ಬಿಜೆಪಿ ರಾಜ್ಯಾಧ್ಯಕ್ಷನಿಂದ ವಿವಾದಾತ್ಮಕ ಹೇಳಿಕೆ| ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಕಾಲಿಗೆ ಆದ ಗಾಯವನ್ನು ತೋರಿಸಲು ಮೋಟುದ್ದದ ಬರ್ಮುಡಾ ಚಡ್ಡಿ ಧರಿಸಲಿ
ಕೋಲ್ಕತಾ(ಮಾ.25): ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಕಾಲಿಗೆ ಆದ ಗಾಯವನ್ನು ತೋರಿಸಲು ಮೋಟುದ್ದದ ಬರ್ಮುಡಾ ಚಡ್ಡಿ ಧರಿಸಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಸೋಮವಾರ ಇಲ್ಲಿನ ಪುರುಲಿಯಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಭಾಗಿಯಾಗಿದ್ದ ಘೋಷ್, ‘ಬ್ಯಾಂಡೇಜ್ ಸುತ್ತಿದ ಕಾಲನ್ನು ಅವರು ಎಲ್ಲರಿಗೂ ತೋರಿಸುತ್ತಿದ್ದಾರೆ. ಒಂದು ಕಾಲು ಮಾತ್ರ ಹೊರಗೆ ಕಾಣುವಂತೆ ಸೀರೆ ಉಡುತ್ತಿದ್ದಾರೆ. ಹೀಗೆ ಸೀರೆ ಉಡುವುದನ್ನು ನಾನು ನೋಡಿಲ್ಲ. ಕಾಲನ್ನು ತೋರಿಸಲೇ ಬೇಕು ಅಂದುಕೊಂಡಿದ್ದರೆ ಒಳ್ಳೆಯ ಬರ್ಮುಡಾ ಚಡ್ಡಿ ಧರಿಸಬಹುದು. ಅದರಿಂದ ಕಾಲು ಚೆನ್ನಾಗಿ ಕಾಣುತ್ತದೆ’ ಎಂದು ಹೇಳಿದ್ದಾರೆ.
ಈ ಬೆನ್ನಲ್ಲೇ ‘ಕೀಳು ಹೇಳಿಕೆ’ ಎಂದು ತೃಣಮೂಲ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿದೆ. ಘೋಷ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
