ಶತಮಾನದ ಚಳಿಗೆ ರಾಜಧಾನಿ ಗಡಗಡ! ಕನಿಷ್ಠ ತಾಪಮಾನ ದಾಖಲು
ರಾಜಧಾನಿ ದೆಹಲಿ ಹಾಗೂ ಉತ್ತರ ಭಾರತದ ನಗರಗಳು ಈಗ ಕೊರೆಯುವ ದಾಖಲೆ ಚಳಿಯಿಂದ ತತ್ತರಿಸುತ್ತಿವೆ. ಪಾಶ್ಚಾತ್ಯ ಹವಾಮಾನ ವೈಪರಿತ್ಯದ ಕಾರಣ ದಿಲ್ಲಿಯ ಗರಿಷ್ಠ ಉಷ್ಣಾಂಶವೇ 9.4ಕ್ಕೆ ತಗ್ಗಿದೆ.
ನವದೆಹಲಿ [ಡಿ.31]: ಇತ್ತೀಚೆಗೆ ಅತಿಯಾದ ಹೊಗೆಮಾಲಿನ್ಯದಿಂದ ತತ್ತರಿಸಿದ್ದ ರಾಜಧಾನಿ ದೆಹಲಿ ಹಾಗೂ ಉತ್ತರ ಭಾರತದ ನಗರಗಳು ಈಗ ಕೊರೆಯುವ ದಾಖಲೆ ಚಳಿಯಿಂದ ತತ್ತರಿಸುತ್ತಿವೆ. ಪಾಶ್ಚಾತ್ಯ ಹವಾಮಾನ ವೈಪರಿತ್ಯದ ಕಾರಣ ಸೋಮವಾರ ದಿಲ್ಲಿಯ ಗರಿಷ್ಠ ಉಷ್ಣಾಂಶವೇ 9.4ಕ್ಕೆ ತಗ್ಗಿದೆ. ಇದು 1901ರ ನಂತರ ದಿಲ್ಲಿ ಕಂಡಿರುವ ಅತಿ ಕಡಿಮೆ ಗರಿಷ್ಠ ತಾಪಮಾನವಾಗಿದ್ದು, ‘ಅತಿ ಚಳಿಯ ಡಿಸೆಂಬರ್ ದಿನ’ ಎನ್ನಿಸಿಕೊಂಡಿದೆ. ಇನ್ನೂ ವಿಶೇಷವೆಂದರೆ ಕಳೆದ ಕೆಲ ದಿನಗಳಿಂದ ದೆಹಲಿಯ ತಾಪಮಾನವು ಅತ್ಯಂತ ಚಳಿ ವಾತಾವರಣ ಹೊಂದಿರುವ ಹಿಮಾಲಯ ತಪ್ಪಲಿನ ಶಿಮ್ಲಾ ಮತ್ತು ಮಸೂರಿ ಪ್ರದೇಶಗಳಿಗಿಂತಲೂ ಕಡಿಮೆ ಉಷ್ಣಾಂಶ ದಾಖಲಿಸುತ್ತಿದೆ.
ಇದೇ ವೇಳೆ, ಉತ್ತರ ಭಾರತದ ಇತರ ನಗರಗಳೂ ಚಳಿಯಿಂದ ಥರಗುಟ್ಟಿವೆ. ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರ ‘ಮೈನಸ್ 6.5’ ಡಿಗ್ರಿ ತಾಪಮಾನ ದಾಖಲಿಸಿದೆ. ದಾಲ್ ಸರೋವರ ಹೆಪ್ಪುಗಟ್ಟಿದೆ. ಜಮ್ಮುವಿನಲ್ಲಿ 2.4 ಡಿಗ್ರಿ ತಾಪಮಾನವಿದ್ದು, ನಗರ ಕಂಡಿರುವ ದಶಕದ ಅತಿ ಕನಿಷ್ಠ ತಾಪಮಾನವಾಗಿದೆ. ಇನ್ನು ರಾಜಸ್ಥಾನದ ಸಿಕಾರ್‌ನಲ್ಲಿ - 0.5 ಡಿ.ಸೆನಷ್ಟುತಾಪಮಾನ ದಾಖಲಾಗಿದೆ.
ಕೊರೆಯುವ ಚಳಿಯಿಂದ ವಾಯುಗುಣಮಟ್ಟದ ಮೇಲೂ ಪರಿಣಾಮವಾಗಿದೆ. ದಿಲ್ಲಿಯ ವಾಯುಗುಣಮಟ್ಟಸೂಚ್ಯಂಕ ಸೋಮವಾರ ಬೆಳಗ್ಗೆ 9.38ಕ್ಕೆ 448ಕ್ಕೆ ಏರಿದ್ದು, ಇದು ‘ಗಂಭೀರ’ ಸೂಚ್ಯಂಕ ಎನ್ನಿಸಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಬೆಂಕಿ..
‘ವಾಡಿಕೆಯ ತಾಪಮಾನಕ್ಕಿಂತ ಈ ದಿನದ ಉಷ್ಣಾಂಶ ಅರ್ಧದಷ್ಟುಕಡಿಮೆಯಾಗಿದೆ. ಇದು 1901ರ ನಂತರದ ಡಿಸೆಂಬರ್ ತಿಂಗಳಿನ ಅತಿ ಕಡಿಮೆ ಗರಿಷ್ಠ ತಾಪಮಾನದ ದಿನವಾಗಿದೆ’ ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.
ಇದೇ ವೇಳೆ, ‘ಈ ಡಿಸೆಂಬರ್‌ನಲ್ಲಿ ಗರಿಷ್ಠ ತಾಪಮಾನ 19ಕ್ಕಿಂತ ಕಡಿಮೆ ಇದೆ. 1997ರಲ್ಲಿ 17.3 ಡಿಗ್ರಿ ಇತ್ತು. ಹೀಗಾಗಿ 1901ರ ನಂತರದ 2ನೇ ಅತಿ ಕಡಿಮೆ ಗರಿಷ್ಠ ತಾಪಮಾನ ಕಂಡ ಮಾಸ ಇದಾಗಿದೆ’ ಎಂದೂ ಹವಾಮಾನ ಇಲಾಖೆ ಹೇಳಿದೆ.