕರಿಸಿ, ‘ತಕ್ಷಣವೇ ಕ್ರಮ ಕೈಗೊಂಡೆವು. ಶುಕ್ರವಾರ ರಾತ್ರಿ 9ಕ್ಕೆ ಎಫ್‌ಐಆರ್ ದಾಖಲಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ ಒಬ್ಬನನ್ನು ಬಂಧಿಸಿದ್ದೇವೆ. ನಾವು ಸಂತ್ರಸ್ತೆಯ ಕುಟುಂಬದೊಂದಿಗೆ ಇದ್ದೇವೆ’ ಎಂದಿದ್ದಾರೆ.
ಶಾಸಕನನ್ನೂ ಓಡಿಸಿದ ಜನ:
ಸ್ಥಳೀಯ ಕುಲ್ತಾಳಿ ಕ್ಷೇತ್ರದ ಟಿಎಂಸಿ ಶಾಸಕ ಗಣೇಶ್ ಮಂಡಲ್ ಅವರು ಸ್ಥಳಕ್ಕೆ ಹೋದಾಗ ಅವರನ್ನು ಬೆನ್ನಟ್ಟಿ ಜನ ಓಡಿಸಿದ ಘಟನೆಯೂ ನಡೆಯಿತು. ಜಯನಗರ ಟಿಎಂಸಿ ಸಂಸದೆ ಪ್ರತಿಮಾ ಮಂಡಲ್ ವಿರುದ್ಧ ‘ಗೋ ಬ್ಯಾಕ್” ಎಂದು ಜನ ಘೋಷಣೆ ಕೂಗಿದರು. ಬಾಲಕಿಯ ಶವ ಇಟ್ಟಿದ್ದ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಸಂಸದ ಅಗ್ನಿಮಿತ್ರ ಪಾಲ್ ಅವರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು.‘ಬಾಲಕಿಯ ಶವದ ಮರಣೋತ್ತರ ಪರೀಕ್ಷೆಯನ್ನು ತಟಸ್ಥ ಆಸ್ಪತ್ರೆಯಲ್ಲಿ ನಡೆಸಬೇಕು. ಇದರಿಂದ ಸಾವಿನ ಹಿಂದಿನ ಕಾರಣ ತಿಳಿಯಲಿದೆ. ಇಲ್ಲದಿದ್ದರೆ ಪ್ರಕರಣವನ್ನು ಮುಚ್ಚಿಹಾಕಲು ಟಿಎಂಸಿ ಯತ್ನಿಸಲಿದೆ. ಪ್ರಕರಣದ ನ್ಯಾಯಾಂಗ ತನಿಖೆಯ ಅಗತ್ಯವಿದೆ’ ಎಂದು ಪಾಲ್ ಆಗ್ರಹಿಸಿದರು.ಕೋಲ್ಕತಾದ ಸಾಲ್ಟ್ ಲೇಕ್‌ನಲ್ಲಿ ಬಿಜೆಪಿಗರು, ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿ ಪೊಲೀಸರು ಹಾಗೂ ಮಮತಾಗೆ ಧಿಕ್ಕಾರ ಕೂಗಿದರು.